ಬೆಂಗಳೂರು: ಆನ್‌ಲೈನ್ ಗೇಮಿಂಗ್‌ನಲ್ಲಿ ಸಾಫ್ಟ್ ವೇರ್ ಎಂಜಿನಿಯರೊಬ್ಬರು ಬರೋಬ್ಬರಿ 3 ಕೋಟಿ ರೂ. ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಗರದ ಮೈಕಲ್ ಚರ್ಚ್ ರಸ್ತೆ ನಿವಾಸಿ ನಿಶಾಂತ್ ಶ್ರೀವಾತ್ಸವ್ ಹಣ ಕಳೆದುಕೊಂಡಿರುವ ಸಾಫ್ಟ್ವೇರ್ ಎಂಜಿನಿಯರ್. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು, “ಪ್ಯಾಕೆಟ್ 52′ ಎಂಬ ಆನ್‌ಲೈನ್ ಗೇಮ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ), ಗೇಮ್ಸ್‌ಕಾರ್ಟ್‌ನ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಿರ್ದೇಶ್ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್ ನಿರ್ವಹಣೆಯ “ಪ್ಯಾಕೆಟ್ 52′ ಗೇಮಿಂಗ್ ವೇದಿಕೆ ಯಲ್ಲಿ ದೊಡ್ಡ ಪ್ರಮಾಣದ ವಂಚನೆ ಚಟುವಟಿಕೆಗಳು ನಡೆದಿವೆ. ಅದರಿಂದಾಗಿ ನನಗೆ 3 ಕೋಟಿ ರೂ. ನಷ್ಟವಾಗಿದೆ. ಇದರ ಜತೆಗೆ ಗೇಮ್ಸ್‌ಕ್ರಾಫ್ಟ್ ಸಿಇಒ ಮತ್ತು ಇತರರು ತಮಗೆ ವಂಚನೆ ಮಾಡಿದ್ದಾರೆ ಎಂದು ನಿಶಾಂತ್ ಶ್ರೀವಾತ್ಸವ್ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?: ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ “ಪ್ಯಾಕೆಟ್ 52′ ಆ್ಯಪ್‌ನಲ್ಲಿ ಅಕೌಂಟ್ ಐಡಿಯನ್ನು ಸೃಷ್ಟಿಸಲಾಯಿತು. ಆದರೆ, 2023ರ ಡಿಸೆಂಬರ್‌ನಲ್ಲಿ ಬಹಳಷ್ಟು ವಂಚನೆ ಚಟುವಟಿಕೆಗಳ ಬಗ್ಗೆ ಆ್ಯಪ್‌ನ ಬಳಕೆದಾರರು ದೂರುಗಳನ್ನು ನೀಡಿದ್ದರು. ಇದನ್ನು “ಪ್ಯಾಕೆಟ್ 52′ ಆ್ಯಪ್‌ನ ಮುಖ್ಯಸ್ಥರು ಕೂಡ ಒಪ್ಪಿಕೊಂಡಿದ್ದು, ತಮ್ಮ ಆನ್‌ಲೈನ್ ವೇದಿಕೆಯಲ್ಲಿ ವಂಚನೆಗಳಾಗುತ್ತಿವೆ ಎಂದು ತಿಳಿಸಿದ್ದರು. ಆದರೆ, ಯಾವ ರೀತಿಯ ವಂಚನೆ ಎಂಬುದನ್ನು ಗೇಮಿಂಗ್ ಸಂಸ್ಥೆ ತಿಳಿಸಿಲ್ಲ.
ಇನ್ನು ಈ ಆ್ಯಪ್‌ಗ್ಳ ನಿರ್ವಹಣೆ ಮಾಡುತ್ತಿರುವ ನಿರ್ದೇಶ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಇಂತಹ ಚಟುವಟಿಕೆಯ ವಿಷಯದಲ್ಲಿ ಪಾರದರ್ಶಕತೆ ಕಂಡು ಕೊಂಡಿಲ್ಲ ಮತ್ತು ನನ್ನನ್ನೂ ಸೇರಿ ಸಂತ್ರಸ್ತ ಬಳಕೆದಾರರಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಈ ಕುರಿತು ದೂರು ನೀಡಿದಾಗ “ಪ್ಯಾಕೆಟ್ 52′ ಗ್ರಾಹಕರ ಬೆಂಬಲಿತ ಸಹಾಯವಾಣಿ, ಸಣ್ಣ ಟೇಬಲ್‌ಗಳಲ್ಲಿ ಆಟವಾಡಿ, ಆಗ ಗೆಲುವಿನ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಸಲಹೆ ನೀಡಿತ್ತು. ಆದರೆ, ಅಲ್ಲಿಯೂ ಕೆಲವೊಂದು ಅಕ್ರಮಗಳು ಕಂಡು ಬಂದಿತ್ತು.
ಬಳಿಕ “ಪ್ಯಾಕೆಟ್ 52′ ವೇದಿಕೆ ತನ್ನ ಹ್ಯಾಂಡ್ ಹಿಸ್ಟರಿ ಅಂಶವನ್ನು ತೆಗೆದುಹಾಕಿತ್ತು. ಅದರಿಂದಾಗಿ ಆಟಗಾರರ ಹಿಂದಿನ ಮಾಹಿತಿಗಳು, ದತ್ತಾಂಶಗಳು ಸಿಗುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ. ಅದರಿಂದ ಯಾರು, ಯಾವ ರೀತಿಯ ಆಟವಾಡುತ್ತಿದ್ದಾರೆ, ಎಷ್ಟು ಗೆಲುವು ಕಂಡಿದ್ದಾರೆ, ಸೋಲು ಎಷ್ಟಾಗಿದೆ ಎಂಬ ಮಾಹಿತಿ ಇಲ್ಲವಾಗಿದೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ನಕಲಿ ಖಾತೆಗಳಿಗೆ ಠೇವಣಿ: ದೂರು:
ಆ್ಯಪ್‌ನಲ್ಲಿ ಆಟದಲ್ಲಿ ಯಾವುದೇ ಠೇವಣಿಗಳಿಲ್ಲ. ಹಣ ಹಿಂಪಡೆಯುವಿಕೆಗೆ ಕೆಲ ನಿರ್ಬಂಧ ಇದೆ ಮತ್ತು ನಕಲಿ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲಾಗುತ್ತಿದೆ. ಹೀಗಾಗಿ ಆಟಗಾರರನ್ನು ಶೋಷಣೆ ಮಾಡುತ್ತಿರುವುದು ಕಂಡು ಬಂದಿದ್ದು, ತಾನೂ ಈ ಗೇಮ್‌ನಲ್ಲಿ 3 ಕೋಟಿ ರೂ. ಕಳೆದುಕೊಂಡಿದ್ದೇನೆ. ಹೀಗಾಗಿ “ಪ್ಯಾಕೆಟ್ 52′ ಮತ್ತು ಗೇಮ್ಸ್‌ಕಾರ್ಟ್‌ನ ಸಿಇಒಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನಿಶಾಂತ್ ಶ್ರೀವಾತ್ಸವ್ ದೂರಿನಲ್ಲಿ ಉಲ್ಲೇಖೀಸಿ ದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸಿಇಎನ್ ಠಾಣೆ ಪೊಲೀಸರು ಮಾಹಿತಿ ನೀಡಿದರು.