ಬಂಟ್ವಾಳ: ಬಿ.ಸಿ.ರೋಡು ಸಮೀಪದ ಪಲ್ಲಮಜಲಿನಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಸರಕಾರದ ಕಾಮಗಾರಿಗೆ ಉಪಯೋಗಿಸುವ ನಾಟ್ ಫಾರ್ ಸೇಲ್ ಎಂದು ನಮೂದಿಸಿರುವ ಗೋಣಿ ಚೀಲಗಳಲ್ಲಿ ಸಿಮೆಂಟ್ ಪತ್ತೆಯಾಗಿದ್ದು, ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ಸಿಮೆಂಟ್ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಬಿ.ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಸೋಮಸುಂದರ್ ಕೆ. ಅವರಿಗೆ ಸೇರಿದ ಸರ್ವೇ ನಂ. 258ರ ನಿವೇಶನದಲ್ಲಿ ಮನೆ ನಿರ್ಮಾಣಗೊಳ್ಳುತ್ತಿದ್ದು, ಅಲ್ಲಿ ಸರಕಾರದ ಕಾಮಗಾರಿಗೆ ಉಪ ಯೋಗಿಸುವ ಸಿಮೆಂಟ್ ಬಳಸುತ್ತಿದ್ದಾರೆ ಎಂದು ಚೆನ್ನೈತ್ತೋಡಿ ಗ್ರಾಮದ ತಿಮರಡ್ಕ ನಿವಾಸಿ ಪದ್ಮನಾಭ ಸಾಮಂತ್ ಅವರು ದೂರಿನ ನೀಡಿದ್ದರು.
ಅದರಂತೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದ ತಂಡ ದಾಳಿ ನಡೆಸಿದಾಗ 21 ಸಿಮೆಂಟ್ ಗೋಣಿಗಳು ಪತ್ತೆಯಾಗಿದ್ದು, ಜತೆಗೆ 5 ಸಿಮೆಂಟ್ ಉಪಯೋಗಿಸಿದ ಖಾಲಿ ಗೋಣಿ ಚೀಲಗಳು ಕೂಡ ಪತ್ತೆಯಾಗಿವೆ. ಈ ಕುರಿತು ಸ್ಥಳೀಯ ಕಾಮಗಾರಿ ನಿರ್ವಹಿಸುವ ವ್ಯಕ್ತಿಯ ಬಳಿ ಕೇಳಿದಾಗ ಮನೆಯ ಮಾಲಕರೇ ಸಿಮೆಂಟ್ ತಂದಿದ್ದಾರೆ ಎಂಬ ಉತ್ತರ ನೀಡಿದ್ದಾರೆ. ಪ್ರಸ್ತುತ ಕಂದಾಯ ಇಲಾಖೆ ಸಿಮೆಂಟ್ ಗೋಣಿಗಳನ್ನು ವಶಕ್ಕೆ ಪಡೆದು ಮುಂದಿನ ಪರಿಶೀಲನೆಗಾಗಿ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಲಿದ್ದೇವೆ ಎಂದು ತಹಶೀಲ್ದಾರ್ ಕೂಡಲಗಿ ಅವರು ತಿಳಿಸಿದ್ದಾರೆ.