Advertisement

ಬೈನಾ ಬೀದಿಯಲ್ಲಿ ಕನ್ನಡಿಗರ ಕಣ್ಣೀರು

11:38 AM Sep 28, 2017 | Team Udayavani |

ಪಣಜಿ: ಬೈನಾ ಕಡಲ ತೀರದಲ್ಲೀಗ ಸ್ಮಶಾನ ಮೌನ, ಮಂಗಳವಾರ ಕನ್ನಡಿಗರ 55 ಮನೆಗ ಳನ್ನು ತೆರವುಗೊಳಿಸುವ ಮೂಲಕ ಗೋವಾ ಸರ್ಕಾರ ಉದ್ಧಟತನ ಮೆರೆದಿದ್ದು, ಮನೆಗಳು ಹಾಗೂ ಎರಡು ದೇವಸ್ಥಾನ ವಿದ್ದ ಸ್ಥಳವೀಗ ಬೃಹತ್‌ ಮೈದಾನದಂತೆ ಭಾಸವಾಗುತ್ತಿದೆ.

Advertisement

ವಾಸ್ಕೊ ಮುರಗಾಂವ ನಗರ ಪಾಲಿಕೆ ಬುಧವಾರ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಂಡ ಸ್ಥಳದಲ್ಲಿದ್ದ ಮನೆಗಳ
ಅವಶೇಷಗಳನ್ನು ಸಂಪೂರ್ಣ ಸ್ವತ್ಛಗೊಳಿ ಸಿದೆ.

ನೂರಾರು ಕನ್ನಡಿಗರು ಮನೆಯಲ್ಲಿದ್ದ ಅಲ್ಪ ಸ್ವಲ್ಪ ಸಾಮಾನುಗಳನ್ನು ಬೈನಾದ ಬೀದಿ ಯಲ್ಲಿಟ್ಟುಕೊಂಡು ವಾಸ್ತವ್ಯಕ್ಕೆ ಜಾಗವಿಲ್ಲ ದೆಯೇ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕು ವಂತಿದೆ. ಸೂರು ಕಳೆದುಕೊಂಡು ಕೆಲ ಸಂತ್ರಸ್ತ ಕುಟುಂಬಗಳು ಸಮೀಪದಲ್ಲಿರುವ ಸಂಬಂಧಿಕರ ಮನೆಗಳಲ್ಲಿ ತುರ್ತಾಗಿ ಆಶ್ರಯ ಪಡೆದಿದ್ದರೆ, ಇನ್ನೂ ಕೆಲ ಕುಟುಂಬಗಳು
ಬೀದಿಯಲ್ಲಿದ್ದು ಪುನರ್ವಸತಿಗಾಗಿ ಪರಿತಪ್ಪಿಸುತ್ತಿವೆ.

ಪೊಲೀಸರ ಗಸ್ತು: ಬೈನಾದಲ್ಲಿ ಕನ್ನಡಿಗರ 55 ಮನೆಗಳ ತೆರವಿನ ನಂತರ ಇಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ನಿರಾಶ್ರಿತ ಕನ್ನಡಿಗರಿಗೆ ಇಲ್ಲಿ ಕುಳಿತುಕೊಳ್ಳಲೂ ಅವಕಾಶ ನೀಡುತ್ತಿಲ್ಲ. ವಿಜಯಪುರ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಹಾಗೂ ಅಖೀಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಬುಧವಾರ ಬೈನಾಕ್ಕೆ ಭೇಟಿ ನೀಡಿ ನಿರಾಶ್ರಿತ
ಕನ್ನಡಿಗರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿ ನೀಲಮ್ಮ ಮೇಟಿ, “ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಎಸ್‌. ಯಡಿಯೂರಪ್ಪ ಅವರು ಗೋವಾಕ್ಕೆ ಆಗಮಿಸಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ್ದರು.

Advertisement

ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಎಂದು ಗೋವಾ ಕನ್ನಡಿಗರ ಬಳಿ ಮನವಿ ಮಾಡಿದ್ದರು. ಆದರೆ, ಇಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿ ದ್ದರೂ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ
ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಮುಂದಾಗಿಲ್ಲ’ ಎಂದು ಆರೋಪಿಸಿದರು.

ಗೋವಾ ವಿರುದ್ಧ ಸಿಎಂ ಕಿಡಿ 
ಬೆಂಗಳೂರು: ಗೋವಾದ ಬೈನಾ ಬೀಚ್‌ನಲ್ಲಿ ನೆಲೆಸಿದ್ದ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿದ್ದರ ಬಗ್ಗೆ ಅಲ್ಲಿನ ಸರ್ಕಾರದ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಗೋವಾ ಸರ್ಕಾರದ ಈ ನಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದು’ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ವಾಸ ಮಾಡುತ್ತಿದ್ದ ಕನ್ನಡಿಗರು ಕಾನೂನು ಉಲ್ಲಂಗಿಸಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ, ಮನೆಗಳನ್ನು ಕೆಡವಿದ ಬಳಿಕ ಅವರಿಗೆ ಮರು ವಸತಿ ಸೌಕರ್ಯ ಕಲ್ಪಿಸಬೇಕಿತ್ತು.

ಕೂಡಲೇ ಸರ್ಕಾರ ಆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಜೊತೆಗೆ ದೂರವಾಣಿ ಮೂಲಕವೂ ಮಾತನಾಡುತ್ತೇನೆ ಎಂದರು.

ಕನ್ನಡಿಗರ ಮನೆ‌ ತೆರವಿಗೆ ಖಂಡನೆ

ಬೆಂಗಳೂರು: ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದ ಗೋವಾ ಸರ್ಕಾರದ ಕ್ರಮ ಖಂಡಿಸಿ ಜಯ ಕರ್ನಾಟಕ ನಗರ ಘಟಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಪ್ರತ್ಯೇಕವಾಗಿ ಬುಧವಾರ ಮೈಸೂರು ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ ಭಾವಚಿತ್ರಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ವಾಟಾಳ್‌ ನಾಗರಾಜ್‌, “ಗೋವಾ ಸರ್ಕಾರ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವುದನ್ನು ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಗೋವಾ ಗಡಿ ಬಂದ್‌ ಮಾಡಿ, ಹಾಲು, ತರಕಾರಿ ಸೇರಿದಂತೆ ಯಾವುದೇ ವಸ್ತುಗಳನ್ನು ಸರಬರಾಜು ಆಗದಂತೆ ದಿಗ್ಬಂಧನ ಹಾಕಲಾಗುವುದು’ ಎಂದು ಎಚ್ಚರಿಸಿದರು.

ಬೈನಾ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗದ ಮಾಜಿ ಸಿಎಂ ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡಿದ್ದಾರೆ. ಅವರಿಗೆ ಕನ್ನಡಿಗರ ಮೇಲೆ ಕಳಕಳಿಯಿದ್ದರೆ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಮಾತುಕತೆ ನಡೆಸಲಿ.

ಸಿದ್ದಣ್ಣ ಮೇಟಿ,

ಅಖೀಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಈ ಹಿಂದೆಯೂ ಗೋವಾ ಸರ್ಕಾರ ಹೀಗೇ ವರ್ತಿಸಿತ್ತು. ಆಗ ನಿರ್ವಸತಿಗರಾದ ಕನ್ನಡಿಗರಿಗೆ ವಸತಿ ವ್ಯವಸ್ಥೆ ಮಾಡುವುದಾಗಿ ಅಲ್ಲಿನ ಸರ್ಕಾರ ಭರವಸೆ ನೀಡಿತ್ತು. ಆದರೆ, ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿಲ್ಲ.

ಆರ್‌.ವಿ.ದೇಶಪಾಂಡೆ, ಸಚಿವ

ಕನ್ನಡಿಗರಿಗೆ ರಕ್ಷಣೆ, ಪರ್ಯಾಯ ವ್ಯವಸ್ಥೆಯ ಭರವಸೆ ನೀಡದೆ ಅವರನ್ನು ಬೀದಿಗೆ ತಳ್ಳಿರುವುದು ತಪ್ಪು. ಈ ಬಗ್ಗೆ ಗೋವಾ ಮುಖ್ಯಮಂತ್ರಿಗಳಿಗೆ ತಕ್ಷಣ ಪತ್ರ ಬರೆಯಲಾಗುವುದು.

ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next