ಮಹಾಲಿಂಗಪುರ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಜನತೆ ಮೊಬೈಲ್, ಟಿವಿ, ಧಾರಾವಾಹಿಗಳ ದಾಸರಾಗುತ್ತಿದ್ದಾರೆ. ಮಠಗಳು ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ ಎಂದು ಮರೆಗುದ್ದಿ ಅಡವಿ ಸಿದ್ದೇಶ್ವರ ಮಠದ ಗುರುಪಾದ ಸ್ವಾಮೀಜಿ ಹೇಳಿದರು.
ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ 29ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಠಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶಗಳು ಹಾಸುಹೊಕ್ಕಾಗಿರುತ್ತದೆ, ಸಾರ್ವಜನಿಕರ ಜೀವನದಲ್ಲಿ ತುಂಬುವುದು ಮಠಾಧಿಧೀಶರ ಕರ್ತವ್ಯ, ಮನುಷ್ಯ ಸುಖ ಶಾಂತಿ ನೆಮ್ಮದಿ ಪಡೆಯಬೇಕಾದರೆ ಶರಣರ, ಮಹಾತ್ಮರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ರಾಮದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಯಾವುದೇ ಧರ್ಮಬೇಧವಿಲ್ಲದೆ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಠಗಳೆಂದರೆ ವಿರಕ್ತಮಠಗಳು ಮಾತ್ರ, ಅವು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಸುಭೇದಾರ ಆನಂದ ಬಡಿಗೇರ, ಕಸಾಪ ತಾಲೂಕು ಅಧ್ಯಕ್ಷ ಮ. ಕೃ. ಮೆಗಾಡಿ, ನ್ಯಾಯವಾದಿ ಪ್ರಕಾಶ ವಸ್ತ್ರದ, ಪತ್ರಕರ್ತ ಇಲಾಹಿ ಜಮಖಂಡಿ, ಸಿಎ ರವೀಂದ್ರ ಕೋರೆ, ಪಿಡಿಒ ವಿಶ್ವನಾಥ ಪಟ್ಟಣಶೆಟ್ಟಿ ಮಾತನಾಡಿದರು.
ಸ್ಥಳೀಯ ವಿರಕ್ತಮಠದ ಪ್ರಭು ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಣದಾಳ ಕಲ್ಯಾಣ ಹಿರೇಮಠದ ವಿವೇಕದೇವರು ಪ್ರಸ್ತುತಪಡಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಕುರಿತ ಪ್ರವಚನ ಕಾರ್ಯಕ್ರಮ ಮಂಗಲಗೊಳಿಸಲಾಯಿತು.
ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಬಾಳಪ್ಪ ಹಳಿಂಗಳಿ, ಶಿವಲಿಂಗಪ್ಪ ಪಾಟೀಲ, ರಾಮಣ್ಣ ಮುಗಳಖೋಡ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಪ್ರಕಾಶ ಬಡಿಗೇರ ಸ್ವಾಗತಿಸಿದರು.