ಪ್ಯಾರಿಸ್: ಬಿಲಿಯನೇರ್ ಉದ್ಯಮಿ, ಟೆಲಿಗ್ರಾಮ್ ಮೆಸೆಜಿಂಗ್ ಆಪ್ ನ (Telegram messaging app )ಸ್ಥಾಪಕ ಮತ್ತು ಸಿಇಒ ಪವೆಲ್ ಡೊರಾವ್ (Pavel Durov) ಅವರನ್ನು ಶನಿವಾರ (ಆ.24) ಸಂಜೆ ಪ್ಯಾರಿಸ್ ಹೊರವಲಯದ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಡೊರಾವ್ ಅವರು ತನ್ನ ಖಾಸಗಿ ಜೆಟ್ ಮೂಲಕ ವಿದೇಶಕ್ಕೆ ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ತನಿಖಾ ಕಾರಣದಿಂದ ಅವರ ವಿರುದ್ದ ಫ್ರಾನ್ಸ್ ನಲ್ಲಿ ಪೊಲೀಸ್ ವಾರಂಟ್ ಜಾರಿಯಾಗಿತ್ತು ಎಂದು ಟಿಎಫ್1 ವೆಬ್ ಸೈಟ್ ವರದಿ ಮಾಡಿದೆ.
ಟೆಲಿಗ್ರಾಮ್‌ನಲ್ಲಿ ಮಾಡರೇಟರ್‌ಗಳ ಕೊರತೆಯ ಕಾರಣದಿಂದ ಅವರ ವಿರುದ್ದ ತನಿಖೆ ನಡೆಸಲಾಗುತ್ತಿದೆ. ಈ ಪರಿಸ್ಥಿತಿಯು ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅಪರಾಧ ಚಟುವಟಿಕೆಯನ್ನು ಅಡೆತಡೆಯಿಲ್ಲದೆ ಸಾಗಲು ಅನುವು ಮಾಡಿಕೊಡುತ್ತದೆ ಎಂದು ಪೊಲೀಸರು ಪರಿಗಣಿಸಿದ್ದಾರೆ.
ಈ ಬಂಧನದ ಬಗ್ಗೆ ಇದುವರೆಗೆ ಟೆಲಿಗ್ರಾಮ್ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಫ್ರಾನ್ಸ್ ಆಂತರಿಕ ಸಚಿವಾಲಯ ಅಥವಾ ಪೊಲೀಸರು ಕೂಡಾ ಯಾವುದೇ ಮಾಹಿತಿ ಒದಗಿಸಿಲ್ಲ.
ರಷ್ಯಾ ಮೂಲದ ಪವೆಲ್ ಡೊರಾವ್ ಅವರು ದುಬೈನಲ್ಲಿ ಟೆಲಿಗ್ರಾಮ್ ಮೆಸೆಜಿಂಗ್ ಆಪ್ ಸ್ಥಾಪಿಸಿದ್ದರು. ಅವರು 2014ರಲ್ಲಿ ರಷ್ಯಾ ತೊರೆದಿದ್ದರು. ಫೋರ್ಬ್ಸ್ ಪ್ರಕಾರ ಡೊರಾವ್ ಬಳಿ $15.5 ಶತಕೋಟಿಯಷ್ಟು ಸಂಪತ್ತಿದೆ.