ಸಿಕ್ಕಿಂ: ಪೂರ್ವ ಸಿಕ್ಕಿಂನಲ್ಲಿ ಮಂಗಳವಾರ ಬೆಳಗ್ಗೆ ಭಾರೀ ಭೂಕುಸಿತ ಸಂಭವಿಸಿದ್ದು ಪರಿಣಾಮ ವಿದ್ಯುತ್ ಸ್ಥಾವರವೊಂದು ನೆಲಸಮಗೊಂಡಿರುವ ಘಟನೆ ನಡೆದಿದೆ.
ಕಳೆದ ಕೆಲವು ವಾರಗಳಿಂದ ಸಿಕ್ಕಿಂನಲ್ಲಿ ಸಣ್ಣಪುಟ್ಟ ಭೂಕುಸಿತದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಅದರಂತೆ ಇಂದು (ಮಂಗಳವಾರ) 510 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರದ ಪಕ್ಕದಲ್ಲಿರುವ ಗುಡ್ಡ ಕುಸಿದು ಕಟ್ಟಡದ ಮೇಲೆ ಬಿದ್ದಿದೆ ಪರಿಣಾಮ ಇಡೀ ಕಟ್ಟಡ ಕುಸಿದುಬಿದ್ದಿದೆ.
ಪೂರ್ವ ಸಿಕ್ಕಿಂನ ಸಿಂಗ್ಟಾಮ್‌ನ ದೀಪು ದಾರಾ ಬಳಿಯ ಬಲೂಟರ್‌ನಲ್ಲಿ ಈ ಘಟನೆ ಸಂಭವಿಸಿದೆ ಪರಿಣಾಮ ತೀಸ್ತಾ ಸ್ಟೇಜ್ 5 ಅಣೆಕಟ್ಟಿನ ವಿದ್ಯುತ್ ಕೇಂದ್ರವು ಮಣ್ಣಿನ ಅವಶೇಷಗಳದಿ ಬಿದ್ದಿದೆ.
ಗುಡ್ಡ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದೊಡ್ಡ ದೊಡ್ಡ ಬಂಡೆಕಲ್ಲುಗಳು ಒಮ್ಮಿಂದೊಮ್ಮೆಗೆ ಕುಸಿದು ಬೀಳುವ ಭಯಾನಕ ವಿಡಿಯೋ ಹರಿದಾಡುತ್ತಿದ್ದು ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ, ಕಾರಣ ಕಳೆದ ಕೆಲ ದಿನಗಳಿಂದ ಸಿಕ್ಕಿಂ ಸುತ್ತ ಮುತ್ತ ಭೂಕುಸಿತ ಸಂಭವಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ವಿದ್ಯುತ್ ಕೇಂದ್ರವನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು ಎನ್ನಲಾಗಿದೆ. ಅಲ್ಲದೆ ದೂರದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭೂಕುಸಿತದ ದೃಶ್ಯವನ್ನು ಸೆರೆಹಿಡಿದಿದ್ದಾರೆ ಎನ್ನಲಾಗಿದೆ.