ಹೈದರಾಬಾದ್: “ಭಾರತೀಯ ಸೇನೆಯ ಯೋಧರಿಂದ ಹೈದರಾಬಾದ್ ಪ್ರಾಂತ್ಯದ ಜನರಿಗೆ ವಿನಾಕಾರಣ ಕಿರುಕುಳ ಉಂಟಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಸರ್ಕಾರದಿಂದ ಸೇನಾ ಪ್ರಾಂತ್ಯಕ್ಕೆ ನೀಡಲಾಗುತ್ತಿರುವ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ನಿಲ್ಲಿಸಬೇಕಾಗುತ್ತದೆ.”
– ಇದು ಹೈದರಾಬಾದ್‌ನ ದಂಡುಪ್ರದೇಶದಲ್ಲಿರುವ ಭಾರತೀಯ ಸೇನಾ ವಲಯಕ್ಕೆ ತೆಲಂಗಾಣದ ಮಾಹಿತಿ ತಂತ್ರಜ್ಞಾನದ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ಖಡಕ್ ಎಚ್ಚರಿಕೆ!
ತೆಲಂಗಾಣ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ಹೊರವಲಯದಲ್ಲಿರುವ ಸೇನಾ ದಂಡುಪ್ರದೇಶದ ಸಿಬ್ಬಂದಿಯಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಅನೇಕ ಕಡೆ ಏಕಾಏಕಿ ರಸ್ತೆಗಳನ್ನು ಬಂದ್ ಮಾಡುವುದು, ಕಂಡಕಂಡ ಕಡೆಯಲ್ಲೆಲ್ಲಾ ಚೆಕ್‌ಡ್ಯಾಂ ನಿರ್ಮಿಸುವ ಕೆಲಸಗಳನ್ನು ಸೇನಾ ಸಿಬ್ಬಂದಿ ಕೈಗೊಳ್ಳುತ್ತಿದ್ದು, ಅದರಿಂದ ಜನಸಾಮಾನ್ಯರು ಟ್ರಾಫಿಕ್ ಜಾಮ್ ಮುಂತಾದ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಅನೇಕ ಚೆಕ್‌ಡ್ಯಾಂಗಳನ್ನು ನಿರ್ಮಿಸಿದ್ದರಿಂದಾಗಿ 2020ರಲ್ಲಿ ಅತಿವೃಷ್ಟಿಯಾದಾಗ ಅನೇಕ ಪ್ರದೇಶಗಳು ಮುಳುಗಡೆಯಾಗಿದ್ದವು ಎಂದು ಅವರು ಆರೋಪಿಸಿದರು.
“ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದನ್ನು ಪರಿಗಣಿಸದೆ, ಇದೇ ರೀತಿಯ ಅನವಶ್ಯಕ ಕಾಮಗಾರಿಗಳನ್ನು ಮುಂದುವರಿಸಿದರೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ದಂಡು ಪ್ರದೇಶಕ್ಕೆ ನೀಡಲಾಗುತ್ತಿರುವ ವಿದ್ಯುತ್ ಹಾಗೂ ನೀರಿನ ಸೌಕರ್ಯಗಳನ್ನು ನಿಲ್ಲಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ
“ಕೆಟಿಆರ್ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಹೈದರಾಬಾದ್ ದಂಡು ಪ್ರದೇಶದಲ್ಲಿರುವ ಭೂಸೇನೆಯ ಕ್ಯಾಂಪನ್ನು ಅಲ್ಲಿಂದ ಖಾಲಿ ಮಾಡಿಸುವ ಉದ್ದೇಶವನ್ನು ಕೆಟಿಆರ್ ಹೊಂದಿದ್ದಾರೆ. ಹಾಗಾಗಿ, ಸೇನೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ತೆಲಂಗಾಣ ಸರ್ಕಾರ ಸೇನೆಯನ್ನು ಹೇಗೆ ಗೌರವಿಸುತ್ತದೆ ಎಂಬುದನ್ನು ಸಾರಿ ಹೇಳಿದೆ’ ಎಂದು ಟೀಕಿಸಿದೆ.