Advertisement

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

11:10 PM Apr 23, 2024 | Team Udayavani |

ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾದ ಬೆನ್ನಲ್ಲೇ ಇದೀಗ ತಾಪಮಾನ ಮತ್ತೆ ಏರಿಕೆಯಾಗಿದ್ದು ರಾಜ್ಯದ 10 ಜಿಲ್ಲೆಗಳಲ್ಲಿ ಬಿಸಿಗಾಳಿಯ ಮುನ್ನೆಚ್ಚರಿಕೆ ಕೊಡಲಾಗಿದೆ.

Advertisement

ಎ. 24ರಿಂದ 27ರ ವರೆಗೆ ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಾಗಲ ಕೋಟೆ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಲಿದೆ. ಎ. 24ರಂದು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಬಿರುಸಿನ ಗಾಳಿ (30-40 ಕಿ.ಮೀ.) ಬೀಳುವ ಸಾಧ್ಯತೆ ಇದೆ. ಎ. 24ರಿಂದ 27ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉ.ಕ. ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಇರಲಿದೆ.

ತಾಪಮಾನ ಏರಿಕೆ ಏಕೆ?
ದಕ್ಷಿಣ ಛತ್ತೀಸ್‌ಗಢದಿಂದ ದಕ್ಷಿಣ ಕೇರಳದವರೆಗಿನ ಕಡಿಮೆ ಒತ್ತಡ ಅಥವಾ ಗಾಳಿ ಸ್ಥಗಿತವು ಈಗ ಮಧ್ಯ ಮಹಾರಾಷ್ಟ್ರದಿಂದ ಕೇರಳದವರೆಗೆ ಕರ್ನಾಟಕದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರ ಪರಿಚಲನೆಯು ಕರ್ನಾಟಕದ ದಕ್ಷಿಣ ಒಳಭಾಗದಲ್ಲಿ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿದೆ. ಸುಳಿಗಾಳಿ ಪರಿಚಲನೆಯು ಕೊಮೊರಿನ್‌ ಪ್ರದೇಶದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿದೆ. ಮರಾಠವಾಡ ಮತ್ತು ಪಕ್ಕದ ಪಶ್ಚಿಮ ವಿದರ್ಭದ ಮೇಲೆ ಸುಳಿಗಾಳಿ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ.ವರೆಗೆ ವಿಸ್ತರಿಸಿದೆ. ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಸುಳಿಗಾಳಿ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ.ವರೆಗೆ ವಿಸ್ತರಿಸಿದೆ. ಹೀಗಾಗಿ ತಾಪಮಾನದಲ್ಲಿ ದಿಢೀರ್‌ ಏರಿಕೆಯಾಗಿದೆ.

ಎಲ್ಲೆಲ್ಲಿ ಹೆಚ್ಚಿನ ಉಷ್ಣಾಂಶ?
ಕಲಬುರಗಿಯಲ್ಲಿ 41.3, ಕೊಪ್ಪಳ 40.3, ರಾಯಚೂರು 40.8, ಬಾಗಲಕೋಟೆ 40, ಬೆಂಗಳೂರು 37.2, ಮಂಗಳೂರು 32.5 ಗರಿಷ್ಠ ಉಷ್ಣಾಂಶ ದಾಖಲಾಗಿದೆ.

Advertisement

ಹವಾಮಾನ ಇಲಾಖೆ ಸಲಹೆಗಳು
-ವಿಶೇಷವಾಗಿ ಮಧ್ಯಾಹ್ನ 12ರಿಂದ 3ರ ವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ.
-ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ.
-ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆ ಧರಿಸಿ.
-ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕ, ಛತ್ರಿ/ಟೋಪಿ, ಬಳಸಿ.
-ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್‌, ಚಹಾ, ಕಾಫಿ ಮತ್ತು ಕಾಬೊìನೇಟೆಡ್‌ ತಂಪು ಪಾನೀಯ ಸೇವನೆ ಬೇಡ.
-ಹೆಚ್ಚಿನ ಪ್ರೋಟೀನ್‌ ಆಹಾರ, ಹಳೆಯ ಆಹಾರ ಸೇವಿಸಬೇಡಿ.
-ನಿಮಗೆ ಮೂರ್ಛೆಅಥವಾ ಅನಾರೋಗ್ಯ ಎನಿಸಿದರೆ, ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡಿ.
-ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next