Advertisement

ತಾಂತ್ರಿಕ ಪದವೀಧರೆ ಮೆಚ್ಚಿದ ಕೃಷಿ ಕಾಯಕ

04:59 PM May 18, 2022 | Team Udayavani |

ಮುಧೋಳ: ಆಧುನಿಕ ಯುಗದಲ್ಲಿ ಅದರಲ್ಲೂ ಯುವ ಜನಾಂಗದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಬೇಕೆಂಬ ಹಂಬಲ ಹೆಚ್ಚುತ್ತಿದೆ. ತಾಂತ್ರಿಕ ಪದವಿ ಪಡೆದ ಸಾಕಷ್ಟು ಜನ ಹೆಚ್ಚಾಗಿ ಕೃಷಿ ಕ್ಷೇತ್ರದತ್ತ ವಾಲುತ್ತಿದ್ದಾರೆ.

Advertisement

ತಾಲೂಕಿನ ಮೆಳ್ಳಿಗೇರಿ ಗ್ರಾಮದ ಎಂಜಿನಿಯರಿಂಗ್‌ ಪದವೀಧರೆ ಸುನೀತಾ ಜೈನಾಪುರ ಈಗ ಕೃಷಿ ಕಾಯಕದಲ್ಲಿ ನಿರತರಾಗಿ ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದು, ಸದ್ಯ ಕೃಷಿ ಕ್ಷೇತ್ರದಲ್ಲಿ ಕೇಶರ ಮಾವಿನ ಸಸಿ ತಯಾರಿಸುವುದರ ಮೂಲಕ ಎಲ್ಲರೂ ತನ್ನತ್ತ ನೋಡುವಂತೆ ಮಾಡಿದ್ದಾರೆ. ಬಿಇ ಪೂರ್ಣಗೊಳಿಸಿರುವ ಸುನೀತಾ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು.

ಕೊರೊನಾದ ಲಾಕ್‌ಡೌನ್‌ ವೇಳೆ ಗ್ರಾಮಕ್ಕೆ ಆಗಮಿಸಿದ್ದರು. ಸಹೋದರಿ ಸುಜಾತಾ ಜೀರಗಾಳ ಹಾಗೂ ಅವರ ಪತಿ ರಮೇಶ ಜೀರಗಾಳ ಅವರು ತೋಟದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ್ದರು. ತಮ್ಮ 5 ಎಕರೆ ಜಮೀನಿನಲ್ಲಿ ಕೇಶರ ಮಾವು ಬೆಳೆದು ಯಶಸ್ವಿಯಾಗಿದ್ದರು. ಎಕರೆಗೆ ಕನಿಷ್ಟ 5ರಿಂದ 6 ಲಕ್ಷ ಆದಾಯ ಪಡೆಯುತ್ತಿರುವುದನ್ನು ಗಮನಿಸಿದ ಸುನೀತಾ ಗುಜರಾತದಿಂದ ಮಾವಿನ ಸಸಿ ತರುವುದು ಸಾಮಾನ್ಯ ರೈತರಿಗೆ ಸಾಧ್ಯವಾಗಲ್ಲ.

ಗುಣಮಟ್ಟದ ಖಾತ್ರಿ ಸಸಿ ಸಿಗದೇ ರೈತರು ಮೋಸ ಹೋಗಬಾರದು. ಅದಲ್ಲದೇ ಕಡಿಮೆ ಶ್ರಮ ಅಧಿಕ ಲಾಭ ನೀಡುವ ಮಾವು ಇದೆಂದು ಮನಗಂಡು ಕೇಶರ ಮಾವು ಸಸಿ ಮಾಡಲು ಸಿದ್ಧರಾದರು. ಇವರ ಯೋಜನೆ ಕಾರ್ಯರೂಪಕ್ಕೆ ತರಲು ಸಹೋದರಿಯ ಪತಿ ರಮೇಶ ಜೀರಗಾಳ ಎಲ್ಲ ನೆರವು ನೀಡಲು ಸಿದ್ಧರಾದರು.

ಕೊಲ್ಹಾಪುರದ ಮಾವಿನ ಪಲ್ಪ ತಯಾರಿಕಾ ಘಟಕದಿಂದ 20 ಟನ್‌ ಮಾವಿನ ಬೀಜ (ಗೊಪ್ಪ) ತರಿಸಲಾಯಿತು. ಗ್ರೀನ್‌ ಹೌಸ್‌ನಲ್ಲಿ ಅವುಗಳಿಗೆ ಬೆಡ್‌ ನಿರ್ಮಿಸಿ ನಿಗದಿತ ತೇವಾಂಶ ಕಾಪಾಡಲು ರವದಿ ಹಾಕಲಾಯಿತು. ತಂದ ಮಾವಿನಗೊಪ್ಪದಲ್ಲಿ ಶೇ.30 ಮಾತ್ರ ಸಸಿ ಬಂದವು. ನಮ್ಮದೇ ಕೇಶರ ಮಾವಿನ ಮದರ್‌ ಪ್ಲ್ಯಾಂಟ್‌ನಿಂದ ನುರಿತ ಕೆಲಸಗಾರರ ಸಹಕಾರದಿಂದ ಕಸಿ ಮಾಡಲಾಯಿತು. ಸತತ ಪರಿಶ್ರಮದ ಫಲವಾಗಿ ಒಂದು ವರ್ಷದಲ್ಲಿ ಈಗ 1.40 ಕೇಶರ ಮಾವಿನ
ಸಸಿಗಳು ತಯಾರಾಗಿ ನಿಂತಿವೆ. ಇದರಲ್ಲಿ 40 ಸಾವಿರ ಸಸಿ ಸದ್ಯ ಮಾರಾಟಕ್ಕೆ ಸಿದ್ಧವಾಗಿದ್ದರೆ, ಜುಲೈನಲ್ಲಿ ಮತ್ತೆ ಒಂದು ಲಕ್ಷ ಸಸಿಗಳು ಮಾರಾಟಕ್ಕೆ ಸಿದ್ಧವಾಗಲಿವೆ.

Advertisement

ಸದ್ಯ 3.5 ಅಡಿಯಿಂದ 4 ಅಡಿ ಎತ್ತರವಾಗಿ ಬೆಳೆದಿವೆ. ಒಂದು ಸಸಿ ಸಿದ್ಧವಾಗಲು 30 ರೂ.ತಗುಲಿದೆ. ಒಂದು ಮಾವಿನ ಸಸಿಗೆ ನೂರಾರು ರೂಪಾಯಿ ನಿಗದಿ ಮಾಡಿದ್ದೇವೆ. ಕಡಿಮೆ ವೆಚ್ಚ ಅಧಿ ಕ ಲಾಭ ನೀಡುವ ಮಾವು ಬೆಳೆಯನ್ನು ಕಡಿಮೆ ನೀರಿನಲ್ಲೂ ಬೆಳೆಯಬಹುದು. 24 ತಿಂಗಳಲ್ಲಿ ಆದಾಯ ನಿರೀಕ್ಷಿಸಬಹುದಾಗಿದೆ. ಮಾವಿನಲ್ಲಿ ಸಹ ಬೆಳೆಯಾಗಿ ಶೇಂಗಾ, ಹೆಸರು, ಕಡ್ಲಿ, ಈರುಳ್ಳಿ ಹಾಗೂ ಇತರೆ ತರಕಾರಿ ಬೆಳೆಯಬಹುದು.

ಕೇಶರ ಮಾವು ಅತ್ಯುತ್ತಮ ತಳಿಯಾಗಿದೆ. ಹೆಚ್ಚು ದಿನ ಬಾಳಿಕೆ ಬರುತ್ತದೆ. ಇದರ ರುಚಿ, ಸ್ವಾದ ಚೆನ್ನಾಗಿದೆ. ದೇಶದ ಗುಜರಾತ, ದೆಹಲಿ ಹಾಗೂ ಬ್ರಿಟನ್‌ ದೇಶಕ್ಕೂ ರಫ್ತಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ 900 ಸಸಿ ನಾಟಿ ಮಾಡಬಹುದು. ಒಂದು ಹಣ್ಣು 200 ಗ್ರಾಂದಿಂದ 700 ಗ್ರಾಂವರೆಗೆ ತೂಗುತ್ತದೆ. ವಾರ್ಷಿಕ ಎಕರೆಗೆ 5ರಿಂದ 6 ಲಕ್ಷ ಆದಾಯ ಗಳಿಸುತ್ತಿರುವುದಾಗಿ ರಮೇಶ ಜೀರಗಾಳ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ರಮೇಶ ಜೀರಗಾಳ ನಂ-9611370639 ಇಲ್ಲಿಗೆ ಸಂಪರ್ಕಿಸಬಹುದು.

ಕೃಷಿಯಲ್ಲಿ ಮಾಡಿದ ಕೆಲಸದ ತೃಪ್ತಿ ನೌಕರಿ ಮಾಡುವುದರಲ್ಲಿಲ್ಲ. ಶುದ್ಧವಾದ ಪರಿಸರದಲ್ಲಿ ನಮ್ಮ ಆಲೋಚನೆಗಳನ್ನು ಅನುಷ್ಠಾನಗೊಳಿಸಬಹುದು. ಮಾವ ಮತ್ತು
ನನ್ನ ಸಹೋದರಿ ನನ್ನ ವೈಜ್ಞಾನಿಕ ಯೋಜನೆಗೆ ಬೆಂಬಲ ನೀಡಿ ಪ್ರೋತ್ಸಾಹಿಸಿ ಎಲ್ಲ ವಿಧದ ನೆರವು ನೀಡುತ್ತಿದ್ದಾರೆ.
ಸುನೀತಾ ಜೈನಾಪುರ,
ತಾಂತ್ರಿಕ ಪದವೀಧರೆ.

Advertisement

Udayavani is now on Telegram. Click here to join our channel and stay updated with the latest news.

Next