ಬೆಂಗಳೂರು: “ಐಟಿ-ಬಿಟಿ ನಗರಿಯಲ್ಲಿ ಸಾವಿ ರಾರು ಕೋಟಿ ರೂ. ಈಗಾಗಲೇ ಹೂಡಿಕೆ ಮಾಡಿದ್ದು, ಆ ಮೂಲಕ ಹತ್ತಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಲಕ್ಷಾಂತರ ಜನ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಹೂಡಿಕೆಗೆ ನಾವು ಉತ್ಸುಕರಾಗಿದ್ದೇವೆ. ಈ ಸಂಬಂಧದ ಪ್ರಕ್ರಿಯೆಗಳು ಜಾರಿಯಲ್ಲಿದ್ದು, ಬೇರೆ ಬೇರೆ ಹಂತದಲ್ಲಿವೆ’ ಎಂದು ಹಲವು ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು ಅಭಯ ನೀಡಿದರು.
ಏಷ್ಯಾದ ಅತಿದೊಡ್ಡ ಮೇಳ “ಬೆಂಗಳೂರು ಟೆಕ್ ಸಮಿಟ್’ (ಬಿಟಿಎಸ್) 25ನೇ ಆವೃತ್ತಿಯನ್ನು ಅರ್ಥ ಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಾಗತಿಕ ನಾವೀನ್ಯತಾ ಸಹಭಾಗಿ (ಜಿಐಎ) ರಾಷ್ಟ್ರಗಳ ಕಾನ್ಸುಲ್ ಜನರಲ್, ಡೆಪ್ಯುಟಿ ಕಾನ್ಸುಲ್ ಜನರಲ್ ಮತ್ತು ಗೌರವ ಕಾನ್ಸುಲ್ ಜನರಲ್‌ಗಳೊಂದಿಗೆ ಐಟಿ-ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಬುಧವಾರ ಸಮಾಲೋಚನೆ ನಡೆಸಿದರು. ಈ ವೇಳೆ ರಾಜತಾಂತ್ರಿಕ ಅಧಿಕಾರಿಗಳು ಭರವಸೆ ನೀಡಿದರು.
ಕೆನಡ, ಫ್ರಾನ್ಸ್, ಆಸ್ಟ್ರೇಲಿಯ, ಇಟಲಿ, ಇಸ್ರೇಲ್ ಒಳಗೊಂಡಂತೆ ವಿವಿಧ ರಾಷ್ಟ್ರಗಳ ಕಾನ್ಸುಲ್ ಜನರಲ್‌ಗಳು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೂಡಿಕೆ ಮಾಡಿದ ಹಾಗೂ ಭವಿಷ್ಯದಲ್ಲಿ ಹೂಡಿಕೆ ಮಾಡಲಿರುವ ಕ್ಷೇತ್ರಗಳ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಅಶ್ವತ್ಥ ನಾರಾಯಣ, ಬಿಟಿಎಸ್-25 ಸಮಾ ವೇಶ ಹಿಂದೆಂದಿಗಿಂತ ಭಿನ್ನವಾಗಿ ಮತ್ತು ಆಕರ್ಷಕ ವಾಗಿ ನಡೆಯಲಿದೆ. ಈ ಅಪರೂಪದ ತಂತ್ರಜ್ಞಾನ ಮೇಳದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಜತೆಗೆ ವಿವಿಧ ದೇಶಗಳ ಪ್ರಧಾನಿಗಳು, ಅಧ್ಯಕ್ಷರು, ಮುಖ್ಯಸ್ಥರು ಕೂಡ ಸಾಕ್ಷಿಯಾಗಲಿದ್ದಾರೆ ಎಂದರು.
Related Articles
ಸಭೆಯಲ್ಲಿ ಐಟಿ ವಿಜನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಆಸ್ಟ್ರೇಲಿಯದ ಸಾರಾ ಕಿಲ್ಯೂರ್, ಕೆನಡದ ಬೆನೊಯ್ಟ್, ಪ್ರಿಫೊಂಟೈನ್, ಡೆನ್ಮಾರ್ಕ್‌ನ ಎಸ್ಕ್ ಬೋ ರೋಸ ನ್ಬರ್ಗರ್, ಫಿನ್ಲಂಡಿನ ಮಿಕಾ ಟಿರೋನೆನ್, ಫ್ರಾನ್ಸ್‌ನ ಥಿಯರಿ ಬರ್ತೆಲೋಟ್, ಜರ್ಮನಿಯ ಅಕಿಂ ಬರ್ಕಾರ್ಟ್, ಇಸ್ರೇಲ್‌ನ ಟ್ಯಾಮಿ ಇತರರಿದ್ದರು.
ನವೆಂಬರ್ ನಲ್ಲಿ 25ನೇ ಟೆಕ್ ಸಮಿಟ್, 48 ರಾಷ್ಟ್ರಗಳು ಭಾಗಿ
25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶವು ಟೆಕ್4 ನೆಕ್ಸ್ -ಜೆನ್ ಘೋಷ ವಾಕ್ಯದೊಂದಿಗೆ ನವೆಂಬರ್ 16, 17 ಮತ್ತು 18ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದ್ದು, 48ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ ಎಂದು ಡಾ| ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.
ದೇಶದಲ್ಲಿರುವ 100 ಯೂನಿಕಾರ್ನ್ ಕಂಪನಿಗಳ ಪೈಕಿ 39 ಬೆಂಗಳೂರಿನಲ್ಲೇ ಇವೆ. ಅದೇ ರೀತಿ, 2021-22ನೇ ಸಾಲಿನಲ್ಲಿ ಭಾರತಕ್ಕೆ 83.57 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬಂದಿದೆ. ಇದರಲ್ಲಿ ಶೇ.38ರಷ್ಟು ಹೂಡಿಕೆ ರಾಜ್ಯದಲ್ಲೇ ಆಗಿದೆ ಎಂದರು.
ಶೇ.30 ಹಣ ಸಂಶೋಧನೆಗೆ ಮೀಸಲಿಡಿ: ಸಚಿವ ಸಲಹೆ
ಬೆಂಗಳೂರು: ನವೋದ್ಯಮಗಳು ತಮ್ಮ ಆದಾಯದಲ್ಲಿ ಶೇ.30ರಷ್ಟನ್ನಾದರೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಅಖಿಲ ಭಾರತ ರೋಬೋಟಿಕ್ಸ್ ಮತ್ತು ಇನ್ನೋವೇಶನ್ ಸಮಿತಿ (ಎಐಸಿಆರ್‌ಎ) ಏರ್ಪಡಿಸಿದ ‘ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಅಪ್- 2022′ ಸಮಾವೇಶಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. “ನವೋದ್ಯಮಗಳು ಭಾರತವನ್ನೇ ಉತ್ಪಾದನೆಯ ತೊಟ್ಟಿಲನ್ನಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ತಮ್ಮ ಆದಾಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕನಿಷ್ಠ ಶೇ. 30ರಷ್ಟು ಹಣವನ್ನು ಮೀಸಲಿಡಬೇಕು. ಇಲ್ಲದಿದ್ದರೆ, ದೇಶಕ್ಕೆ ಏನೂ ಪ್ರಯೋಜನವಾಗುವುದಿಲ್ಲ’ ಎಂದರು.