Advertisement

ಎಚ್‌.ಡಿ. ದೇವೇಗೌಡ ಭೇಟಿಯಾದ ತೆಲಂಗಾಣ ಸಿಎಂ ಕೆಸಿಆರ್‌

08:26 AM May 27, 2022 | Team Udayavani |

ಬೆಂಗಳೂರು: ಪ್ರಸಕ್ತ ರಾಷ್ಟ್ರ ರಾಜಕಾರಣ, ಮುಂಬರುವ ಲೋಕಸಭಾ ಚುನಾವಣೆ ಹಾಗೂ ರಾಷ್ಟ್ರಪತಿಗಳ ಚುನಾವಣೆ ಹೆಸರಲ್ಲಿ “ದೇಶ ಪರ್ಯಟನೆ’ ನಡೆಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್‌ ರಾವ್‌ ಅವರು ಗುರುವಾರ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಾರೆ.

Advertisement

ದೇವೇಗೌಡರ ಬೆಂಗಳೂರಿನ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಕಾಂಗ್ರೆಸ್ಸೇತರ ಪರ್ಯಾಯ ಶಕ್ತಿ ಬೆಳೆಸುವ ಬಗ್ಗೆ ಚರ್ಚಿಸುವುದು ಈ ಭೇಟಿಯ ಉದ್ದೇಶವಾಗಿತ್ತು ಎನ್ನಲಾಗಿದೆ.

ಸುದೀರ್ಘ‌ 3 ಗಂಟೆಗಳ ಕಾಲ ಮಾತುಕತೆ ಕೆ.ಸಿ. ಚಂದ್ರಶೇಖರ್‌ ರಾವ್‌ ಹಾಗೂ ಎಚ್‌.ಡಿ. ದೇವೇಗೌಡರ ಮಾತುಕತೆ ನಡೆದಿದ್ದು, ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಹ ಉಪಸ್ಥಿತರಿದ್ದರು.

2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ವಿವಿಧ ರಾಜ್ಯಗಳ ಪ್ರವಾಸ ಕೈಗೊಂಡಿರುವ ಕೆ.ಸಿ. ಚಂದ್ರಶೇಖರ್‌ ರಾವ್‌, ಉತ್ತರ ಪ್ರದೇಶ, ದೆಹಲಿ ಹಾಗೂ ಪಂಜಾಬ್‌ ಪ್ರವಾಸ ಕೈಗೊಂಡು, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರನ್ನು ಭೇಟಿ ಮಾಡಿದ್ದಾರೆ. ಪ್ರವಾಸದ ಮುಂದುವರಿದ ಭಾಗವಾಗಿ ಗುರುವಾರ ಕರ್ನಾಟಕಕ್ಕೆ ಭೇಟಿ ಕೊಟ್ಟು ಎಚ್‌.ಡಿ. ದೇವೇಗೌಡರೊಂದಿಗೆ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆ.ಸಿ. ಚಂದ್ರಶೇಖರ್‌ ರಾವ್‌ ಬಿಹಾರ, ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.

ಉಜ್ವಲ ಭಾರತ ಆಗಬೇಕು: ಕೆಸಿಆರ್‌ :

Advertisement

ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಸಿ. ಚಂದ್ರಶೇಖರ್‌ ರಾವ್‌, ದೇಶದಲ್ಲಿ ಅನೇಕ ಸರ್ಕಾರಗಳು ಬಂದು ಹೋಗಿದ್ದಾರೆ, ಹಲವು ಪ್ರಧಾನಿಗಳು ಆಡಳಿತ ನಡೆಸಿದ್ದಾರೆ. ಆದರೆ, ದೇಶ ಹೇಗೆ ಇತ್ತೋ ಹಾಗೆಯೇ ಇದೆ. ಅಮೇರಿಕಾಗಿಂತ ದೊಡ್ಡ ಆರ್ಥಿಕ ಶಕ್ತಿ ಆಗುವ ಎಲ್ಲಾ ಅವಕಾಶಗಳು-ಸಂಪನ್ಮೂಲಗಳು ಭಾರತದಲ್ಲಿವೆ. ಆದರೆ, ನಮಗಿಂತ ಕಡಿಮೆ ಜಿಡಿಪಿ ಇರುವ ಚೀನಾ 16 ಟ್ರಿಲಿಯನ್‌ ಅರ್ಥಿಕತೆ ಬಗ್ಗೆ ಮಾತನಾಡುತ್ತಿದ್ದರೆ, ನಾವು 5 ಟ್ರಿಲಿಯನ್‌ ಆರ್ಥಿಕತೆಯ ಹುಸಿ ಕನಸು ಕಾಣುತ್ತಿದ್ದೇವೆ. ಇದು ದೇಶಕ್ಕೆ ಮಾಡುವ ಅಪಮಾನ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದೇವೆ. ಆದರೆ. ದೇಶದಲ್ಲಿ ದಲಿತರು, ಆದಿವಾಸಿಗಳು ಸೇರಿ ಯಾರೂ ನೆಮ್ಮದಿಯಿಂದ ಇಲ್ಲ. ಬಿಜೆಪಿಗೆ ವಿರುದ್ಧ ಕಾಂಗ್ರೆಸ್ಸೇತರ ಪರ್ಯಾಯದ ಅವಶ್ಯಕತೆ ಈ ದೇಶಕ್ಕಿದೆ. ಭಾರತ ಬದಲಾಗಬೇಕು. ಉಜ್ವಲ ಭಾರತವಾಗಬೇಕು. ಈ ನಿಟ್ಟಿನಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಎರಡೂ¾ರು ತಿಂಗಳಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ ಎಂದರು.

ತೃತೀಯ ರಂಗ ಅಲ್ಲ; ಪರ್ಯಾಯ: ಎಚ್‌ಡಿಕೆ :

ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ದೇಶದ ಹಿತದ ದೃಷ್ಟಿಯಿಂದ ಇಂದಿನ ಭೇಟಿಗೆ ಸಾಕಷ್ಟು ಮಹತ್ವವಿದೆ. ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಾಂಗ್ರೆಸ್‌ ದಿನೇ ದಿನೇ ಕ್ಷೀಣಿಸುತ್ತಿದೆ. ಬಿಜೆಪಿಗೆ ವಿರುದ್ಧವಾಗಿ ಕಾಂಗ್ರೆಸ್ಸೇತರ ಪರ್ಯಾಯ ಈ ದೇಶಕ್ಕೆ ಬೇಕಿದೆ. ತೃತೀಯ ರಂಗದ ಬಗ್ಗೆ ಚರ್ಚೆ ನಡೆದಿಲ್ಲ, ಅದರ ಪ್ರಶ್ನೆಯೂ ಇಲ್ಲ. ಬಿಜೆಪಿಗೆ ಪರ್ಯಾಯ ಏನು ಎಂಬುದರ ಬಗ್ಗೆ ಚರ್ಚೆ ಆಗಿದೆ. ಕೆ.ಸಿ. ಚಂದ್ರಶೇಖರ್‌ ರಾವ್‌ ಹಾಗೂ ಎಚ್‌.ಡಿ. ದೇವೇಗೌಡರ ಭೇಟಿ ಮುಂದಿನ ರಾಜಕೀಯ ಹೋರಾಟಕ್ಕೆ ಭದ್ರ ಬುನಾದಿ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next