ಹೈದರಾಬಾದ್: ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಂಕಷ್ಟದಲ್ಲಿದ್ದ ರೈತನೋರ್ವನನ್ನು ಪೊಲೀಸ್ ಸಿಬಂದಿ ತನ್ನ ಹೆಗಲ ಮೇಲೆ ಹೊತ್ತು ಸುಮಾರು 2 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ರೈತನ ಜೀವ ಉಳಿಸಿದ ಘಟನೆ ತೆಲಂಗಾಣದಲ್ಲಿರುವ ಕರೀಂನಗರದ ವೀಣವಂಕ ಮಂಡಲದ ಬೇಟಿಗಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರೈತನೊಬ್ಬ ತನ್ನ ಜಮೀನಿನಲ್ಲಿ ಕೀಟನಾಶಕ ಸೇವಿಸಿದ್ದಾನೆ. ಅಕ್ಕಪಕ್ಕದ ರೈತರು ಆತನ ಸ್ಥಿತಿಯನ್ನು ಗಮನಿಸಿ ಪೊಲೀಸ್ ಠಾಣೆ ಹಾಗೂ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಿಬಂದಿ ಘಟನಾ ಸ್ಥಳಕ್ಕೆ ಬಂದರೂ ತುರ್ತು ವಾಹನ ಮಾತ್ರ ಬರಲಿಲ್ಲ, ಈ ವೇಳೆ ಅಲ್ಲಿದ್ದ ಪೊಲೀಸ್ ಸಿಬಂದಿ ಜಯಪಾಲ್ ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೈತನ ಸ್ಥಿತಿ ಕಂಡು ಕೂಡಲೇ ಆತನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊಲ ಗದ್ದೆಗಳಲ್ಲಿ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸ್ ಸಿಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ರೈತನ ಜೀವ ಉಳಿದಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ, ಅಲ್ಲದೆ ಪೊಲೀಸ್ ಸಿಬಂದಿಯ ಕಾರ್ಯಕ್ಕೆ ಊರಿನ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Himachal: ಅಡ್ಡಮತದಾನ ಮಾಡಿದ 6 ಮಂದಿ ಕೈ ಶಾಸಕರು ಸದಸ್ಯತ್ವದಿಂದ ಅನರ್ಹ: ಸ್ಪೀಕರ್