ಢಾಕಾ: ಕಡಿಮೆ ಮೊತ್ತದ ಹಣಾಹಣಿಯಲ್ಲಿ ಭಾರತ ವನಿತೆಯರ ತಂಡವು ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾ ವನಿತೆಯರ ವಿರುದ್ಧ ಗೆಲುವು ಸಾಧಿಸಿದೆ. ಸತತ ಎರಡು ಪಂದ್ಯ ಗೆದ್ದ ತಂಡವು ಸರಣಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿ ಹರ್ಮನ್ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದರೆ, ಬಾಂಗ್ಲಾದೇಶ ವನಿತೆಯರು ಕೇವಲ 87 ರನ್ ಗೆ ಆಲೌಟಾದರು. ಇದರೊಂದಿಗೆ ಭಾರತ ಎಂಟು ರನ್ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಮೊದಲ ವಿಕೆಟ್ ಗೆ 33 ರನ್ ಕಲೆಹಾಕಿತು. ಆದರೆ ನಂತರ ಸತತ ವಿಕೆಟ್ ಕಳೆದುಕೊಂಡಿತು. ಶಫಾಲಿ 19 ರನ್ ಮಾಡಿದರೆ, ಸ್ಮೃತಿ 13 ರನ್ ಗಳಿಸಿದರು. ಕೊನೆಯಲ್ಲಿ ಯಸ್ತಿಕಾ ಭಾಟಿಯಾ 11 ರನ್, ಅಮನ್ಜೋತ್ ಕೌರ್ 14 ರನ್ ಮಾಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ನಾಯಕಿ ಹರ್ಮನ್ ಈ ಪಂದ್ಯದಲ್ಲಿ ಗೋಲ್ಡನ್ ಡಕ್ ಗೆ ಬಲಿಯಾದರು.
ಇದನ್ನೂ ಓದಿ:ʼTOBYʼ ಗೆ ಪ್ರತಿಷ್ಠಿತ ಪ್ರೊಡಕ್ಷನ್ ಸಂಸ್ಥೆ ಸಾಥ್: ಬಿಗ್ ಅಪ್ಡೇಟ್ ಕೊಟ್ಟ ನಟ
ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ಕೂಡಾ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ನಾಯಕಿ ನಿಗರ್ ಸುಲ್ತಾನಾ 38 ರನ್ ಗಳಿಸಿದ್ದು ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು.
ಭಾರತದ ಪರ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ತಲಾ ಮೂರು ವಿಕೆಟ್ ಕಿತ್ತರು. ಮಿನ್ನು ಮಣಿ ಎರಡು ವಿಕೆಟ್ ಮತ್ತು ಬಾರೆಡ್ಡಿ ಅನುಷಾ ಒಂದು ವಿಕೆಟ್ ಕಿತ್ತರು.
ಈ ಜಯದೊಂದಿಗೆ ಒಂದು ಪಂದ್ಯ ಬಾಕಿ ಉಳಿದಿರುವಂತೆ ಭಾರತೀಯರು ಸರಣಿ ಜಯ ಸಾಧಿಸಿದರು. ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.