Advertisement

ತೇಗ ತರುಗಳ ಕೃಷಿ ಟೀಕ್‌ ನಹೀ ಹೈ

07:12 PM Jul 19, 2021 | Team Udayavani |

ಡಾ| ಬಸವರಾಜ ಹೊಂಗಲ್‌

Advertisement

ಧಾರವಾಡ: ಆಗಸದೆತ್ತರಕ್ಕೆ ಬೆಳೆದು ನಿಂತ ತೇಗದ ತರುಗಳು, ದಾಂಡೇಲಿ ತೇಗದಷ್ಟೇ ಪೊಗರುದಸ್ತಾದ ಜಲಾನಯನ ಯೋಜನೆಯ ಗಿಡಗಳು, ಕಟಾವಿಗೆ ಪರವಾನಗಿ ಇಲ್ಲ, ಅಕ್ಕಪಕ್ಕದ ಹೊಲದವರ ಕಾಟ ರೈತರಿಗೆ ತಪ್ಪುತ್ತಲೇ ಇಲ್ಲ. ಒಟ್ಟಿನಲ್ಲಿ ಅಧಿಕ ಲಾಭ ಕೊಡುತ್ತದೆ ಎಂದು ತೇಗದ ಮರಗಳನ್ನು ಬೆಳೆಯುವುದೇ ಟೀಕ್‌ ನಹೀ ಹೈ (ಸಾಗವಾನಿ ಬೆಳೆಯುವುದು ಉತ್ತಮವಲ್ಲ )ಎನ್ನುತ್ತಿದ್ದಾರೆ ರೈತರು.

ಹೌದು, ಅರಣ್ಯದಲ್ಲಿ ಕೃಷಿ ಮಾಡುವುದು ಇಂದಿನ ದಿನಗಳಲ್ಲಿ ಕಷ್ಟವೇ ಆಗಿದ್ದು, ಪರಿಸರ ಉಳಿಸಿಕೊಳ್ಳಲು ಇದೀಗ ಕೃಷಿಯಲ್ಲಿಯೇ ಅರಣ್ಯವನ್ನು ಸೃಷ್ಟಿಸಿಕೊಳ್ಳುವ ಅನಿವಾರ್ಯತೆ ಬಂದಿದೆ. ಇದನ್ನರಿತು ಸರ್ಕಾರಗಳು ಕಾಲ ಕಾಲಕ್ಕೆ ಗಿಡಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಲೇ ಬಂದಿದ್ದು, ಈ ಪೈಕಿ ಜಿಲ್ಲೆಯಲ್ಲಿ 17 ವರ್ಷಗಳ ಹಿಂದೆ ಜಾರಿಗೊಳಿಸಿದ ಸುಜಲ ಜಲಾನಯನ ಯೋಜನೆಯಡಿ ನೆಟ್ಟ ತೇಗದ ಮರಗಳು ಇದೀಗ ಬೆಳೆದ ರೈತರಿಗೆ ತೀವ್ರ ಕಿರಿ ಕಿರಿಯನ್ನುಂಟು ಮಾಡುತ್ತಿವೆ.

ಇತ್ತ ತೇಗದ ಮರಗಳು ಉತ್ತಮವಾಗಿ ಬೆಳೆಸಲು ಆಗದೇ, ಅತ್ತ ಅವುಗಳನ್ನು ಕತ್ತರಿಸಿಯೂ ಹಾಕದ ತ್ರಿಶಂಕು ಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಜಲಾನಯನದಲ್ಲಿ ಬೆಳೆದ ಗಿಡಗಳು: 2002-03ರಲ್ಲಿ ಜಾರಿಯಾದ ಸುಜಲ ಜಲಾನಯನ ಯೋಜನೆ ಅನ್ವಯ ಧಾರವಾಡ, ಕಲಘಟಗಿ, ಅಳ್ನಾವರ ಮತ್ತು ಹುಬ್ಬಳ್ಳಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ 5 ಲಕ್ಷಕ್ಕೂ ಅಧಿಕ ತೇಗದ ಸಸಿಗಳನ್ನು ನೆಡಲಾಯಿತು. ನಂತರದ ವರ್ಷಗಳಲ್ಲಿ ಅರಣ್ಯ ಇಲಾಖೆಯೇ ಖುದ್ದಾಗಿ ತೇಗದ ಸಸಿಗಳನ್ನು ಬೆಳೆಸಿ ರೈತರಿಗೆ ಉಚಿತವಾಗಿ ನೀಡಿದೆ. ಅಷ್ಟೇಯಲ್ಲ, ತೇಗದ ಸಸಿಗಳನ್ನು ಹೊಲಗಳಲ್ಲಿ ಬೆಳೆಸಿದ ರೈತರಿಗೆ ಪ್ರೋತ್ಸಾಹ ಧನ ಕೂಡ ನೀಡುತ್ತ ಬಂದಿದೆ. ಅರಣ್ಯದಲ್ಲಿ ಇಲ್ಲದೇ ಹೋದರೂ ಸಾಮಾಜಿಕ ಅರಣ್ಯವಾಗಿ ಪರಿಸರಕ್ಕೆ ದೊಡ್ಡ ಸಂಪತ್ತೇ ಆಗಿದೆ. ಆದರೆ ತಮ್ಮ ಕೃಷಿ ಉಪಕರಣಕ್ಕೂ ಒಂದೇ ಒಂದು ಗಿಡವನ್ನು ರೈತರು ಕಠಾವು ಮಾಡುವಂತಿಲ್ಲ.

ರೈತರಿಗೇನು ಕಿರಿ ಕಿರಿ?: ಜಿಲ್ಲೆಯ ಅರೆಮಲೆನಾಡಿನ ರೈತರು ಗಿಡಮರಗಳನ್ನು ಉಳಿಸಿ ಬೆಳೆಸಬೇಕಾಗಿರುವುದು ಇಂದಿನ ತುರ್ತು ಅಗತ್ಯವೇನೋ ಹೌದು. ಆದರೆ ಒಕ್ಕಲುತನ ಮಾಡುವಾಗ ಹೊಲದ ಬದುಗಳಲ್ಲಿ ಮತ್ತು ಬೆಳೆಗೆ ನೆರಳಾಗುವ ಅಂದರೆ ಅನಾನುಕೂಲವಾಗುವ ಗಿಡಗಳನ್ನು ಕನಿಷ್ಟ ಪ್ರಮಾಣದಲ್ಲಿ ಕತ್ತರಿಸಲು ಕೂಡ ಆ ಗಿಡ ಬೆಳೆಸಿದ ರೈತರಿಗೆ ಯಾವುದೇ ಹಕ್ಕಿಲ್ಲವಾಗಿದೆ. ಅಪ್ಪಿ ತಪ್ಪಿ ತಾವು ಬೆಳೆದ ಗಿಡಗಳನ್ನು ರೈತರೇ ಕಟಾವು ಮಾಡಿದರೂ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಿದ್ದಾರೆ. ಇನ್ನು ಗಿಡ ಬೆಳೆದ ರೈತರಿಗೆ ತೇಗದ ಮರ ಕಟಾವು ಮಾಡಲು ಇಷ್ಟವಿಲ್ಲದೇ ಇದ್ದರೂ ಅಕ್ಕ ಪಕ್ಕದ ಹೊಲಗಳಿಗೆ ಈ ಗಿಡಗಳು ತೊಂದರೆಯಾಗುತ್ತಿದ್ದು, ತೇಗದ ಮರಗಳ ಕೆಳಗೆ ಬೆಳೆ ಸರಿಯಾಗಿ ಬೆಳೆಯುತ್ತಿಲ್ಲ. ಹೀಗಾಗಿ ಅವುಗಳನ್ನು ಕಟಾವು ಮಾಡುವಂತೆ ಪಕ್ಕದ ಹೊಲಗಳ ರೈತರು ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ತೇಗದ ಕಠಾವಿಗೆ ರೈತರು ಮುಂದಾಗುತ್ತಿದ್ದು, ಅರಣ್ಯ ಇಲಾಖೆ ಇದಕ್ಕೆ ಒಪ್ಪುತ್ತಲೇ ಇಲ್ಲ.

Advertisement

ದೊಡ್ಡ ಪ್ರಕ್ರಿಯೆ: ಸಾಗವಾನಿ ಗಿಡಗಳನ್ನು ಕಟಾವು ಮಾಡಲು ಸರ್ಕಾರದಿಂದ ಪರವಾನಗಿ ಪಡೆಯಲು ಅವಕಾಶವಿದೆ. ಗಿಡಗಳ ಕಟಾವು ಮಾಡುವ ರೈತರು ಸಂಬಂಧಪಟ್ಟ ತಾಲೂಕು ತಹಶೀಲ್ದಾರ್‌ಗೆ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಕೊಡಬೇಕು. ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಆಯಾ ಗ್ರಾಪಂಗಳ ಮೂಲಕ ಸ್ಥಳ ಪರಿಶೀಲನೆ, ಗಿಡಗಳ ಪಂಚನಾಮೆ ಮಾಡಬೇಕು. ನಂತರ ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು ಸಹ ಖುದ್ದು ಸ್ಥಳ ಪರಿಶೀಲನೆ ನಡೆಸಿ, ಗಿಡಗಳ ಕಟಾವಿಗೆ ಒಪ್ಪಿಗೆ ಸೂಚಿಸಬೇಕು. ಇಷ್ಟೆಲ್ಲ ಆಗಿ ಕಡಿಗಳ ಕಟಾವು ಮಾಡಬೇಕು ಎಂದರೆ ವರ್ಷಗಳೇ ಕಳೆದು ಹೋಗುತ್ತಿವೆ. ಇದು ರೈತರಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next