ಕಿಂಗ್ ಸ್ಟನ್: ಟೀಮ್ ಇಂಡಿಯಾ ನೀಡಿರುವ 468 ರನ್ ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿರುವ ಅತಿಥೇಯ ವೆಸ್ಟ್ ಇಂಡೀಸ್ ಮೂರನೇ ದಿನದಂತ್ಯಕ್ಕೆ 13 ಓವರ್ ಗಳಲ್ಲಿ ಎರಡು ವಿಕೇಟ್ ನಷ್ಟಕ್ಕೆ 45 ರನ್ ಗಳಿಸಿದೆ.
ಆರಂಭಿಕರಾದ ಜಾನ್ ಕ್ಯಾಂಬೆಲ್ (16) ಹಾಗೂ ಕ್ರೇಗ್ ಬ್ರಾತ್ ವೇಟ್ (3) ಅಲ್ಪಮೊತ್ತಕ್ಕೆ ಔಟಾಗಿದ್ದು ಡ್ಯಾರೆನ್ ಬ್ರಾವೋ (18*) ಹಾಗೂ ಶಮರ್ ಬ್ರೂಕ್ಸ್ (4*) ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ . ಘಾತಕ ಬೌಲಿಂಗ್ ನಡೆಸಿದ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದಾರೆ.
299 ರನ್ ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ, ಉಪನಾಯಕ ಅಜಿಂಕ್ಯಾ ರಹಾನೆ (64*) ಮತ್ತು ಹನುಮ ವಿಹಾರಿ (53*) ಅವರ ಅಜೇಯ ಅರ್ಧಶತಕಗಳ ನೆರವಿನಿಂದ 54.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿತು. ಈ ಮೂಲಕ ವಿಂಡೀಸ್ ಗೆ 468 ರನ್ ಗಳ ಬೃಹತ್ ಗೆಲುವಿನ ಗುರಿ ಒಡ್ಡಿತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಉತ್ತಮ ಆರಂಭವನ್ನು ಪಡೆಯಲಿಲ್ಲ. ಓಪನರ್ ಗಳಾದ ಕೆ.ಎಲ್ ರಾಹುಲ್ (6), ಮಾಯಾಂಕ್ ಅಗರ್ವಾಲ್ (4) ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ನಾಯಕ ವಿರಾಟ್ ಕೊಹ್ಲಿ (0) ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೆ ಚೇತೇಶ್ವರ ಪೂಜಾರ 27 ರನ್ ಗಳಿಸಿ ಅಲ್ಪ ಚೇತರಿಕೆ ನೀಡಿದರು.
ನಂತರ ಬಂದ ರಹಾನೆ ಹಾಗೂ ವಿಹಾರಿ 111 ರನ್ ಗಳ ಭರ್ಜರಿ ಜೊತೆಯಾಟ ಆಡುವ ಮೂಲಕ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ವಿಂಡೀಸ್ ಪರ ಕೆಮರ್ ರೂಚ್ ಮೂರು ವಿಕೆಟ್ ಪಡೆದರು.