Advertisement

ಕಾಲೇಜು ವಿದ್ಯಾರ್ಥಿಗಳ ದೂರು ಪರಿಹಾರಕ್ಕೆ ಟೆಲಿಗ್ರಾಮ್‌ ವೇದಿಕೆ !

03:57 PM Aug 27, 2022 | Team Udayavani |

ಉಡುಪಿ: ರಾಜ್ಯದ ಸರಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತರಗತಿ ಪ್ರತಿನಿಧಿಯ ಮೂಲಕ ಟೆಲಿಗ್ರಾಮ್‌ನಲ್ಲಿ ದೂರು ದುಮ್ಮಾನ ಹೇಳಿಕೊಳ್ಳುವ ಹಾಗೂ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆಯನ್ನು ಕಾಲೇಜು ಶಿಕ್ಷಣ ಇಲಾಖೆ ಸೃಜಿಸಿದೆ.

Advertisement

ಇದಕ್ಕಾಗಿ ಇಲಾಖೆಯು ಪ್ರಥಮ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳ ದೂರುಗಳನ್ನು ಟೆಲಿಗ್ರಾಮ್‌ ಮೂಲಕ ಪಡೆಯಲು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಂದೇಶವನ್ನು ನೇರವಾಗಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಕಳುಹಿಸಲು ಗ್ರೂಪ್‌ ಸೃಷ್ಟಿ ಮಾಡಿದೆ.

ಆ. 25ರ ಗಡುವು
ಇಲಾಖೆಯಿಂದ ಇಎಂಐಎಸ್‌ ಮೂಲಕ ಟೆಲಿಗ್ರಾಮ್‌ನಲ್ಲಿ ಸಿಆರ್‌ಯುಜಿ ಫ‌ಸ್ಟ್‌ ಇಯರ್‌ ಹಾಗೂ ಸಿಆರ್‌ ಯುಜಿ ಸೆಕೆಂಡ್‌ ಇಯರ್‌ ಎಂದು ಎರಡು ಗ್ರೂಪ್‌ ಸೃಷ್ಟಿಸಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪದವಿ ತರಗತಿಗಳಿಗೆ ಕ್ಲಾಸ್‌ ರೆಪ್ರಸೆಂಟೇಟಿವ್‌(ತರಗತಿ ಪ್ರತಿನಿಧಿ)ಗಳನ್ನು ಪ್ರತ್ಯೇಕ ಟೆಲಿಗ್ರಾಮ್‌ ಗ್ರೂಪ್‌ಗೆ ಆ. 25ರೊಳಗೆ ಸೇರಿಸಬೇಕು. ವಿದ್ಯಾರ್ಥಿ ಪ್ರತಿನಿಧಿಯನ್ನು ಹೊರತು ಪಡಿಸಿ ಬೇರ್ಯಾರನ್ನು ಸೇರಿಸ ಬಾರದು ಎಂದು ಇಲಾಖೆ ಸೂಚನೆ ನೀಡಿದೆ.

ಮಾಹಿತಿ ನೀಡಲು, ದೂರು ಪಡೆಯಲು
ವಿದ್ಯಾರ್ಥಿ ಪ್ರತಿನಿಧಿಗಳು ಕಾಲೇಜು ಅಥವಾ ತರಗತಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ವಿದ್ಯಾರ್ಥಿಗಳ ಪರ ವಾಗಿ ಟೆಲಿಗ್ರಾಮ್‌ ಗ್ರೂಪ್‌ನಲ್ಲಿ ಸಲ್ಲಿಸ ಬಹುದು. ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ಕ್ರಿಯಿಸಲಿದ್ದಾರೆ. ಶೈಕ್ಷಣಿಕ ಅಥವಾ ಆಡಳಿ ತಾತ್ಮಕ ವಿಷಯವನ್ನು ಆಯಾ ವಿಭಾ ಗಕ್ಕೆ ವರ್ಗಾಯಿಸಿ, ತುರ್ತು ಪರಿಹಾರ ಕಲ್ಪಿಸುವ ಕಾರ್ಯ ಆಗಲಿದೆ. ಕಾಲೇಜು ಅಥವಾ ಇಲಾಖೆಯಿಂದ ವಿದ್ಯಾರ್ಥಿ ಗಳಿಗೆ ಯಾವುದೇ ಮಾಹಿತಿ ನೀಡ ಬೇಕಾ ದರೂ ಈ ಗ್ರೂಪ್‌ ಬಳಕೆ ಮಾಡಿ ಕೊಳ್ಳಲಾಗುತ್ತದೆ. ರಾಜ್ಯದ 430 ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಇದರಲ್ಲಿ ಇರುವುದರಿಂದ ಕೂಡಲೇ ಮಾಹಿತಿ ರವಾನೆಗೂ ಅನುಕೂಲವಾಗಲಿದೆ.

ಮಾಹಿತಿ ಸೋರಿಕೆ ಆಗದು
ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸುವ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ ಮತ್ತು ಪಡೆದ ಮಾಹಿತಿ ಸುರಕ್ಷಿತವಾಗಿರುತ್ತದೆ. ವಾಟ್ಸ್‌ ಆ್ಯಪ್‌ ಗ್ರೂಪ್‌ ರೀತಿಯಲ್ಲಿಯೇ ಟೆಲಿಗ್ರಾಮ್‌ ಗ್ರೂಪ್‌ ಕಾರ್ಯ ನಿರ್ವಹಿಸಲಿದೆ. ಇಲಾಖೆಯಿಂದ ತೆಗೆದುಕೊಳ್ಳುವ ಹೊಸ ಕ್ರಮ, ಶೈಕ್ಷಣಿಕ ಚಟುವಟಿಕೆ, ವಿದ್ಯಾರ್ಥಿ ಸಂಬಂಧಿಸಿದ ಕಾರ್ಯಕ್ರಮಗಳ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಏನಿದು ಟೆಲಿಗ್ರಾಮ್‌ ಗ್ರೂಪ್‌?
ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೆಸೆಂಜರ್‌ ಮಾದರಿಯಲ್ಲೇ ಟೆಲಿಗ್ರಾಮ್‌ ಹಲವು ಮಂದಿ ಏಕಕಾಲದಲ್ಲಿ ಆನ್‌ಲೈನ್‌ ವ್ಯವಸ್ಥೆಯಲ್ಲಿ ಚರ್ಚಿಸಬಹುದಾದ ವೇದಿಕೆಯಾಗಿದೆ. ಇಲ್ಲಿಯೂ ಪ್ರತ್ಯೇಕ ಗ್ರೂಪ್‌ಗ್ಳನ್ನು ರಚಿಸಿಕೊಳ್ಳಬಹುದು. ಚಾಟ್‌, ವೀಡಿಯೋ ಕಾಲಿಂಗ್‌, ಫೈಲ್‌ ಶೇರಿಂಗ್‌ ಹೀಗೆ ಹಲವು ಅವಕಾಶಗಳು ಇದರಲ್ಲಿವೆ.

ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ದೂರು- ದುಮ್ಮಾನಗಳನ್ನು ಒಮ್ಮೆಗೇ ಆಲಿಸಲು, ತುರ್ತು ಸಂದೇಶಗಳನ್ನು ರವಾನಿಸಲು ಅನುಕೂಲ ಆಗುವಂತೆ ಆನ್‌ಲೈನ್‌ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಎಲ್ಲ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಪ್ರತಿನಿಧಿಗಳು ಇರುತ್ತಾರೆ. ಟೆಲಿಗ್ರಾಮ್‌ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳ ಗ್ರೂಪ್‌ ರಚಿಸಲು ನಿರ್ದೇಶನ ನೀಡಿದ್ದೇವೆ.
– ಡಾ| ಅಪ್ಪಾಜಿ ಗೌಡ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next