Advertisement

ತೆಂಕಿಲ ದರ್ಖಾಸು: ಬಿರುಕು ಹೆಚ್ಚಳ

01:52 AM Aug 14, 2019 | sudhir |

ಪುತ್ತೂರು: ನಗರದ ತೆಂಕಿಲ ದರ್ಖಾಸಿನ ಗುಡ್ಡ ಭಾಗದಲ್ಲಿ ಕಂಡು ಬಂದಿರುವ ಬಿರುಕು ಮಂಗಳವಾರ ಮತ್ತಷ್ಟು ಹೆಚ್ಚಾಗಿ, ಮಣ್ಣಿನ ಪದರ ಕೆಳಭಾಗಕ್ಕೆ ಕುಸಿದಿರುವುದು ಆತಂಕ ಮೂಡಿಸಿದೆ.

Advertisement

2 ದಿನಗಳ ಕಾಲ ಕಡಿಮೆಯಾಗಿದ್ದ ಮಳೆ ಸೋಮವಾರ ರಾತ್ರಿ ಮತ್ತೆ ಬಿರುಸು ಪಡೆದಿರುವುದು ಅಪಾಯ ಹೆಚ್ಚಾಗುವ ಅನುಮಾನ ಮೂಡಿಸಿದೆ. ಈಗಾಗಲೇ ಸಮುದಾಯ ಭವನ ಮತ್ತು ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ ಸ್ಥಳೀಯ ನಿವಾಸಿಗಳಲ್ಲಿ ಜೀವನ ಕೊಂಡಿಯಾಗಿದ್ದ ಆವಾಸ ಸ್ಥಳವನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭೀತಿ ಮೂಡಿದೆ.

ರವಿವಾರ ಗುಡ್ಡದಲ್ಲಿ 200 ಮೀ. ಉದ್ದ ಮತ್ತು 1 ಇಂಚಿನಷ್ಟು ಅಗಲಕ್ಕೆ ಕಾಣಿಸಿಕೊಂಡಿದ್ದ ಬಿರುಕು ಮಂಗಳವಾರ 3 ಇಂಚಿನಷ್ಟು ವಿಸ್ತಾರಗೊಂಡಿದೆ. ಮಣ್ಣಿನ ಪದರ 3 ಇಂಚಿನಷ್ಟು ಕೆಳಕ್ಕೆ ಕುಸಿದಿದೆ. ನೇರ ಮತ್ತು ಅಡ್ಡಲಾಗಿ ಬಿರುಕು ಕಾಣಿಸಿದ್ದು, ಜೋಡುಪಾಲ, ಚಾರ್ಮಾಡಿ ಘಟನೆ ನೆನಪಿಸುವಂತೆ ಮಾಡಿದೆ.

ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳದಲ್ಲಿ ಲಘು ಭೂ ಕಂಪನ ಸಂಭವಿಸುವ ಸಾಧ್ಯತೆ ಇರುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ 11 ಕುಟುಂಬಗಳನ್ನು ಉಪವಿಭಾಗಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಜಾಗ, ಸೂರಿನ ಚಿಂತೆ
11 ಕುಟುಂಬಗಳ ಪೈಕಿ 4 ಮಂದಿಯ ಗಂಗಾಧರ್‌ ಕುಟುಂಬ, ಮಹಾಲಿಂಗ ಅವರ ಕುಟುಂಬದ ನಾಲ್ವರು, ಸತೀಶ್‌ ಕುಟುಂಬದ ಇಬ್ಬರು ಮಕ್ಕಳ ಸಹಿತ 5 ಮಂದಿಗೆ ನಗರದ ನಗರಸಭೆಯ ಸಮುದಾಯ ಭವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಉಳಿದ ಕುಟುಂಬಗಳು ಸಂಬಂಧಿಕರ ಮನೆಯನ್ನು ಆಶ್ರಯಿಸಿವೆ.

Advertisement

ಅಲ್ಲಿನ ಮಂದಿಯಲ್ಲಿ ಮನೆ, ಜಾಗದ ಚಿಂತೆ ಆವರಿಸಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಲ್ಲಿ ಮನೆ ಬಿಡಲೂ ಸಿದ್ಧರಾಗಿದ್ದೇವೆ ಎಂದು ಸ್ಥಳೀಯ ನಿವಾಸಿಗಳ ಪೈಕಿ ಕೆಲವರು ಹೇಳಿದ್ದಾರೆ.

ಶಾಸಕ, ಜಿ.ಪಂ. ಅಧ್ಯಕ್ಷೆ ಭೇಟಿ
ಸಮುದಾಯ ಕೇಂದ್ರಕ್ಕೆ ಶಾಸಕ ಅಂಗಾರ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಗುಡ್ಡ ಬಿರುಕು ಬಿಟ್ಟ ಸ್ಥಳಕ್ಕೆ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಭೇಟಿ ನೀಡಿದರು. ನ.ಪಂ., ತಾ.ಪಂ. ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ತರನ್ನು ಭೇಟಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next