ಬಾಗಲಕೋಟೆ: ಕಾನೂನು ಸುವ್ಯವಸ್ಥೆ ಕಾಪಾಡಲು ರಾತ್ರಿ ಹೊತ್ತು ಕಳ್ಳತನ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸರು ರಾತ್ರಿ ಗಸ್ತು ತಿರುಗುವುದು ಸಾಮಾನ್ಯ. ಆದರೆ, ಈ ಶಾಲೆಯ ಶಿಕ್ಷಕರೂ, ರಾತ್ರಿ ಗಸ್ತು ತಿರುಗುತ್ತಾರೆ.
ಹೌದು, ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಆರ್‌ಎಂಎಸ್‌ಎ ಪ್ರೌಢಶಾಲೆಯ ನಾಲ್ವರು ಶಿಕ್ಷಕರು, ಪ್ರತಿ ವಾರಕ್ಕೊಮ್ಮೆ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಭೇಟಿ ನೀಡುತ್ತಾರೆ. ಅದು ಮಕ್ಕಳು ಪಾಲಕರಿಗೆ ಗೊತ್ತಿಲ್ಲದಂತೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಮಕ್ಕಳ ಅಭ್ಯಾಸದ ತಪಾಸಣೆ ನಡೆಸುತ್ತಾರೆ. ಇದು ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗಾಗಿ ಶಾಲೆಯ ಶಿಕ್ಷಕರು, ಸ್ವಯಂ ಪ್ರೇರಣೆಯಿಂದ ಮಾಡಿಕೊಂಡ ಗಸ್ತು ತಿರುಗಾಟಕ್ಕೆ ಶಿಕ್ಷಣ ಇಲಾಖೆಯಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಗುರುಗಳು ಬಂದರು ಗುರುವಾರ !: ಕುಂಬಾರಹಳ್ಳ ಆರ್‌ಎಂಎಸ್‌ಎ ಶಾಲೆಯ ಮುಖ್ಯೋಪಾಧ್ಯಾಯ ಎಂ.ಡಿ. ಸಂಖ, ಕನ್ನಡ ವಿಷಯ ಶಿಕ್ಷಕ ಎನ್.ಜಿ. ಶಾಸ್ತ್ರಿ, ಗಣಿತ ಶಿಕ್ಷಕ ಸಂಗಮೇಶ ಉಟಗಿ (ಎಸ್.ಎಂ.ಉಟಗಿ), ಇಂಗ್ಲಿಷ್ ಶಿಕ್ಷಕ ಎಸ್.ಎಸ್. ಜಂಬೂರೆ ಅವರು, ಪ್ರತಿ ಗುರುವಾರಕ್ಕೊಮ್ಮೆ ತಮ್ಮ ಶಾಲೆಯಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಭೇಟಿ ನೀಡುತ್ತಾರೆ. ಈ ಭೇಟಿಯ ಉದ್ದೇಶ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿ. ಕಳೆದ ಐದು ವರ್ಷದಿಂದ ಈ ಗಸ್ತು ತಿರುಗುವ ಪರಂಪರೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳು, ಪಾಲಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯ 50 ಜನ (16 ಜನ ಬಾಲಕರು, 34 ಜನ ಬಾಲಕಿಯರು) ವಿದ್ಯಾರ್ಥಿಗಳಿದ್ದು, ಕುಂಬಾರಹಳ್ಳ, ಸನಾಳ ಹಾಗೂ ವಿವಿಧ ತೋಟದ ವಸ್ತಿಯ ಮಕ್ಕಳಿದ್ದಾರೆ. ಶಿಕ್ಷಕರು, ತಮ್ಮ ನಿತ್ಯದ ಕಲಿಕೆಯ ಜತೆಗೆ ಪ್ರತಿ ಗುರುವಾರಕ್ಕೊಮ್ಮೆ ಒಂದೊಂದು ಮಾರ್ಗ ನಿಗದಿ ಮಾಡಿಕೊಂಡು ಆ ಮಾರ್ಗದಲ್ಲಿ ಬರುವ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ರಾತ್ರಿ ಭೇಟಿ ನೀಡುತ್ತಾರೆ. ಶಿಕ್ಷಕರು ಈ ರೀತಿ ರಾತ್ರಿ ತಮ್ಮ ಅಧ್ಯಯನ ಗಮನಿಸಲು ಬರುತ್ತಿರುವುದಕ್ಕೆ ಮಕ್ಕಳೇ ಉತ್ತಮ ಹೆಸರಿಟ್ಟಿದ್ದು, ಗುರುಗಳು ಬಂದರು ಗುರುವಾರ ಎಂಬ ಹೆಸರಿನಡಿ ಶಿಕ್ಷಕರ ಈ ಗಸ್ತು ಪಹರೆ ನಡೆಯುತ್ತದೆ.
ಪಾಲಕರಿಗೆ ಜಾಗೃತಿ: ಈ ಶಾಲೆಗೆ ಬರುವ ಎಸ್ಸೆಸ್ಸೆಲ್ಸಿಯ ಮಕ್ಕಳಲ್ಲಿ ಬಡ ಹಾಗೂ ಗ್ರಾಮೀಣ ಮಕ್ಕಳೇ ಹೆಚ್ಚು. ಮಕ್ಕಳು ನಿತ್ಯ ಶಾಲೆಗೆ ಬರುವ ಜತೆಗೆ ಪಾಲಕರೊಂದಿಗೆ ಮನೆ, ಹೊಲದ ಕೆಲಸಕ್ಕೆ ಕೈಜೋಡಿಸುತ್ತಾರೆ. ಇದರಿಂದ ಓದಿಗೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಶಿಕ್ಷಕರು, ರಾತ್ರಿ ಹೊತ್ತು ಮಕ್ಕಳ ಮನೆಗೆ ಭೇಟಿ ನೀಡಿ, ಅವರ ಕಲಿಕೆಯ ಕುರಿತು ತಪಾಸಣೆ ನಡೆಸುತ್ತಾರೆ. ಇದೇ ವೇಳೆ ಪಾಲಕರ ಮನವೊಲಿಸಿ, ಎಸ್ಸೆಸ್ಸೆಲ್ಸಿ ಓದುವ ಮಕ್ಕಳಿಗೆ ಇನ್ನು ನಾಲ್ಕು ತಿಂಗಳು ಯಾವುದೇ ಕೆಲಸ ಹಚ್ಚಬೇಡಿ. ನಿಮ್ಮ ಮಕ್ಕಳು ಓದುವ ವೇಳೆ ಮನೆಯಲ್ಲಿ ಟಿವಿ ಹಚ್ಚಬೇಡಿ. ಅವರು ಏನು ಓದುತ್ತಿದ್ದಾರೆ, ಅವರ ಕಲಿಕೆ ಹೇಗಿದೆ ಎಂಬುದನ್ನೂ ಗಮನಿಸುತ್ತಿರಬೇಕು ಎಂದು ಪಾಲಕರಿಗೆ ತಿಳವಳಿಕೆ ಹೇಳುತ್ತಾರೆ. ಕೆಲವು ಪಾಲಕರು, ತಮ್ಮ ಮಕ್ಕಳು ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದಾರೆ ಎಂಬ ಅರಿವಿಲ್ಲದೇ ಮನೆಯಲ್ಲಿ ಟಿವಿ ನೋಡುತ್ತ, ಇಲ್ಲವೇ ಅವರ ಕಲಿಕೆಯ ಬಗ್ಗೆ ಗಮನ ಕೊಡದೇ ಇರುತ್ತಾರೆ. ಅದನ್ನು ಹೋಗಲಾಡಿಸಿ, ಮಕ್ಕಳ ಕಲಿಕೆ ಮೇಲೆ ನಿಗಾ ಇರಿಸಬೇಕು ಎಂಬುದು ಶಿಕ್ಷಕರ ಉದ್ದೇಶ.
ಪ್ರತ್ಯೇಕ ತರಗತಿ: ಈ ಶಾಲೆಯ ಶಿಕ್ಷಕರು, ರಾತ್ರಿಹೊತ್ತು ಮಕ್ಕಳ ಮನೆಗೆ ಅನಿರೀಕ್ಷಿತ ಭೇಟಿ ನೀಡುವುದು
ಅಷ್ಟೇ ಅಲ್ಲ, ನಿತ್ಯ ಸಂಜೆ 4:30ಕ್ಕೆ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿ ಕೂಡ ನಡೆಸುತ್ತಾರೆ. 4:30ರಿಂದ 5:30ರವರೆಗೆ ಈ ತರಗತಿ ನಡೆಯುತ್ತಿದ್ದು, ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆಗೆ ಅನುಕೂಲವಾಗಿದೆ. ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯ ಬೋಧನೆಗೆ ಹೆಚ್ಚು ಒತ್ತು ನೀಡುತ್ತಾರೆ. ಅಲ್ಲದೇ ಎಸ್ಸೆಸ್ಸೆಲ್ಸಿಯ ಒಟ್ಟು 50 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರತ್ಯೇಕ ಪಟ್ಟಿಯೂ ಮಾಡಿದ್ದಾರೆ. ಅವರಿಗಾಗಿ ಪಾಸಿಂಗ್ ಪ್ಯಾಕೇಜ್ ರೂಪದಲ್ಲಿ ಕನಿಷ್ಠ ಪಾಸಾಗುವಷ್ಟು ಕಲಿಕೆಗೆ ಒತ್ತು ನೀಡಿದ್ದಾರೆ. ಹೀಗಾಗಿ ಪ್ರತಿವರ್ಷ ಈ ಶಾಲೆಯಲ್ಲಿ ಶೇ. 90ಕ್ಕೂ ಹೆಚ್ಚು ಫಲಿತಾಂಶ ಬರುತ್ತಿದೆ ಎನ್ನುತ್ತಾರೆ ಶಿಕ್ಷಕರು.
-ಶ್ರೀಶೈಲ ಕೆ. ಬಿರಾದಾರ