Advertisement

ಮನೆ-ಮನೆಗೂ ಜೆಡಿಎಸ್‌ ಸಾಧನೆ ತಿಳಿಸಿ

01:32 PM Oct 16, 2017 | Team Udayavani |

ಪಿರಿಯಾಪಟ್ಟಣ: ಜೆಡಿಎಸ್‌ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಸಂಘಟಿತವಾಗಿದ್ದು ಮನೆಮನೆಗೂ ಪಕ್ಷದ ಜನಪರ ಯೋಜನೆಗಳನ್ನು ತಿಳಿಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹದೇವ್‌ ತಿಳಿಸಿದರು.

Advertisement

 ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎಚ್‌.ಡಿ.ಕುಮಾರಸ್ವಾಮಿರವರು 20 ತಿಂಗಳು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸಿ ಜನ ಸಾಮಾನ್ಯರಿಗೆ ಉತ್ತಮ ಆಡಳಿತ ನೀಡಿದ್ದರು. ಹೀಗಾಗಿ ಪಕ್ಷದ ವತಿಯಿಂದ ಮನೆ ಮನೆಗೆ ಕುಮಾರಣ್ಣ ಎಂಬ ಕಿರು ಹೊತ್ತಿಗೆ ಹೊರ ತರುತ್ತಿದ್ದು ಪ್ರತಿ ಮನೆಗೂ ಜೆಡಿಎಸ್‌ ಜನಪರ ಯೋಜನೆ ಸಾಧನೆ ತಿಳಿಸಲು ಮುಂದಾಗುತ್ತಿದ್ದೇವೆಂದು ಹೇಳಿದರು.

ಪ್ರತಿಯೊಬ್ಬ ಕಾರ್ಯಕರ್ತರು ಪ್ರಚಾರೋಂದಲನಕ್ಕೆ ಸಹಕರಿಸಿ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ತಿಳಿಸಿದರು. ಶಾಸಕ ಕೆ.ವೆಂಕಟೇಶ್‌ ಸರ್ವಾಧಿಕಾರಿ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದು ಸುಳ್ಳು ಭರವಸೆಯನ್ನು ತಾಲೂಕಿನ ಜನತೆಗೆ ನೀಡುತ್ತಿದ್ದಾರೆ. ಆಶ್ರಯ ಮನೆಗಳ ಆಯ್ಕೆಯಲ್ಲಿ ಮಧ್ಯ ಪ್ರವೇಶಿಸಿ ತನ್ನ ಪಕ್ಷದ ಕಾರ್ಯಕರ್ತರಿಗೆ ಮಾತ್ರ ವಸತಿಯನ್ನು ಮಂಜೂರು ಮಾಡುತ್ತಿದ್ದಾರೆಂದು ದೂರಿದರು.

ಶಾಸಕರ ವರ್ತನೆಯಿಂದಾಗಿ ಇತರರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ ಕಾಂಗ್ರೆಸ್‌ನ ಮುಖಂಡರು ಈ ವಸತಿಗಳ ಮಂಜೂರಾತಿಗಾಗಿ ಫ‌ಲಾನುಭವಿಗಳ ಬಳಿ ಲಂಚ ಪಡೆಯುತ್ತಿದ್ದಾರೆ. ಹೀಗಾಗಿ ಶಾಸಕರು ಭ್ರಷ್ಟಾಚಾರಕ್ಕೆ ಸಹಕರಿಸುವಂತಾಗಿದೆ. ಈ ಧೋರಣೆಯನ್ನು ಶಾಸಕರು ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು. 

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಐಲಾಪುರ ರಾಮು, ಇತ್ತೀಚೆಗೆ ಶಾಸಕರು ಜೆಡಿಎಸ್‌ ಸಂಘಟನೆಯನ್ನು ಕಂಡು ಕಾಂಗ್ರೆಸ್‌ ಸೋಲುವ ಭೀತಿಯಲ್ಲಿದ್ದಾರೆ. ಇಷ್ಟುದಿನ ತಾಲೂಕಿನ ಜನತೆ ಬಗ್ಗೆ ಇಲ್ಲದ ಕಾಳಜಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದಾಗಿ ಮುಖ್ಯ ಮಂತ್ರಿಗಳನ್ನು ಕರೆದು ಸಮಾರಂಭ ಏರ್ಪಡಿಸಿದ್ದರು. ಆದರೆ ಇದೂವರೆಗೂ ಕಾರ್ಯಗತಗೊಂಡಿಲ್ಲ.

Advertisement

ಅಲ್ಲದೆ ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶವಾಗಿ ಪರಿವರ್ತಿಸಲಾಗಿತ್ತು ಎಂದು ಟೀಕಿಸಿದರು. ಜಿಪಂ ಸದಸ್ಯರಾದ ರಾಜೇಂದ್ರ, ಕೆ.ಎಸ್‌.ಮಂಜುನಾಥ್‌, ಜಯಕುಮಾರ್‌, ರುದ್ರಮ್ಮ ನಾಗಯ್ಯ, ತಾಪಂ ಸದಸ್ಯರಾದ ಮಲ್ಲಿಕಾರ್ಜುನ್‌, ಮೈಮುಲ್‌ ನಿರ್ದೇಶಕ ಪ್ರಸನ್ನ, ಮುಖಂಡರಾದ ರವಿ, ಸೋಮಶೇಖರ ಆವರ್ತಿ, ರಘುನಾಥ್‌ ಮತ್ತಿತರರಿದ್ದರು.

ನಾನೇ ಅಭ್ಯರ್ಥಿ: ಈ ಹಿಂದೆಯೇ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರ್‌ಸ್ವಾಮಿ ತಾಲೂಕಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ತನ್ನನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲದಿದ್ದರೂ ಕೆಲವರು ತಾನೇ ಆಕಾಂಕ್ಷೆಯ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಇದು ಅವರ ಅವಿವೇಕ ತೋರಿಸುತ್ತದೆ. ಹೀಗಾಗಿ ಕಾರ್ಯಕರ್ತರು ಗೊಂದಲಕ್ಕೊಳಗಾಗಬಾರದು ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಮಹದೇವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next