Advertisement

ತಾಂತ್ರಿಕ ದೋಷ: 24 ಶಿಕ್ಷಕರ ವರ್ಗಕ್ಕೆ ತಡೆ

12:07 PM Aug 06, 2019 | Suhan S |

ಕಲಬುರಗಿ: ರಾಜ್ಯದಲ್ಲಿ ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಜಿಲ್ಲೆಯಲ್ಲಿ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಪೂರ್ಣಗೊಂಡಿದೆ. ಆದರೆ, ತಾಂತ್ರಿಕ ಕಾರಣದಿಂದ 24 ಶಿಕ್ಷಕರ ವರ್ಗಕ್ಕೆ ತಡೆ ಬಿದ್ದಿದೆ.

Advertisement

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 8,390 ಶಿಕ್ಷಕರಿದ್ದಾರೆ. 3,360 ಶಿಕ್ಷಕರು ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಶಿಕ್ಷಣ ಇಲಾಖೆ ವರ್ಗಾವಣೆ ನಿಯಮಗಳ ಪ್ರಕಾರ ಒಟ್ಟು ಶಿಕ್ಷಕರ ಪೈಕಿ ಕೇವಲ ಶೇ.4ರಷ್ಟು ಮಂದಿಯನ್ನು ಮಾತ್ರ ಕೋರಿಕೆ ವರ್ಗಾವಣೆಗೆ ಪರಿಗಣಿಸಲಾಗುತ್ತಿದೆ. ಅದರಂತೆ 336 ಶಿಕ್ಷಕರ ವರ್ಗಾವಣೆಗೆ ಅವಕಾಶ ಇತ್ತು. ಇದರಲ್ಲಿ 314 ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದಿದ್ದು, ಸ್ಥಳ ನಿಯುಕ್ತಿ ಮಾಡಿ ಶಿಕ್ಷಕರಿಗೆ ಪ್ರಮಾಣ ಪತ್ರ ಹಸ್ತಾಂತರಿಸಲಾಗುತ್ತಿದೆ.

ಎರಡೂವರೆ ದಿನದಲ್ಲೇ ಮುಕ್ತಾಯ: ಜಿಲ್ಲಾ ಮಟ್ಟದಲ್ಲಿ ವರ್ಗಾವಣೆಗೆ 3,360 ಕೋರಿಕೆ ಅರ್ಜಿ ಬಂದಿದ್ದರಿಂದ 7 ದಿನಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ವೇಳಾ ಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿತ್ತು. ನಗರದ ಪ್ರಾತ್ಯಕ್ಷಿತ ಪ್ರೌಢಶಾಲೆ ಕಟ್ಟಡದಲ್ಲಿ ಆ.1ರಿಂದ 7ರ ವರೆಗೆ ಪ್ರತಿ ದಿನ ಸರಾಸರಿ 500 ಶಿಕ್ಷಕರ ಕೌನ್ಸೆಲಿಂಗ್‌ ನಡೆಸಲು ಮುಂದಾಗಿತ್ತು. ಆದರೆ, ಕೋರಿಕೆ ವರ್ಗಾವಣೆಗೆ ಸಲ್ಲಿಕೆಯಾದ ಬೃಹತ್‌ ಅರ್ಜಿ ಸಂಖ್ಯೆ ಕಂಡು ಹಲವರು ಶಿಕ್ಷಕರು ಕೌನ್ಸೆಲಿಂಗ್‌ನಲ್ಲೇ ಪಾಲ್ಗೊಳ್ಳಲಿಲ್ಲ. ಆದ್ದರಿಂದ ಆ.1, 2 ಮತ್ತು 3ರಂದು ಮಧ್ಯಾಹ್ನದೊಳಗೆ ಇಡೀ ಕೌನ್ಸೆಲಿಂಗ್‌ ಪ್ರಕ್ರಿಯೆ ಮುಕ್ತಾಯಗೊಳಿಸಲಾಗಿದೆ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರು, ಹೃದಯ ಶಸ್ತ್ರಚಿಕಿತ್ಸೆ ಮತ್ತು ಅಂಗಾಂಗ ಕಸಿಗೆ ಒಳಪಟ್ಟವರು, ದೈಹಿಕ ಅಂಗವಿಕರು, ವಿಧವಾ ಶಿಕ್ಷಕರು, ಪತಿ-ಪತ್ನಿ ಪ್ರಕರಣದಲ್ಲಿ ಶಿಕ್ಷಕರು ಕೋರಿಕೆ ಅರ್ಜಿ ಸಲ್ಲಿಸಲು ಅವಕಾಶ ಇತ್ತು. ಇತರ ಶಿಕ್ಷಕರು ಅರ್ಜಿ ಸಲ್ಲಿಸಹುದಾಗಿತ್ತು. ವರ್ಗಾವಣೆ ಬಯಸಿರುವವರು ಒಂದು ಕಾರಣವನ್ನು ಕಡ್ಡಾಯವಾಗಿ ನೀಡಲೇಬೇಕಿತ್ತು. ಕೌನ್ಸೆಲಿಂಗ್‌ ಸಂದರ್ಭದಲ್ಲಿ ನಿಖರವಾದ ಕಾರಣ ನೀಡಿದವರಿಗೆ ಆದ್ಯತೆ ಕೊಟ್ಟು ವರ್ಗಾವಣೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಗ ತಡೆ ರಾಜ್ಯದಲ್ಲೇ ಅಧಿಕ?: ಜಿಲ್ಲೆಯಲ್ಲಿ 8,390 ಶಿಕ್ಷಕರಿದ್ದು, 3,360 ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಸಿಕೆಯಾಗಿದ್ದವು. ಜತೆಗೆ 336 ಶಿಕ್ಷಕರನ್ನು ವರ್ಗಾವಣೆ ಮಾಡಬೇಕಿತ್ತು. ವರ್ಗಾವಣೆ ಕೋರಿರುವ ಶಿಕ್ಷಕರು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದರು. ಅಲ್ಲಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್‌ಲೈನ್‌ ಅರ್ಜಿ ಸ್ವೀಕರಿಸಿ ಆನ್‌ಲೈನ್‌ನಲ್ಲೇ ಮುಂದಿನ ಕ್ರಮಕ್ಕೆ ರವಾನಿಸಿದ್ದರು. ಆದರೆ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವರ್ಗಾವಣೆಗೆ ಸಲ್ಲಿಕೆಯಾದ ಅರ್ಜಿ ಜಿಲ್ಲೆಯಲ್ಲಿ ಅಧಿಕವಾಗಿದ್ದವು. ಜತೆಗೆ ಬೇರೆ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಶಿಕ್ಷಕ ಸ್ಥಾನಗಳ ವರ್ಗಾವಣೆಗೆ ಮಾತ್ರ ತೊಂದರೆಯಾಗಿದೆ. ಜಿಲ್ಲೆಯಲ್ಲಿ ತಾಂತ್ರಿಕ ದೋಷದಿಂದ 24 ಶಿಕ್ಷಕರ ವರ್ಗಾವಣೆ ಸಮಸ್ಯೆಯಾಗಿದ್ದು. ಇದು ರಾಜ್ಯದಲ್ಲೇ ಅಧಿಕ ಎಂದು ಹೇಳಲಾಗಿದೆ.

ಸಿಗದವರಿಗೆ ಬೇಸರ: ಮೂರು ವರ್ಷಗಳಿಂದ ವರ್ಗಾವಣೆಗಾಗಿ ಎದುರು ನೋಡುತ್ತಿದ್ದ ಮತ್ತು ಕೋರಿಕೆ ಅರ್ಜಿ ಸಲ್ಲಿಸಿದವರ ಪೈಕಿ ನಿಯಮಗಳ ಪ್ರಕಾರ ನಿಖರ ಕಾರಣ ನೀಡಿದ ಶಿಕ್ಷಕರಿಗೆ ಮಾತ್ರ ವರ್ಗಾವಣೆ ಅವಕಾಶ ಸಿಕಿತ್ತು. ಅವಕಾಶ ಸಿಗದ ಶಿಕ್ಷಕರು ವರ್ಗಾವಣೆ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇನ್ನೂ ಪ್ರಕ್ರಿಯೆ ಬಾಕಿ: ಪ್ರಾಥಮಿಕ ಶಾಲೆ ಹಂತದ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಮಾತ್ರ ಪೂರ್ಣಗೊಂಡಿದ್ದು, ಇನ್ನು ಇತರ ನಾಲ್ಕು ಹಂತದ ವರ್ಗಾವಣೆಗೆ ಕೌನ್ಸೆಲಿಂಗ್‌ ಬಾಕಿ ಇದೆ. ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು, 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರ ಕಡ್ಡಾಯ ಹಾಗೂ ಪರಸ್ಪರ ವರ್ಗಾವಣೆ ಪ್ರಕ್ರಿಯೆ ನಡೆಯಬೇಕಿದೆ.

ಆ.1ರಿಂದ 3ರವರೆಗೆ ಕೋರಿಕೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಿದ್ದೇವೆ. ವರ್ಗಾವಣೆ ಕೋರಿಕೆ ಒಟ್ಟು 3,360 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಶೇ.4ರ ನಿಯಮದಂತೆ ಜಿಲ್ಲೆಯಲ್ಲಿ 336 ಶಿಕ್ಷಕರ ವರ್ಗಾವಣೆಗೆ ಅವಕಾಶ ಇತ್ತು. ಆದರೆ, 314 ಶಿಕ್ಷಕರ ವರ್ಗಾವಣೆ ಪೂರ್ಣಗೊಳಿಸಿದ್ದೇವೆ. ತಾಂತ್ರಿಕ ದೋಷದಿಂದ 24 ಶಿಕ್ಷಕರ ವರ್ಗಾವಣೆ ಮಾಡಲು ಆಗಿಲ್ಲ. ಇದು ಹಿರಿಯ ಪ್ರಾಥಮಿಕ ಶಾಲೆಯ 6, 7, 8ನೇ ತರಗತಿ ಶಿಕ್ಷಕರ ಸಮಸ್ಯೆಯಾಗಿದ್ದು, ಪರಿಶೀಲಿಸಿ ಶೀಘ್ರವೇ ಪರಿಹರಿಸಲಾಗುವುದು.

•ಶಾಂತಗೌಡ, ಡಿಡಿಪಿಐ, ಕಲಬುರಗಿ

 

•ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next