Advertisement

ಎಳೆ ವಯಸ್ಸಲ್ಲೇ ಮಾನವೀಯ ಮೌಲ್ಯ ತಿಳಿಸಿ

12:13 PM Dec 23, 2018 | |

ದಾವಣಗೆರೆ: ರಾಮಾಯಣ, ಮಹಾಭಾರತ ಹಾಗೂ ಇತರೆ ಶೌರ್ಯದ ಕಥೆಗಳನ್ನು ಹೇಳುವ ಮೂಲಕ ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ
ಹೇಳಿದ್ದಾರೆ.

Advertisement

ಶನಿವಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನಗರದ ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿ,
ಶಿವಾಜಿ ಚಿಕ್ಕವರಿದ್ದಾಗ ತಾಯಿ ಜೀಜಾಬಾಯಿ ಹೇಳಿದ ಧೈರ್ಯ-ಶೌರ್ಯದ ಕಥೆಗಳು ಅವರ ಮುಂದಿನ ಜೀವನಕ್ಕೆ ದಾರಿದೀಪವಾಯಿತು.

ಸುಭದ್ರೆಯ ಗರ್ಭದಲ್ಲಿದ್ದಾಗಲೇ ಅಭಿಮನ್ಯು ಚಕ್ರವ್ಯೂಹ ಬೇಧಿಸುವುದನ್ನು ಕೇಳಿ ತಿಳಿದಿದ್ದ. ಹೀಗೆ ಮಕ್ಕಳು ಚಿಕ್ಕವರಿದ್ದಾಗ ಧೈರ್ಯ-ಶೌರ್ಯ ಮತ್ತು ಮಾನವೀಯ ಮೌಲ್ಯದ ಕಥೆ ಹೇಳಿ, ಅವರಲ್ಲಿ ಉತ್ತಮ ಸಂಸ್ಕಾರ ನೀಡಬೇಕಿದೆ ಎಂದರು.

ಮಗುವಿಗೆ ಮುಕ್ತ ಹಾಗೂ ಉತ್ತಮ ಪರಿಸರ, ಶಿಕ್ಷಣ ಒದಗಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಪೋಷಕರು ಮನೆಯಲ್ಲಿ ಟಿವಿ ಮತ್ತು ಮೊಬೈಲ್‌ ಬಳಕೆ ಕಡಿಮೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್‌ ಫೋನ್‌ ಮೇಲೆ ತೀರಾ ಅವಲಂಬಿತರಾಗಿ, ಮೊಬೈಲ್‌ ಸಿಂಡ್ರೋಮ್‌ ರೋಗ ಲಕ್ಷಣವೇ ಶುರುವಾಗಿದೆ. ಅತಿಯಾಗಿ ಮೊಬೈಲ್‌ ಬಳಕೆಯಿಂದ ಬ್ರೈನ್‌ ಟ್ಯೂಮರ್‌, ಹೃದಯ ಸಮಸ್ಯೆ
ಉಂಟಾಗಲಿದೆ. ಮಕ್ಕಳಿಗೆ ಮೊಬೈಲ್‌ನಲ್ಲಿ ಏನು ಬೇಕು, ಬೇಡವೆಂಬ ಬಗ್ಗೆ ತಿಳಿಯದೆ ಹಾದಿ ತಪ್ಪುತ್ತಿದ್ದಾರೆ. ಆದ್ದರಿಂದ ಪೋಷಕರು ಈ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ಶಾಲೆಯಲ್ಲಿ ಹೇಗೆ ಓದುತ್ತಿದ್ದಾರೆ, ಇತರೆ ಚಟುವಟಿಕೆಗಳಲ್ಲಿ ಹೇಗಿದ್ದಾರೆಂದು ಶಾಲೆಗೆ
ನಿಯಮಿತವಾಗಿ ಭೇಟಿ ನೀಡಿ ವಿಚಾರಿಸಬೇಕು ಎಂದು ಕಿವಿಮಾತು ಹೇಳಿದರು.

ಇಂದು ಅನೇಕ ವಯೋವೃದ್ಧರು ಮನೆಯಲ್ಲಿ ಆಶ್ರಯವಿಲ್ಲದೇ ವೃದ್ಧಾಶ್ರಮದಲ್ಲಿದ್ದಾರೆ. ಇಂದಿನ ಪೀಳಿಗೆ ಹಿರಿಯರನ್ನು ನಿರ್ಲಕ್ಷಿಸುವುದು
ಸರಿಯಲ್ಲ. ಸೊಸೆಯಂದಿರು ಅತ್ತೆಯನ್ನು ತಮ್ಮ ತಾಯಿಯಂತೆಯೇ ಕಾಣಬೇಕಿದೆ. ಮಹಿಳೆಯರಿಗೆ ಉಚಿತ ಕಾನೂನು ನೆರವು ಸೌಲಭ್ಯವಿದೆ. ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ನೀಡಲಿದೆ ಎಂದು ತಿಳಿಸಿದರು.

Advertisement

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಸಮಾಜ ಮುಂದೆ ಹೇಗಿರಬೇಕೆಂಬುದು ನಮ್ಮ ಮಕ್ಕಳ ಭವಿಷ್ಯದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಮುಕ್ತವಾದ ವಾತಾವರಣ ನಿರ್ಮಿಸಿಕೊಡಬೇಕು. ಹಸಿವು ಮತ್ತು ದೌರ್ಜನ್ಯಮುಕ್ತಗೊಳಿಸಿ ಉತ್ತಮ ಪರಿಸರ ನೀಡುವುದೇ ಮಕ್ಕಳ ಹಕ್ಕುಗಳ ಮುಖ್ಯ
ಧ್ಯೇಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ರುದ್ರಮುನಿ ಮಾತನಾಡಿ, ಮಕ್ಕಳ ಹಕ್ಕುಗಳ ಮತ್ತು ಮಾನವೀಯ ಮೌಲ್ಯಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿರುವುದು ಪರಿಣಾಮಕಾರಿಯಾಗಿದೆ. ಪೋಷಕರು ಸಹ ಮಕ್ಕಳ ಹಕ್ಕುಗಳ ಕುರಿತು ಅರಿತು ಅವುಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ
ಎಂದರು. 

ನಿವೃತ್ತ ಪ್ರಾಂಶುಪಾಲ ಕೆ.ಬಿ. ಆನಂದ್‌, ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ನ ಕಾರ್ಯದರ್ಶಿ ಆರ್‌. ಮಂಜುನಾಥ ಹೆಗಡೆ, ಮುಖ್ಯೋಪಾಧ್ಯಾಯಿನಿ ಆರ್‌. ಮೀನಾಕ್ಷಿ ಕಾರ್ಯಕ್ರಮದಲ್ಲಿದ್ದರು. ಶಿಕ್ಷಕಿ ದಿವ್ಯ ಪ್ರಾರ್ಥಿಸಿದರು. ರೇಣುಕಾರಾಧ್ಯ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next