ಸೇಡಂ: ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಪ್ರೌಢಾವಸ್ಥೆ ಮಕ್ಕಳಿಗೂ ತಿಳಿಸುವಂತಾಗಬೇಕು ಎಂದು ಜಿಪಂ ಸದಸ್ಯ ದಾಮೋದರರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಪೀಳಿಗೆಗೆ ಸಂಸ್ಕೃತಿ, ಸಂಪ್ರದಾಯ, ಧರ್ಮ ಎಂಬುದು ತಿಳಿಯದಂತಾಗಿದೆ. ತಾಂತ್ರಿಕತೆಯೊಂದಿಗೆ ಮುನ್ನುಗ್ಗುತ್ತಿರುವುದರಿಂದ ಅವರಿಗೆ ತಿಳಿ ಹೇಳಲು ಶರಣರ ವಚನಗಳನ್ನು ಪಾಲಕರು ಮಕ್ಕಳಿಗೆ ತಲುಪಿಸಬೇಕು. ಈ ಮೂಲಕ ಸುಸಂಸ್ಕೃತ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಲೇಖಕಿ ಡಾ| ಚಂದ್ರಕಲಾ ಬಿದರಿ, 12ನೇ ಶತಮಾನದ ಶರಣ ಅಂಬಿಗರ ಚೌಡಯ್ಯ ಮನುಕುಲಕ್ಕೆ ದಾರಿದೀಪವಾಗಿದ್ದರು. ಚೌಡಯ್ಯನವರ ಬದುಕು, ಬರಹ ಕೇವಲ ಒಂದು ಸಮುದಾಯ ಅಥವಾ ಒಂದು ಜನಾಂಗಕ್ಕೆ ಸೀಮಿತವಾಗಿರಿಸದೆ ಮುಕ್ತವಾಗಿ ಪಸರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೋಡ್ಲಾ ಉರಿಲಿಂಗ ಪೆದ್ದಿ ಸಂಸ್ಥಾನದ ಮಠದ ಡಾ| ನಂಜುಂಡ ಸ್ವಾಮೀಜಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶ್ರೀನಾಥ ಪಿಲ್ಲಿ, ಬಿಜೆಪಿ ತಾಲೂಕು ಅಧ್ಯಕ್ಷ ನಾಗಪ್ಪ ಕೊಳ್ಳಿ, ಎಪಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ, ಜಿಪಂ ಸದಸ್ಯ ನಾಗೇಶ ಕಾಳಾ, ಮಲ್ಲಿಕಾರ್ಜುನ ಗುಡ್ಡದ ಇದ್ದರು. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಸ್ವಾಗತಿಸಿದರು. ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ನಿರೂಪಿಸಿದರು.