ಕೊಟ್ಟಿಗೆಹಾರ: ಅಕಾಲಿಕ ಮಳೆಯಿಂದ ಬೆಳೆಹಾನಿಯಾದ ಮೂಡಿಗೆರೆ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಧಿಕಾರಿ ಡಾ| ನಬಗಾದಿ ಗೌತಮ್ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಮೂಡಿಗೆರೆ ತಾಲೂಕಿನ ಲೋಕವಳ್ಳಿ, ಮುಗ್ರಹಳ್ಳಿ, ಬೆಟ್ಟಗೆರೆ, ಫಲ್ಗುಣಿ, ಅತ್ತಿಗೆರೆ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದ ಹಾನಿಯಾದ ಭತ್ತದ ಗದ್ದೆಗಳು ಹಾಗೂ ಕಾಫಿತೋಟಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಫಿ ಮಂಡಳಿಯಿಂದ ಮೂಡಿಗೆರೆ ತಾಲೂಕಿನಲ್ಲಿ ಕಾಫಿ ಬೆಳೆಹಾನಿಯ ಸಮೀಕ್ಷೆ ಮಾಡಲು 5 ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಆ ತಂಡಗಳು ಸಮೀಕ್ಷೆಯಲ್ಲಿ ತೊಡಗಿದ್ದಾರೆ. ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಅಡಕೆ, ಭತ್ತ ಹಾಗೂ ಇತರೆ ಬೆಳೆಗಳ ಹಾನಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ. ಒಂದು ವಾರದೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು ಬೆಳೆಹಾನಿಯ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂ ಅರಳಿದೆ. ಕಾಫಿ ಹಣ್ಣುಗಳು ಉದುರಿವೆ. ಅತಿಯಾದ ಮಳೆಯಿಂದ ರಾಶಿ ಕಾಫಿ ಹಣ್ಣುಗಳು ಬೂಸಲು ಬಂದಿವೆ. ಕಾರ್ಮಿಕರ ಕೊರತೆಯಿಂದ ಗಿಡದಿಂದ ಉದುರಿದ ಕಾಫಿ ಯನ್ನು ಹೆಕ್ಕಲು ಕೂಡ ಸಮಸ್ಯೆಯಾಗಿದೆ. ಈ ಎಲ್ಲಾ ಅಂಶಗಳನ್ನು ಉಲ್ಲೇಖೀಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ:ಕ್ಯೂಆರ್ ಕೋಡ್‌ನಿಂದ ತೊಗರಿ ಖರೀದಿ ವಿಳಂಬ! ಮುಕ್ತ ಮಾರುಕಟ್ಟೆಯತ್ತ ಮುಖ
ಅತ್ತಿಗೆರೆಯ ಹಿರಿಯ ಕಾಫಿ ಬೆಳೆಗಾರರಾದ ಎ.ಬಿ. ಕೃಷ್ಣೇಗೌಡ ಅವರು ಜಿಲ್ಲಾ ಧಿಕಾರಿಗಳ ಬಳಿ ಕಾಫಿ ಬೆಳೆ ಹಾನಿಯಾದ ಬಗ್ಗೆ ಅಳಲು ತೋಡಿಕೊಂಡರು. ವರ್ಷದಿಂದ ಕಾಫಿ ತೋಟದಲ್ಲಿ ಶ್ರಮ ವಹಿಸಿ ದುಡಿದಿದ್ದು ವರ್ಷದ ಫಸಲು ಕೈ ಸೇರುವ ಹೊತ್ತಿಗೆ ಅಕಾಲಿಕ ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಕಾಫಿ ಬೆಳೆಗಾರರು ಹಾಗೂ ರೈತರ ನೆರವಿಗೆ ಬರಬೇಕು ಎಂದರು. ಮೂಡಿಗೆರೆ ತಹಶೀಲ್ದಾರ್ ರಮೇಶ್, ಕೃಷಿ ಇಲಾಖೆಯ ಕೃಷಿ ಅಧಿ ಕಾರಿ ವೆಂಕಟೇಶ್, ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಶ್ರೀದೇವಿ, ಗ್ರಾಮ ಲೆಕ್ಕಾ ಧಿಕಾರಿ ಹಾಗೂ ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾ ಧಿಕಾರಿಗಳಾದ ಆನಂದ್, ನಿತ್ಯಾ, ನಮಿತಾ, ರಮ್ಯ, ಉಮೇಶ್, ಗ್ರಾಮ ಸಹಾಯಕ ಅಣ್ಣಪ್ಪ ಇದ್ದರು.