ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರಿತಿಸಿ ಮದುವೆಯಾದಳು ಎಂದು ಸಿಟ್ಟಿಗೆದ್ದ ಯುವತಿಯ ಕುಟುಂಬದ ಸದಸ್ಯರು, ಯುವಕನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಕಾರಣಕ್ಕಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ತಂದೆ ಸಾವನ್ನಪ್ಪಿದ್ದು, ಮದುವೆಯಾಗಿದ್ದ ಯುವಕನೂ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತನನ್ನು ದಶರಥ ಪೂಜಾರಿ ಎಂದು ಗುರುತಿಸಲಾಗಿದೆ. ಜೂ.2 ರಂದು ಈ ಘಟನೆ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಮೃತಪಟ್ಟಿದ್ದಾರೆ.
ಏನಿದು ಘಟನೆ?
ಚಾಮನೂರಿನ ಯುವಕ ಸೂರ್ಯಕಾಂತ ಪೂಜಾರಿ ಚಾಮನೂರಿನ ಅನ್ಯ ಜಾತಿಯ ಯುವತಿಯನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಆಗ ಮದುವೆ ತಡೆಯಲು ಯುವತಿಯ ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಮದುವೆಯಾದ ಬಳಿಕ ಬೆಂಗಳೂರಿಗೆ ತೆರಳಿದ್ದ ಸೂರ್ಯಕಾಂತ ಹಾಗೂ ಪತ್ನಿ ಒಂದು ವರ್ಷದಿಂದ ಅಲ್ಲೇ ಇದ್ದರು. ಈ ಮಧ್ಯೆ ಸೂರ್ಯಕಾಂತ ಪತ್ನಿ ಮಗುವಿಗೆ ಜನ್ಮವೂ ನೀಡಿದ್ದಳು. ಜೂ.1ರಂದು ಮಗುವಿನ ನಾಮಕರಣದ ಪ್ರಯುಕ್ತ ಚಾಮನೂರಿಗೆ ಆಗಮಿಸಿದ್ದರು.
ಇದನ್ನೂ ಓದಿ:ವೀರಪ್ಪನ್ ಕಣ್ಣಿಗೆ ಬೀಳದೆ ಜೀವ ಉಳಿಸಿಕೊಂಡಿದ್ದ “ಭೋಗೇಶ್ವರ” ಇನ್ನಿಲ್ಲ
ಈ ವೇಳೆಯಲ್ಲಿ ಯುವತಿಯ ಕುಟುಂಬದ ಸದಸ್ಯರು ಸೂರ್ಯಕಾಂತನಿಗೆ ಬುದ್ದಿ ಕಲಿಸಲು ತಂತ್ರ ರೂಪಿಸಿದ್ದರು. ಈ ವೇಳೆ ಜೂ. 2ರಂದು ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳುವ ಸಿದ್ದತೆಯಲ್ಲಿದ್ದಾಗ ಯುವತಿಯ ತಂದೆ ದ್ಯಾವಪ್ಪ ಮಾಲಗತ್ತಿ ಹಾಗೂ ಸಹೋದರರು ಮಾರಕಾಸ್ತ್ರಗಳಿಂದ ಸೂರ್ಯಕಾಂತ ಹಾಗೂ ಕುಟುಂಬದ ಸದಸ್ಯರು ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದಶರಥ ಗಂಭೀರವಾಗಿ ಗಾಯಗೊಂಡಿದ್ದರು.
ಕಲಬುರಗಿಯ ಜಿಮ್ಸ್ ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡ ರಾತ್ರಿ ಮೃತ ಪಟ್ಟಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.