ಬೀದರ್: ಜಿಲ್ಲೆಯ ಕಾರಂಜಾ ಯೋಜನೆಗಾಗಿ ಭೂಮಿ ಕಳೆದುಕೊಂಡು ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿರುವ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಳಗಾವಿ ಸುವರ್ಣಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ (ಡಿ.19) ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್, ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಸಂತ್ರಸ್ತರ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದು ಹಲವು ವರ್ಷಗಳ ಹಿಂದಿನ ಸಮಸ್ಯೆಯಾಗಿದ್ದು ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ್ ಜಿಲ್ಲೆಯ 29227 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1970ರ ದಶಕದಲ್ಲಿ ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಲಾಗಿದ್ದು, ಬೆಲೆ ಕಟ್ಟಲೂ ಸಾಧ್ಯವಾಗದ ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಇಂದಿಗೂ ಸೂಕ್ತ ಪರಿಹಾರ ಲಭಿಸಿಲ್ಲ. ಭೂಮಿ ಕಳೆದುಕೊಂಡ ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರತಿ ಎಕರೆಗೆ 88 ಸಾವಿರ ಪರಿಹಾರ ನೀಡುವಂತೆ ಒಂದು ಪ್ರಕರಣದಲ್ಲಿ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಒಂದು ಬಾರಿಯ ವಿಶೇಷ ಪ್ಯಾಕೇಜ್ (ಕೃಪಾಧನ) ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಧರಂಸಿಂಗ್ ಮುಖ್ಯಮಂತ್ರಿಗಳಾಗಿದ್ದಾಗ 2005ರಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು, ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ 2012ರಲ್ಲಿ ತನ್ನ ವರದಿ ನೀಡಿ, ಸಂತ್ರಸ್ತರ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ, ಸಚಿವ ಸಂಪುಟ ಈ ಶಿಫಾರಸ್ಸನ್ನು ತಿರಸ್ಕರಿಸಿದೆ ಎಂದು ವಿವರಿಸಿದರು.
ಇತ್ತೀಚೆಗೆ ಸುಪ್ರೀಂಕೋರ್ಟ್ “ಸಿವಿಲ್ ಮೇಲ್ಮನವಿ ಸಂಖ್ಯೆ 1943/2022ರಲ್ಲಿ ಒಂದೇ ಸ್ವರೂಪದ ಪ್ರಕರಣಗಳಲ್ಲಿ ಒಂದು ಪ್ರಕರಣಕ್ಕೆ ನೀಡಲಾದ ತೀರ್ಪು ಇತರರಿಗೂ ಅನ್ವಯಿಸುತ್ತದೆ” ಎಂದು ಹೇಳಿದೆ. ರಾಜ್ಯ ಹೈಕೋರ್ಟ್ ಚಂದ್ರಕಾಂತ್ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಒಂದೇ ಅಧಿಸೂಚನೆಯಡಿ ಭೂಸ್ವಾಧೀನವಾದ ಎಲ್ಲರಿಗೂ ಸಮಾನವಾದ ಪರಿಹಾರ ನೀಡಬೇಕು ಎಂದು ತಿಳಿಸಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಸ್ವಾಭಾವಿಕ ನ್ಯಾಯಾಯದ ತತ್ವ ಮತ್ತು ನ್ಯಾಯ ಸಮಾನತೆ ಕಾಪಾಡಲು ಹೆಚ್ಚಿನ ಪರಿಹಾರ ನೀಡುವುದು ಉಚಿತವಾಗಿದೆ ಎಂದು ಸಭೆಗೆ ಈಶ್ವರ ಖಂಡ್ರೆ ತಿಳಿಸಿದರು.
ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಒಂದು ಬಾರಿಯ ವಿಶೇಷ ಪ್ಯಾಕೇಜ್ (ಕೃಪಾಧನ -ಎಕ್ಸ್ ಗ್ರೇಷಿಯಾ) ಮೊತ್ತ ನೀಡಿ. ಅವರ ಬದುಕಿಗೆ ತಾವು ಆಸರೆ ಆಗಬೇಕು ಎಂದು ಕೋರಿದರು
ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಪ್ರಭು ಚವ್ಹಾಣ್, ಮಾಜಿ ಸಚಿವ ರಾಜಶೇಖರ ಪಾಟೀಲ್ ಮತ್ತಿತರರೂ ಕಾರಂಜಾ ಸಂತ್ರಸ್ತರ ಸಮಸ್ಯೆಯನ್ನು ಮಾನವೀಯತೆಯಿಂದ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ತಾಂತ್ರಿಕ ಸಮಿತಿ ರಚಿಸಿ, ಅಧ್ಯಯನ ವರದಿ ಬಂದ ಬಳಿಕ ಕ್ರಮ ವಹಿಸುವುದಾಗಿ ತಿಳಿಸಿದರು.