Advertisement

ವಿಜ್ಞಾನದ ಸೂತ್ರದಡಿ ಗರ್ಭಗುಡಿಯ ಸೂರ್ಯ ಮಜ್ಜನ

12:44 PM Jan 14, 2022 | Team Udayavani |

ದೇವಾಲಯ ಸಂಸ್ಕೃತಿಯೆಂಬುದು ಭಾರತೀಯ ಪರಿಸರದಲ್ಲಿ ಬೆಳೆಯುವ ಎಲ್ಲರಿಗೂ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಡುವಷ್ಟು ವ್ಯಾಪಕವಾದ್ದು. ದೇಶದ ಎಲ್ಲ ಪ್ರಾಚೀನ ದೇವಾಲಯಗಳು ಒಂದಿಲ್ಲೊಂದು ಕಾರಣಕ್ಕೆ ಸಮಾಜದ ಎಲ್ಲರನ್ನೂ ಸೋಕಿವೆಯೆನ್ನಬಹುದು. ಅನ್ನದಾನ ಮತ್ತು ವಿದ್ಯಾದಾನದ ಕಾರಣಕ್ಕೆ ಕೆಲವು ದೇವಾಲಯಗಳು ಪ್ರಸಿದ್ಧವಾದರೆ ಇನ್ನು ಕೆಲವು ದೇವಾಲಯಗಳು ಆಸ್ತಿಕರ ಶ್ರದ್ಧಾಕೇಂದ್ರಗಳಾ ಗಿರುವುದರಿಂದ ಪ್ರಸಿದ್ಧಿ ಪಡೆದಿವೆ. ಕಲೆ, ನಿರ್ಮಾಣ ಕೌಶಲ, ವಾಸ್ತುಶೈಲಿ ಮತ್ತು ಆಗಮಿಕ ವೈಶಿಷ್ಟ್ಯದ ಕಾರಣಕ್ಕೆ ವ್ಯಾಪಕ ಪ್ರಸಿದ್ಧಿ ಪಡೆದ ಪ್ರಾಚೀನ ದೇಗುಲಗಳು ಹಲವಾರು. ಇವೆಲ್ಲವನ್ನೂ ಒಟ್ಟಂದದಲ್ಲಿ ನೋಡುವಾಗ ದೇವಾಲಯವೆಂಬುದು ಪ್ರಾರ್ಥನೆಗೆ ಮಾತ್ರ ಮೀಸಲಾದ ಭವನವಾಗಿರದೆ ಮಾನವ ಕೌಶಲದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಅಪೂರ್ವ ನಿರ್ಮಿತಿ ಆಗಿರುವುದೂ ಅಷ್ಟೇ ದಿಟ.

Advertisement

ಭಾರತದ ಹಲವಾರು ಪ್ರಾಕ್ತನ ದೇವಾಲಯಗಳು ಮೊದಲ ಭೇಟಿಯಲ್ಲಿ ಅರ್ಥವಾಗುವಂಥವಲ್ಲ. ಮೊದಲ ಭೇಟಿಯಲ್ಲಿ ಕಲೆಯ ಕಾರಣಕ್ಕೆ ಅವು ಅನನ್ಯವೆನ್ನಿಸಬಹುದು, ಅವುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕೌಶಲ ನಮ್ಮನ್ನು ಸೆಳೆಯ ಬಹುದು, ಆ ದೇವಾಲಯದ ಪರಿಸರದಲ್ಲಿನ ಕಂಪನ ತರಂಗಗಳು ನಮ್ಮನ್ನು ಸೋಕಿ ಮನಸ್ಸಿಗೆ ಅವ್ಯಕ್ತವಾದ ಮುದ ವನ್ನೀಯಬಹುದು- ಆದರೆ ದೇವಾಲಯಗಳ ಮಹತ್ತು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿ ಜ್ಯಾಮಿತಿಯಿದೆ, ಗಣಿತೀಯ ಪ್ರಕ್ರಿಯೆಗಳ ಆಧಾರದಲ್ಲಿ ಕಟ್ಟಿದ ಕಟ್ಟೋಣಕ್ಕೆ ಭೂಮಿಯ ಚಲನೆಯೊಡನೆ ಸಾಧ್ಯವಾಗುವ ಸ್ಪಂದನವಿದೆ, ಪ್ರಕೃತಿಯೊಂದಿಗೆ ಸಾಧ್ಯವಾಗುವ ಸಂವಾದವಿದೆ.

ಭಾರತೀಯ ಚಿಂತನೆಯಲ್ಲಿ ಕಾಲ: ಕಾಲದ ಪರಿಕಲ್ಪನೆ, ಅದರ ಅಳತೆ, ಅದರ ಅಗಾಧತೆಯನ್ನು ಕುರಿತಾಗಿ ಭಾರತ ದಲ್ಲಿ ನಡೆದಷ್ಟು ವಿಸ್ತಾರವಾದ, ಬಹುಮುಖೀಯಾದ ಮತ್ತು ಸುದೀರ್ಘ‌ವಾದ ಜಿಜ್ಞಾಸೆ ಪ್ರಪಂಚದ ಇನ್ನಾವ ನಾಗರಿಕತೆ ಯಲ್ಲೂ ನಡೆಯಲಿಲ್ಲವೆಂದು ನಿಶ್ಚಯವಾಗಿ ಹೇಳಬಹುದು. ಕಾಲದ ಕುರಿತಾದ ನಮ್ಮ ಪಾರಂಪರಿಕ ಅರಿವು ನಮ್ಮ ನಡೆ, ನುಡಿ, ಜೀವನವನ್ನು ಕಾಣುವ ರೀತಿ, ನಮ್ಮ ದರ್ಶನಶಾಸ್ತ್ರ, ಬದುಕಿನ ರೀತಿ- ಹೀಗೆ ಎಲ್ಲವನ್ನೂ ಆವರಿಸಿವೆ. ನಮ್ಮ ದೇಗುಲಗಳ ನಿರ್ಮಾಣ ಶೈಲಿಯೂ ಇದಕ್ಕೆ ಹೊರತಲ್ಲ.

ನಮ್ಮಲ್ಲಿ ಕಾಲವು ಚಕ್ರಗತಿಯದ್ದು. ಅಂದರೆ ಮತ್ತೆ ಮತ್ತೆ ಸಂಭವಿಸುವ ಆವರ್ತನಶೈಲಿಯದ್ದು. ಹಾಗಾಗಿ ನಮ್ಮಲ್ಲಿ ನಾಲ್ಕು ಯುಗಗಳು, ಯುಗಗಳಲ್ಲಿನ ಘಟನೆಗಳು, ಸೃಷ್ಟಿಯ ಕುರಿತಾಗಿ ನಾವು ಕಂಡುಕೊಂಡ ಉತ್ತರಗಳೆಲ್ಲವೂ ಕಾಲದ ಚಕ್ರಗತಿಯನ್ನು ಆಧರಿಸಿಯೇ ಇವೆ. ಯುರೋಪಿನ ದೃಷ್ಟಿ ಯಂತೆ ಕಾಲವು ನಮ್ಮಲ್ಲಿ ಏಕಮುಖೀಯ ಸರಳರೇಖಾತ್ಮಕ ವಾದ ವಿದ್ಯಮಾನವಲ್ಲ. ಪ್ರಭವ ವಿಭವ ಇತ್ಯಾದಿ ಕ್ಷಯ ದವರೆಗೆ ಅರುವತ್ತು ಸಂವತ್ಸರಗಳನ್ನು ಎಣಿಸಿ ಮತ್ತೆ ಅರವ ತ್ತೂಂದನೆಯ ವರ್ಷಕ್ಕೆ ಪ್ರಭವದಿಂದಲೇ ಶುರುಮಾಡುವ ಪದ್ಧತಿ ನಮ್ಮದು. ನಮ್ಮ ಹಬ್ಬಗಳಾದರೂ ಸೂರ್ಯ ಮತ್ತು ಚಂದ್ರರ ಆವರ್ತನವನ್ನೇ ಆಧರಿಸಿ ನಿರ್ಧಾರಿತವಾಗುತ್ತವೆ. ಕಾಲದ ಆವರ್ತನವನ್ನು ಮತ್ತು ಅದಕ್ಕನುಸಾರವಾಗಿ ಭೂಮಿಯಿಂದ ತೋರುವಂತೆ ಸೂರ್ಯನ ಕಿರಣಗಳ ಕೋನದಲ್ಲಾಗುವ ಬದಲಾವಣೆಯನ್ನು ಲೆಕ್ಕಾಚಾರ ಮಾಡಿ ದೇವಾಲಯ ವಾಸ್ತುವಿನೊಂದಿಗೆ ಬೆಸೆಯುವ ಗಾಣಿತಿಕ ಚತುರತೆಯನ್ನೂ ನಮ್ಮ ಶಿಲ್ಪಿಗಳು ಹೊಂದಿದ್ದರು.

ದೇವಾಲಯಗಳು ಕಾಲಮಾಪನದ ಮತ್ತು ಖಗೋಳಮಿತಿಗೆ ಸಂಬಂಧಿಸಿದ ಹಲವಾರು ಪರಿವೀಕ್ಷಣೆಗಳ ಕೇಂದ್ರವೂ ಆಗಿದ್ದವೆನ್ನುವುದಕ್ಕೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ, ದಿಲ್ಲಿಯಲ್ಲಿ ದೇಗುಲದ ಆವಾರದಲ್ಲಿರುವ ಮಿಹಿರಸ್ತಂಭ/ ಮೇರುಸ್ತಂಭ, ಮತ್ತು ಕೋನಾರ್ಕದಲ್ಲಿರುವ ಸೂರ್ಯ ದೇವಾಲಯಗಳು ಉತ್ತಮ ಉದಾಹರಣೆ. ಹಂಪಿಯ ವಿರುಪಾಕ್ಷ ದೇವಾಲಯದ ಗೋಪುರ ಮತ್ತು ತಂಜಾವೂರಿನ ಬೃಹದೀಶ್ವರ ದೇವಾಲಯದ ಗೋಪುರಗಳು ಸೂರ್ಯನ ಚಲನೆ ಮತ್ತು ನೆರಳು ಬೆಳಕಿನ ಲೆಕ್ಕಾಚಾರವನ್ನು ಅಳವಡಿಸಿಕೊಂಡು ವಿಸ್ಮಯ ಮೂಡಿಸುವ ದೇವಾಲಯಗಳ ಪಟ್ಟಿಗೆ ಸೇರುತ್ತವೆ. ಶೃಂಗೇರಿಯ ವಿದ್ಯಾಶಂಕರ ದೇವಾಲಯವೂ ಸಹ ಸೂರ್ಯನ ಚಲನೆಯೊಂದಿಗೆ ಸಮೀಕರಿಸಲ್ಪಟ್ಟ ವಾಸ್ತುಶಾಸ್ತ್ರವನ್ನು ಹೊಂದಿರುವ ವಿಸ್ಮಯಾವಹ ದೇವಾಲಯವೇ ಆಗಿದೆ.

Advertisement

ದೇವಾಲಯದ ವಾಸ್ತುವಿನೊಂದಿಗೆ ಕಾಲವನ್ನು ತಳುಕು ಹಾಕಿದ ಭಾರತೀಯರ ಕೌಶಲಕ್ಕೆ ಎಣೆಯೇ ಇಲ್ಲ. ಭಾರ ತೀಯ ದೇವಾಲಯ ವಾಸ್ತುಶಿಲ್ಪವು ತನ್ನ ಕಾಲದ ಸಮಾಜದ ಕಲಾಪ್ರಜ್ಞೆ ಮತ್ತು ಬೌದ್ಧಿಕ ಉನ್ನತಿಯನ್ನು ಒಳಗೊಳ್ಳುತ್ತ ಬಹುವಿಸ್ತಾರವಾಗಿ ಬೆಳೆದುಬಂತು. ನಾಗರ, ದ್ರಾವಿಡ ಮತ್ತು ವೇಸರ ಶೈಲಿಗಳೆಂಬ ಮುಖ್ಯವಿಭಾಗದ ಜತೆಯಲ್ಲೇ ಆಯಾ ಕಾಲದ ರಾಜಸತ್ತೆಯ ಹೆಸರಿನಿಂದಲೂ ದೇವಾ ಲಯ ನಿರ್ಮಾಣ ಶೈಲಿಯನ್ನು ಗುರುತಿಸಲಾಗುತ್ತದೆ. ನಾಗ ರವು ಉತ್ತರದ ಶೈಲಿಯಾದರೆ ದ್ರಾವಿಡ ಶೈಲಿಯು ದಕ್ಷಿಣದ್ದು. ವೇಸರಶೈಲಿಯು ಇವೆರಡರ ಕೆಲವು ಅಂಶಗಳನ್ನು ಒಳ ಗೊಂಡಿರುವಂಥದು.  ಇತಿಹಾಸದ ದೃಷ್ಟಿಗೆ ಅಸ್ಪಷ್ಟ ವಾದ ಕಾಲದಿಂದಲೂ ನಿರ್ಮಾಣಕುಶಲಿಗಳ ಪರಂಪರೆಯನ್ನು ಭಾರತಲ್ಲಿ ಕಾಣಬಹುದು. ವಿಶ್ವಕರ್ಮ (ದೇವತೆಗಳ ಸ್ಥಪತಿ, ದೇವಲೋಕವನ್ನು ನಿರ್ಮಿಸಿದಾತ), ಮಾಯಾಸುರ (ಮಯಮತದ ಕತೃì, ಮಹಾಭಾರತದಲ್ಲಿ ಪಾಂಡವರಿ ಗಾಗಿ ಸಭಾಮಂಟಪವನ್ನು ನಿರ್ಮಿಸಿಕೊಟ್ಟವನೀತ), ನಲ (ರಾಮಸೇತುವಿನ ನಿರ್ಮಾಣದ ಹಿಂದಿರುವ ಅಭಿ ಯಂತೃ) ಇತ್ಯಾದಿ ಪ್ರಾಗೈತಿಹಾಸಿಕ ಕಾಲದ ಸ್ಥಪತಿಗಳಿಂದ ಆರಂಭಿಸಿ ಇತಿಹಾಸವು ನೆನಪಿಟ್ಟುಕೊಂಡಿರುವ ಅಮರಶಿಲ್ಪಿ ಜಕಣಾಚಾರಿ ಮತ್ತು ಇವತ್ತಿಗೂ ನಮ್ಮ ನಡುವೆ ಇರುವ ಪಾರಂಪರಿಕ ಶಿಲ್ಪಿಗಳವರೆಗೆ ಭಾರತದ ಶಿಲ್ಪಿಪರಂಪರೆಯು ಬಹುವಿಸ್ತಾರವಾದ್ದು. ವಾಸ್ತುಶಿಲ್ಪ ಕ್ಷೇತ್ರದಲ್ಲಿ ರಚನೆ ಯಾಗಿರುವ ಗ್ರಂಥಗಳೂ ಅಸಂಖ್ಯ.

ಬೆಂಗಳೂರಿನ ಗವಿಗಂಗಾಧರೇಶ್ವರಗೆ ಸಂಕ್ರಾಂತಿ ದಿನ ಸೂರ್ಯ ಮಜ್ಜನ :

ಹಬ್ಬವೆಂಬುದು ನಂಬುಗೆ, ಶ್ರದ್ಧೆ ಮತ್ತು ಭಾವನೆಗಳ ಆಚರಣೆಯ ಕಾಲ ಮಾತ್ರವೇ ಅಲ್ಲದೆ ಮಾನವನ ಗಣಿತೀಯ ಕೌಶಲ, ವಾಸ್ತುಶಾಸ್ತ್ರ ಪರಿಣತಿಯ ಪ್ರದರ್ಶನ ಕಾಲವೂ ಹೌದೆಂಬುದಕ್ಕೆ ಬೆಂಗಳೂರಿನ ಗವಿಗಂಗಾಧ ರೇಶ್ವರ ದೇವಸ್ಥಾನ ಸಾಕ್ಷಿ. ಇಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯಕಿರಣಗಳು ಮಂಟಪ ಭಾಗದಲ್ಲಿರುವ ನಂದಿಯ ಕೊಂಬುಗಳ ಮೂಲಕ ಹಾಯ್ದು ಗರ್ಭಗೃಹ ಪ್ರವೇಶಿಸಿ ಗಂಗಾಧರೇಶ್ವರನನ್ನು ಸೋಕುತ್ತವೆ. ಇದು ವಿಜಯನಗರದರಸರ ಕಾಲದ ನಿರ್ಮಾಣ.

ಪೂರ್ವಜರ ವಾಸ್ತು ವಿಜ್ಞಾನಕ್ಕೆ ಒಂದು ಶರಣು :

ಶೃಂಗೇರಿಯಲ್ಲೂ ಸೋಜಿಗ :

ಶೃಂಗೇರಿಯ ವಿದ್ಯಾಶಂಕರ ದೇಗುಲವಾದರೂ ಸೂರ್ಯಪರಿಚಲನೆಯನ್ನು ಕರಾರುವಾಕ್ಕಾಗಿ ಗಣಿಸಿ ಗುಣಿಸಿ ಕಟ್ಟಲ್ಪಟ್ಟ ಇನ್ನೊಂದು ದೇವಾಲಯ. ವಿದ್ಯಾಶಂಕರ ದೇಗುಲ ಮಂಟಪದಲ್ಲಿ 12 ಶಿಲಾಮಯ ಕಂಬಗಳಿವೆ ಮತ್ತು ಸುತ್ತಲೂ ವಿವಿಧ ದಿಕ್ಕುಗಳಿಗೆ ಬಾಗಿಲುಗಳಿವೆ. ಈ ಕಂಬಗಳು 12 ರಾಶಿಯ ಚಿಹ್ನೆಯಿಂದ ಚಿಹ್ನಿತವಾಗಿದ್ದು ಸೂರ್ಯನು ರಾಶಿಚಕ್ರದಲ್ಲಿ ಚಲಿಸಿದಂತೆಲ್ಲ ಸೂರ್ಯನ ಬೆಳಕು ಬಾಗಿಲಿನ ಮೂಲಕ ಹಾದು ಆಯಾ ರಾಶಿಗೆ ಸಂಬಂಧಿಸಿದ ಸ್ತಂಭದ ಮೇಲೆ ಬೀಳುತ್ತದೆ. ಇದು 14ನೇ ಶತಮಾನದ ದೇಗುಲ.

ಕೋನಾರ್ಕದಲ್ಲೂ ಕಿರಣಲೀಲೆ :

ಒಡಿಶಾದ ಕೋನಾರ್ಕ ದೇಗುಲವು ಸೂರ್ಯ ಮಜ್ಜನಕ್ಕೆ ಅತ್ಯುತ್ತಮ ಉದಾಹರಣೆ. ಕೋನ ಮತ್ತು ಅರ್ಕ (ಸೂರ್ಯ) ಎಂಬ ಪದಗಳು ಮಿಳಿತವಾಗಿ ಕೋನಾರ್ಕವಾಗಿದೆ. ಸೂರ್ಯ ಉದಯಿಸಿದ ಬಳಿಕ ಒಂದು ನಿರ್ದಿಷ್ಟ ಸಮಯದಲ್ಲಿ ವಿಗ್ರಹಕ್ಕೆ ಕಿರಣಾಭಿಷೇಕ ಆಗುತ್ತದೆ. ಸೂರ್ಯ ದೇವಾಲಯದ ಚಕ್ರಗಳು ಸೂರ್ಯನ ಬೆಳಕನ್ನು ಆಧರಿಸಿ ಸಮಯದ ಮಾಪನಕ್ಕೆ ಅನುವಾಗಬಲ್ಲ ರಚನೆಗಳಾಗಿವೆ.

ಪ್ರಾಚೀನರ ವಾಸ್ತು ವಿಸ್ಮಯ :

ಆಂಧ್ರ ಪ್ರದೇಶದ ಶ್ರೀಕಾಕುಳಮ್‌ ಜಿಲ್ಲೆಯ ಅರಸವಿಲ್ಲಿಯಲ್ಲಿರುವ ಸೂರ್ಯನಾರಾಯಣ ಸ್ವಾಮಿಯ ದೇಗುಲದಲ್ಲಿಯೂ ಸಂಕ್ರಾಂತಿಯಂದು ಸೂರ್ಯಕಿರಣಗಳು ಸ್ವಾಮಿಯನ್ನು ಸ್ಪರ್ಶಿಸುತ್ತವೆ. ಇದು 7ನೇ ಶತಮಾನದ ರಚನೆ. ತಮಿಳುನಾಡಿನ ಪಳೈಯೂರಿನಲ್ಲಿರುವ ಕಾಶಿವಿಶ್ವನಾಥನಿಗೂ ಸಂಕ್ರಾಂತಿಯಂದು ಸೂರ್ಯ ಮಜ್ಜನವಾಗುತ್ತದೆ.

ಸೂರ್ಯನ ಚಲನೆಗೂ ಚೆಂದದ ಗಣಿತವಿದೆ! :

ಖಗೋಳ ಶಾಸ್ತ್ರದ ಪ್ರಕಾರ ಇಪ್ಪತ್ತೇಳು ನಕ್ಷತ್ರಗಳು (ಪುಂಜಗಳು) ಸೂರ್ಯ ಮತ್ತು ಗ್ರಹಗಳ ಚಲನೆಯನ್ನು ಅರಿಯುವುದಕ್ಕೆ ಸ್ಥಿರವಾದ ಹಿನ್ನೆಲೆಯಾಗಿ ನಿಲ್ಲುತ್ತವೆ. ಈ ಇಪ್ಪತ್ತೇಳು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಲ್ಲಿ ಸಮನಾಗಿ ಹಂಚಲಾಗಿದೆ. ಸೂರ್ಯನು ಒಂದೊಂದು ರಾಶಿಯಲ್ಲಿ ಒಂದು ತಿಂಗಳಿನಷ್ಟು ಕಾಲ ಸಂಚರಿಸುತ್ತ ಹನ್ನೆರಡು ರಾಶಿಗಳ ಒಂದು ಆವರ್ತವನ್ನು ಮುಗಿಸುವಾಗ ಒಂದು ವರ್ಷ ಮುಗಿದಿರುತ್ತದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸುವ ಖಗೋಲ ವಿದ್ಯಮಾನವೇ ಸಂಕ್ರಾಂತಿ ಎನ್ನಿಸಿಕೊಳ್ಳುತ್ತದೆ. ಅಂದರೆ ಸಂಕ್ರಾಂತಿಯು ಪ್ರತೀ ತಿಂಗಳಿಗೂಮ್ಮೆ ಸಂಭವಿಸುತ್ತದೆ. ಆದರೆ ಮಕರಸಂಕ್ರಾಂತಿಯು ಉಳಿದೆಲ್ಲ ಸಂಕ್ರಾಂತಿಗಳಿಗಿಂತ ವಿಶೇಷವೆನ್ನಿಸಿಕೊಳ್ಳುವುದು ಅಂದಿನಿಂದ ಸೂರ್ಯನ ಉತ್ತರಮುಖೀಯಾದ ಚಲನೆಯು ಆರಂಭವಾಗುತ್ತದೆ ಎನ್ನುವ ಕಾರಣಕ್ಕಾಗಿ. (ನಿಜವೆಂದರೆ ನಾವಿರುವ ಕಾಲದಲ್ಲಿ ಸೂರ್ಯನ ಉತ್ತರಮುಖೀ ಚಲನೆ ಡಿಸೆಂಬರ್‌ 21ನೆಯ ದಿನಾಂಕದಂದೇ ಆರಂಭವಾಗುತ್ತದೆ. ಹಾಗಿದ್ದೂ ಸಂಕ್ರಾಂತಿಯನ್ನು ಪಾರಂಪರಿಕವಾಗಿ ಉತ್ತರಾಯಣದ ಆರಂಭವೆಂದು ಆಚರಿಸಲಾಗುತ್ತದೆ). ಇದುವರೆಗೆ ಓರೆಯಾಗಿ ಬೀಳುತ್ತಿದ್ದ ಸೂರ್ಯನ ಕಿರಣಗಳು ಇದೀಗ ನಿಧಾನವಾಗಿ ನೇರವಾಗುತ್ತ ಸಾಗಿ ತಾಪಮಾನವನ್ನು ಹೆಚ್ಚಿಸಿ ಬೇಸಗೆಯ ಆರಂಭಕ್ಕೆ ಮುನ್ನುಡಿ ಬರೆಯುತ್ತವೆ. ಚಳಿಗಾಲ ದೂರಸರಿಯುತ್ತದೆ.  ಈ ಚಲನೆಯನ್ನು ಲೆಕ್ಕಾಚಾರ ಮಾಡಿ ಮಕರ ಸಂಕ್ರಮಣದಂದು ಸೂರ್ಯನ ಬೆಳಕು ಗರ್ಭಗುಡಿಯೊಳಗೆ ಬರುವಂತೆ ವಾಸ್ತುವಿನ್ಯಾಸ ಮಾಡಲಾಗುತ್ತದೆ.

– ನವೀನ ಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next