ತೆಕ್ಕಟ್ಟೆ (ವಿದ್ಯಾಗಿರಿ): ಒಂದು ಸಣ್ಣ ಬಿದಿರಿನ ತುಂಡನ್ನು ಕೊಳಲಾಗಿ ಮಾರ್ಪಡಿಸಿ ಅನೇಕ ನಿತ್ಯೋತ್ಸವದಂತಹ ರಾಗವನ್ನು ಹೊಮ್ಮಿಸಿದ್ದಾಳೆ ತಾಯಿ ಕನ್ನಡಾಂಬೆ, ಅದು ನನ್ನ ಸೊತ್ತಲ್ಲ ಆ ಪಾರಲೋಕಿಕ ಶಕ್ತಿಯ ಸೊತ್ತು ಎಂದು ನಾನು ಭಾವಿಸಿದ್ದೇನೆ. ಪ್ರಸ್ತುತ ಆಂಗ್ಲ ಭಾಷೆ ಬಿಟ್ಟರೆ ಗತಿ ಇಲ್ಲ. ಅದು ಅಂತಾರಾಷ್ಟ್ರೀಯ ಗವಾಕ್ಷಿ ನಮಗೆ ಇದ್ದ ಹಾಗೆ, ಎಲ್ಲ ಜ್ಞಾನ ಹಾಗೂ ಸಾರಸತ್ವವನ್ನು ಪಡೆಯಲು ಇಂಗ್ಲಿಷ್‌ನಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದಾದರೆ ವ್ಯಾಕರಣ ಪೂರ್ಣವಾಗಿ ಕಲಿಸಬೇಕು ಎಂದು ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಹೇಳಿದರು.
ಅವರು ಶುಕ್ರವಾರದಂದು ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಕೆ.ಎಸ್. ನಿಸಾರ್ ಅಹಮದ್ ಅವರೊಂದಿಗೆ ವಿದ್ಯಾರ್ಥಿ ಹೃದಯ ಸಂವಾದ ಮಾತುಕತೆ(ಥೆ) ಸಲ್ಲಾಪ 2017 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಳೆಯ ದಿನ ಪ್ರಪಂಚದ ಬೇರೆ ಬೇರೆಯವರ ಜತೆಯಲ್ಲಿ ಸ್ಪರ್ಧೆ ನಡೆಸಬೇಕಾಗಿದೆ. ಕನ್ನಡದಲ್ಲಿ ಸದ್ಯಕ್ಕೆ ಸಾಧ್ಯವಾಗೋದಿಲ್ಲ. ಯಾವಾಗ ಕನ್ನಡ ಹೃದಯ ಭಾಷೆಯಾಗೋದಿಲ್ಲವೋ ಸರಕಾರ ಕನ್ನಡವನ್ನು ಆಡಳಿತ ಭಾಷೆ ಯಾಗಿ, ನ್ಯಾಯಾಂಗ ಭಾಷೆಯಾಗಿ ಮತ್ತೆ ಶಿಕ್ಷಣದ ಭಾಷೆಯಾಗಿ ಮಾಡಿ ಯಾರ್ಯಾರು ಸ್ನಾತಕೋತ್ತರ ಪದವಿಯನ್ನು ಪಡೆ ಯುತ್ತಾರೋ ಅವರಿಗೆ ಹೊಟ್ಟೆಗೂ ನಾವು ಕೊಡ್ತೀವಿ, ಕೆಲಸವನ್ನು ಕೊಡ್ತೀವಿ ಎನ್ನುವ ಬಗ್ಗೆ ಸರಕಾರ ಉತ್ತೇಜನ ನೀಡುವ ವರೆಗೂ ಕನ್ನಡ ಉದ್ಧಾರವಾಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತೆಕ್ಕಟ್ಟೆ ಕುಂದಾಪುರ ಭಂಡಾರ್ಕಾರ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ| ರೇಖಾ ವಿ. ಬನ್ನಾಡಿ, ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಆಡಳಿತ ನಿರ್ದೇಶಕ ಎಂ.ಪ್ರಭಾಕರ ಶೆಟ್ಟಿ, ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಮೆನೇಜಿಂಗ್ ಟ್ರಸ್ಟಿ ಎಂ.ದಿನಕರ ಶೆಟ್ಟಿ, ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಪ್ರಾಂಶುಪಾಲ ಅಗಸ್ಟಿನ್ ಕೆ.ಎ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಶಾಲಾ ನರ್ಸರಿ ವಿದ್ಯಾರ್ಥಿಗಳು ಆಟವಾಡಲು ನಿರ್ಮಿಸಿರುವ ವಿನೂತನ ಪ್ಲೇ ಝೋನ್ ವಲಯವನ್ನು ಕೆ.ಎಸ್. ನಿಸಾರ್ ಅಹಮದ್ ಅವರು ಉದ್ಘಾಟಿಸಿದರು.
ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಪ್ರಾಂಶುಪಾಲ ಅಗಸ್ಟಿನ್ ಕೆ. ಸ್ವಾಗತಿಸಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರತ್ನಾ ಜಿ. ನಿರೂಪಿಸಿ, ಸುಪ್ರಿತಾ ಆಚಾರ್ಯ ವಂದಿಸಿದರು.
ವೈಭವೋಪೇತವಾದ ಐಶಾರಾಮಿ ಇಂಗ್ಲಿಷ್ ಶಾಲೆಯ ಮುಂದೆ ಕನ್ನಡ ಶಾಲೆ ಗಳನ್ನು ನೋಡಿದರೆ ದನದ ದೊಡ್ಡಿ ಯಂತಾಗಿರುವುದು ವಿಪರ್ಯಾಸ. ಭವ್ಯ ಕನ್ನಡ ನಾಡಿನಲ್ಲಿ ಕನ್ನಡ ಮೆರೆಯಬೇಕಿದೆ. ಈ ನಿಟ್ಟಿನಿಂದ ಸರಕಾರ ಮಾತ್ರವಲ್ಲ ಜನರು ಕೂಡಾ ಗಂಭೀರ ಚಿಂತನೆ ಮಾಡ ಬೇಕಾಗಿದೆ. ಇವತ್ತು ಎಲ್ಲವೂ ಇಂಗ್ಲಿಷ್‌ಮಯವಾಗಿ ಬಿಟ್ಟಿದೆ.