Advertisement

ತೇಜಸ್ವಿ ಸೂರ್ಯ ಅಭ್ಯರ್ಥಿ: ಸಂಭ್ರಮ, ವಿರೋಧ

11:43 AM Mar 27, 2019 | Lakshmi GovindaRaju |

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಆಯ್ಕೆಯಾಗಿದ್ದು, ಟಿಕೆಟ್‌ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ ಕುಮಾರ್‌ ಸೇರಿದಂತೆ ಅವರ ಅಪಾರ ಬೆಂಬಲಿಗರಿಗೆ ತೀವ್ರ ಅಸಮಾಧಾನವಾಗಿದೆ.

Advertisement

ಇದರಿಂದ ಒಂದಿಷ್ಟು ಕಾರ್ಯಕರ್ತರಲ್ಲಿ ಸಂಭ್ರಮವಿದ್ದರೆ, ಇನ್ನಷ್ಟು ಕಾರ್ಯಕರ್ತರು- ಬೆಂಬಲಿಗರಲ್ಲಿ ಬೇಸರ, ಅಸಮಾಧಾನವಿತ್ತು. ಸೋಮವಾರ ತಡರಾತ್ರಿ 1 ಗಂಟೆ ಹೊತ್ತಿಗೆ ತೇಜಸ್ವಿ ಸೂರ್ಯ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಘೊಷಣೆ ಮಾಡಿದ್ದು, ತೇಜಸ್ವಿನಿ ಅನಂತ ಕುಮಾರ್‌ ಅವರ ಬೆಂಬಲಿಗರಲ್ಲಿ ದಿಗ್ಭ್ರಮೆ ಮೂಡಿಸಿತ್ತು.

ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಟಿಕೆಟ್‌ ಕೈತಪ್ಪಿದ್ದನ್ನು ವಿರೋಧಿಸಿ ಬೆಂಬಲಿಗರು ಸೋಮವಾರ ತಡರಾತ್ರಿಯೇ ನಿವಾಸದ ಬಳಿ ಜಮಾಯಿಸಿ ಘೋಷಣೆ ಕೂಗಿದರು. ಮಂಗಳವಾರ ಬೆಳಗ್ಗೆಯೂ ತೇಜಸ್ವಿನಿ ಅನಂತ ಕುಮಾರ್‌ ನಿವಾಸದ ಬಳಿ ಜಮಾಯಿಸಿದ್ದ ನೂರಾರು ಬೆಂಬಲಿಗರು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.

ಈ ನಡುವೆ ಅವರ ನಿವಾಸ ಬಳಿ ಬಂದ ತೇಜಸ್ವಿ ಸೂರ್ಯ ಅವರು ಕೆಲಹೊತ್ತು ಕಾರಿನಲ್ಲೇ ಉಳಿದಿದ್ದರು. ಬಳಿಕ‌ ಶಾಸಕರಾದ ಚಿಕ್ಕಪ್ಪ ರವಿಸುಬ್ರಹ್ಮಣ್ಯ ಅವರೊಂದಿಗೆ ತೇಜಸ್ವಿನಿ ಅನಂತ ಕುಮಾರ್‌ ಅವರ ನಿವಾಸಕ್ಕೆ ತೆರಳಿ ಬೆಂಬಲ ಕೋರಿದರು. ಈ ಸಂದರ್ಭದಲ್ಲಿ ಹಲವು ಬೆಂಬಲಿಗರು “ಅನಂತ ಕುಮಾರ್‌ ಅಮರ್‌ ರಹೆ’, “ಬೇಕೆ ಬೇಕು ನ್ಯಾಯ ಬೇಕು’ ಎಂದು ಘೋಷಣೆ ಕೂಗಿದ್ದರಿಂದ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.

ಬಳಿಕ ತೇಜಸ್ವಿ ಸೂರ್ಯ ಸೇರಿದಂತೆ ಇತರೆ ಪ್ರಮುಖರು ಅಲ್ಲಿಂದ ಹೊರಟರು. ಆಗ “ಗೋ ಬ್ಯಾಕ್‌ ತೇಜಸ್ವಿ ಸೂರ್ಯ’ ಎಂದು ಕೆಲ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ನಡುವೆ ಕೆಲ ಬೆಂಬಲಿಗರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಲಾರಂಭಿಸಿದರು.

Advertisement

ಕೊನೆಗೆ ಮನೆಯಿಂದ ಹೊರಗೆ ಬಂದ ತೇಜಸ್ವಿನಿ ಅನಂತ ಕುಮಾರ್‌ ಅವರು ಬೆಂಬಲಿಗರು, ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು. ಈಗಾಗಲೇ ತೇಜಸ್ವಿನಿ ಅನಂತ ಕುಮಾರ್‌ ಅವರ ಆಶೀರ್ವಾದವನ್ನೂ ಪಡೆದಿದ್ದೇನೆ. ಅನಂತ ಕುಮಾರ್‌ ಅವರ ರಾಜಕೀಯ ಪರ್ವ ಅಷ್ಟು ಸುಲಭವಾಗಿ ಅಂತ್ಯವಾಗುವುದಿಲ್ಲ ಎಂದು ತಿಳಿಸಿದರು.

ಪಕ್ಷದ ಹಿರಿಯ ನಾಯಕರಾದ ಆರ್‌.ಅಶೋಕ್‌, ವಿ.ಸೋಮಣ್ಣ ಇತರರು ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರನ್ನೇ ಕೇಂದ್ರದ ವರಿಷ್ಠರಿಗೆ ಶಿಫಾರಸು ಮಾಡುವುದಾಗಿ ಪ್ರಕಟಿಸಿದ್ದರು. ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸೂಕ್ತ ಎಂದು ನಾನು ಸಹ ಟ್ವೀಟ್‌ ಮಾಡಿದೆ. ಅನಂತಕುಮಾರ್‌ ಅವರು ನನ್ನಂತಹ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ನನಗೂ ಇದು ಬಯಸದೇ ಬಂದ ಅವಕಾಶ. ಈ ವೇಳೆ ಕಾರ್ಯಕರ್ತರ ನೋವು ಸಹಜ.
-ತೇಜಸ್ವಿ ಸೂರ್ಯ ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next