Advertisement

Tulu Language; ಗೌರವಧನ ಸಿಗದೆ ತುಳು ಭಾಷಾ ಬೋಧನೆ ಅತಂತ್ರ

11:08 PM Aug 27, 2023 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 42 ಶಾಲೆಗಳಲ್ಲಿ ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಬೋಧಿಸುತ್ತಿರುವ ಶಿಕ್ಷರಿಗೆ ಮೂರು ವರ್ಷಗಳಿಂದ 27.60 ಲಕ್ಷ ರೂ. ಗೌರವಧನ ನೀಡದೆ ತುಳು ಭಾಷಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಭವಿಷ್ಯದಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ.

Advertisement

2009ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಶಾಲಾ ಕಾಲೇಜುಗಳಲ್ಲಿ ತೃತೀಯ ಭಾಷೆಯಾಗಿ ತುಳು ಬೋಧಿಸಲು ಅವಕಾಶ ನೀಡುವಂತೆ ಸರಕಾರವನ್ನು ಆಗ್ರಹಿಸಲಾಗಿತ್ತು. ಅದರ ಫಲವಾಗಿ ತುಳು ಅಕಾಡೆಮಿಯ ಪ್ರಯತ್ನದಿಂದ ಉಭಯ ಜಿಲ್ಲೆಗಳ 42 ಶಾಲೆಗಳಲ್ಲಿ ತುಳು ಬೋಧನೆ ಆರಂಭವಾಯಿತು.

ಆದರೆ 3 ವರ್ಷಗಳಿಂದೀಚೆಗೆ ಸರಕಾರ ತುಳು ಶಿಕ್ಷಕರ ನೇಮಕಾತಿ ಬಗ್ಗೆಯಾಗಲಿ, ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳುವುದಕ್ಕಾಗಲಿ ಗಂಭೀರ ಚಿಂತನೆ ನಡೆಸಿಲ್ಲ. ಜತೆಗೆ ಬೋಧಕರಿಗೆ ಅಕಾಡೆಮಿ ಮಾಸಿಕವಾಗಿ ನೀಡುತ್ತಿದ್ದ 3 ಸಾವಿರ ರೂ.ಗಳನ್ನು 3 ವರ್ಷಗಳಿಂದ (2020ರ 2023ರ ಆಗಸ್ಟ್‌ ವರೆಗೆ ಒಟ್ಟು 27.60 ಲಕ್ಷ ರೂ.) ನೀಡಿಲ್ಲ. ಈ ವಿಚಾರವಾಗಿ ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಕೂಡ ಪ್ರಯತ್ನ ಮಾಡಿದ್ದರೂ ಯಾವುದೂ ಫಲಿಸಿಲ್ಲ. ತುಳುವಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ತಾಂತ್ರಿಕ ಸಮಸ್ಯೆ ಇದೆ ಎಂಬ ಕಾರಣವನ್ನು ಸರಕಾರ ನೀಡಿದೆ.
ತುಳುಪ್ರೇಮಿ ಶಾಸಕ ಯು.ಟಿ. ಖಾದರ್‌ ಪ್ರಸ್ತುತ ವಿಧಾನಸಭಾಧ್ಯಕ್ಷರೂ ಆಗಿದ್ದಾರೆ. ಉಭಯ ಜಿಲ್ಲೆಗಳ ಶಾಸಕರು ಈ ಬಗ್ಗೆ ವಿಧಾನ ಸಭೆ ಕಲಾಪದಲ್ಲಿ ಧ್ವನಿಯೆತ್ತಿದರೆ ಇದೇನೂ ಆಗದ ಕಾರ್ಯವಲ್ಲ. ಇಲ್ಲದಿದ್ದರೆ ತುಳು ಭಾಷೆಯ ಬೋಧನೆ ನಿಂತುಹೋಗುವುದಲ್ಲದೆ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಯ ಪ್ರಯತ್ನಕ್ಕೂ ಹಿನ್ನಡೆಯಾಗುವುದರಲ್ಲಿ ಸಂಶಯವಿಲ್ಲ.

ತುಳು ಭಾಷಾ ಶಿಕ್ಷಕರ ವೇತನದ ವಿಚಾರವಾಗಿ ಸರಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಕಳೆದ ವರ್ಷ ಚುನಾವಣೆ ಹಿನ್ನೆಲೆಯಲ್ಲಿ ಕೈಗೂಡಿಲ್ಲ. ಹೊಸ ಸರಕಾರಕ್ಕೆ ವಿಷಯದ ಕುರಿತು ಮನದಟ್ಟು ಮಾಡಲಾಗಿದೆ. ಸರಕಾರ ಭರವಸೆ ನೀಡಿದೆ. – ಮನೋಹರ ಕಾಮತ್‌, ರಿಜಿಸ್ಟ್ರಾರ್‌, ತುಳು ಸಾಹಿತ್ಯ ಅಕಾಡೆಮಿ

Advertisement

ತುಳು ಭಾಷಾ ಶಿಕ್ಷಕರ ಸಂಭಾವನೆ ಬಾಕಿ ಇರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಅಕಾಡೆಮಿಯೊಂದಿಗೆ ಚರ್ಚಿಸಿ ಬಳಿಕ ಕ್ರಮ ಕೈಗೊಳ್ಳಲಾಗುವುದು.
– ಶಿವರಾಜ್‌ ತಂಗಡಗಿ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next