ಕೆ.ಆರ್.ನಗರ: ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ದಲಿತರಿಗೆ ಮಾಡಿರುವ ಅನುಕೂಲ ಮತ್ತು ನೀಡಿರುವ ಅನುದಾನದ ಮಾಹಿತಿಯನ್ನು ಪಕ್ಷದ ಕಾರ್ಯಕರ್ತರು ಮತ್ತು ಸಮಾಜದ ಮುಖಂಡರು ತಾಲೂಕಿನ ಪ್ರತಿಯೊಬ್ಬ ದಲಿತರಿಗೂ ತಿಳಿಸಬೇಕು ಎಂದು ಜಿಪಂ ಸದಸ್ಯ ಅಚ್ಚುತಾನಂದ ಹೇಳಿದರು. ಪಟ್ಟಣದ ಅಂಬಾ ಭವಾನಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕಗಳ ಸಭೆಯಲ್ಲಿ ಮಾತನಾಡಿದರು.
ಕಳೆದ 9ವರ್ಷಗಳಿಂದ ಶಾಸಕರಾಗಿರುವ ಸಾ.ರಾ.ಮಹೇಶ್ ಅವರು ದಲಿತ ವಿರೋಧಿ ರಾಜಕಾರಣ ಮಾಡುತ್ತಿದ್ದು ಅಭಿವೃದ್ಧಿ ಮರೆತಿದ್ದಾರೆ. ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಒಂದೆರಡು ದಲಿತ ಕುಟುಂಬಗಳಿರುವ ಗ್ರಾಮಗಳಿಗೆ ಸರ್ಕಾರದ ಅನುದಾನ ನೀಡಿ ಇತರ ವರ್ಗದವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇಂತಹ ಸರ್ವಾಧಿಕಾರಿ ಮತ್ತು ದುರಹಂಕಾರಿ ಶಾಸಕರನ್ನು ಸೋಲಿಸಲು ದಲಿತ ಮುಖಂಡರು ಒಂದಾಗಬೇಕೆಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಹಿಂಬಡ್ತಿ ನೀಡಬೇಕೆಂದು ಸುಪ್ರಿಂಕೋರ್ಟ್ ಆದೇಶ ನೀಡಿದಾಗ ಆ ವಿಚಾರದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅವರ ಬೆನ್ನಿಗೆ ನಿಂತಿದ್ದು ಇದನ್ನು ಅರಿತು ದಲಿತರು ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಡಿ.ರವಿಶಂಕರ್ ಅವರ ಬೆಂಬಲಕ್ಕೆ ನಿಂತಿದ್ದು ನೀವೆಲ್ಲಾ ಕಾಂಗ್ರೆಸ್‌ಗೆ ಮತ ನೀಡಿ ಆ ಮೂಲಕ ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ರಾಜಯ್ಯ, ತಾಪಂ ಮಾಜಿ ಸದಸ್ಯರಾದ ಎಂ.ತಮ್ಮಣ್ಣ, ನಂಜುಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಪರಿಶಿಷ್ಟ ಜಾತಿ ಕಾಂಗ್ರೆಸ್ ಘಟಕದ ಅಧ್ಯಕ್ಷ ವೆಂಕಟೇಶ್, ಜವರಯ್ಯ, ಪಶುಭಾಗ್ಯ ಆಯ್ಕೆ ಸಮಿತಿ ಸದಸ್ಯ ಸಾ.ಮಾ.ಯೋಗೇಶ್, ಟಿಎಪಿಸಿಎಂಎಸ್ ನಿರ್ದೇಶಕ ಜಿ.ಡಿ.ಚಲುವರಾಜು, ದಲಿತ ಮುಖಂಡರಾದ ಬಾಲಕೃಷ್ಣ, ರಾಚಯ್ಯ, ರಂಗಸ್ವಾಮಿ, ಮಹದೇವ್, ಕಂಠಿಕುಮಾರ್, ಗೋವಿಂದರಾಜು ಮತ್ತಿತರರಿದ್ದರು.