Advertisement

ಶಿಕ್ಷಕರ ವರ್ಗ: ದಸರಾಕ್ಕೂ ಡೌಟು!

07:50 AM Aug 12, 2017 | Karthik A |

ಬೆಂಗಳೂರು: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಕಾಯ್ದೆ ವಿಧಾನ ಮಂಡಲದ ಉಭಯ ಸದನದಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಒಪ್ಪಿಗೆ ದೊರೆತರೂ ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ ವರ್ಗಾವಣೆ ‘ಭಾಗ್ಯ’ ಸಿಕ್ಕಿಲ್ಲ. ಗಣೇಶ ಹಬ್ಬ ಕಳೆದು ದಸರಾ ಬಂದರೂ ವರ್ಗಾವಣೆ ‘ಭಾಗ್ಯ’ ಸಿಗುವ ಭರವಸೆಯೂ ಇಲ್ಲ! ಇನ್ನೇನು ವರ್ಗಾವಣೆ ಪ್ರಕ್ರಿಯೆ ಆರಂಭವಾಗಿಯೇ ಬಿಟ್ಟಿತು ಎಂಬ ಲಕ್ಷಣಗಳು ಕಂಡು ಬರುತ್ತಿದ್ದರೂ ಇನ್ನೂ ಕರಡು ನೀತಿಯೇ ಪ್ರಕಟಗೊಂಡಿಲ್ಲ.

Advertisement

ಇದರ ನಡುವೆ, ಈ ವರ್ಗಾವಣೆ ನೀತಿ ಕುರಿತು ಶಿಕ್ಷಕ ವಲಯದಲ್ಲಿ ಎದ್ದಿರುವ ವಿರೋಧವೂ ವಿಳಂಬಕ್ಕೆ ಕಾರಣವಾಗುತ್ತಿದೆ. ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ ಪ್ರತಿನಿಧಿಸುವವರು ವರ್ಗಾವಣೆಗಾಗಿ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿ ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಶಾಲಾ ಬಂದ್‌ ಮುಷ್ಕರದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಹೀಗಾಗಿ, ಗಣೇಶ ಹಬ್ಬ ಕಳೆದು ದಸರಾ ಬಂದರೂ ವರ್ಗಾವಣೆ ‘ಭಾಗ್ಯ’ ಸಿಗುವ ಭರವಸೆ ಇಲ್ಲ.

ಕಾಲ ಕೂಡಿಬಂದಿಲ್ಲ: ರಾಜ್ಯ ಸರ್ಕಾರ ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟಿಸಿದ್ದ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ – 2017ರ ಪ್ರಕಾರವೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಿಭಾಗದ ನಿರ್ದೇ ಶಕರು, ಹಿರಿಯ ಅಧಿಕಾರಿಗಳು ಸೇರಿಕೊಂಡು ವರ್ಗಾ ವಣೆಗೆ ನಿಯಮ ರೂಪಿಸಲಾಗಿದೆ.

ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕರಡು ಸಿದ್ಧವಾಗಿದೆ. ಕಾನೂನು ಇಲಾಖೆಗೆ ಸಲ್ಲಿಸಿದ್ದು, ಅಲ್ಲಿಂದ ಹಸಿರು ನಿಶಾನೆ ತೋರಿದ ನಂತರ ಕರಡು ನಿಯಮವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಶಿಕ್ಷಕರಿಂದ ಲಿಖೀತ ರೂಪದಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿದ ನಂತರ, ಕೂಲಂಕಷವಾಗಿ ಪರಿಶೀಲಿಸಿ ಅಂತಿಮಗೊಳಿಸಬೇಕಿದೆ. ಆದರೆ, ಈ ಎಲ್ಲಾ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ, ಆಗಸ್ಟ್‌ ಅಂತ್ಯದೊಳಗೆ ಆಗುವುದೂ ಅನುಮಾನ.

ಎತ್ತಂಗಡಿಗೆ ತೀವ್ರ ವಿರೋಧ: ಒಂದೇ ಶಾಲೆಯಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷ ಬೋಧನೆ ಮಾಡಿಕೊಂಡಿರುವ ಶಿಕ್ಷಕರನ್ನು, ಅದರಲ್ಲೂ ಬೆಂಗಳೂರು ನಗರದ ಶಾಲೆಗಳಲ್ಲಿ ಕಳೆದ ಅನೇಕ ವರ್ಷದಿಂದ ಠಿಕಾಣಿ ಹೂಡಿರುವ ಶಿಕ್ಷಕರ ವರ್ಗಾವಣೆಗೆ ಮಾರ್ಗಸೂಚಿ ಸಿದ್ಧವಾಗಿದೆ. ಇದನ್ನು ಅನುಷ್ಠಾನಗೊಳಿಸಲು ಕೆಲವು ಶಿಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲೂ ಈ ಬಗ್ಗೆ ಒಮ್ಮತದ ಅಭಿಪ್ರಾಯ ಇಲ್ಲ ಎಂದು ಹೇಳಲಾಗುತ್ತಿದೆ.

Advertisement

ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶ ಅಂದರೆ, ‘ಸಿ’ ಮತ್ತು ‘ಬಿ’ ವಲಯದ ಶಿಕ್ಷಕರು ‘ಎ’ ವಲಯಕ್ಕೆ ಬರದಂತೆ ನೋಡಿಕೊಳ್ಳುವ ಹುನ್ನಾರವೂ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.ಇದು ಕೂಡ ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ಕಾರಣವಾಗಿದೆ.

ಅನೇಕ ವರ್ಷಗಳಿಂದ ಒಂದೇ ಕಡೆ ಇದ್ದು, ಸ್ವಂತ ಮನೆ ಮಾಡಿ, ಮಕ್ಕಳನ್ನು ಅಲ್ಲಿಯೇ ಶಾಲಾ, ಕಾಲೇಜಿಗೆ ಸೇರಿಸಿರುವ ಶಿಕ್ಷಕರಿಗೆ ಈಗ ಫ‌ಜೀತಿ ಉಂಟಾಗಿದೆ. ಎ, ಬಿ,ಸಿ ಮೂರು ವಲಯಕ್ಕೂ ಅನ್ವಯ ಆಗುವಂತೆ ಈ ನಿಯಮ ಮಾಡಿದ್ದರೆ, ಬಹುತೇಕರು ಒಪ್ಪುತ್ತಿದ್ದರು. ಆದರೆ, ಇದು ಕೇವಲ ಎ ವಲಯಕ್ಕೆ ಸೀಮಿತವಾಗಿರುವುದಿಂದ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತದೆ. ನಿವೃತ್ತಿಗೆ ಒಂದೆರೆಡು ವರ್ಷ ಇರುವ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸುವ ಪ್ರಸ್ತಾವನೆ ಇಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಹೊಸ ನಿಯಮ ಯಾರಿಗೆ ಲಾಭ?: ಹೊಸ ನಿಯಮದಿಂದ ಹಿರಿಯ (ಸೇವಾಜೇಷ್ಠತೆಯ ಆಧಾರದಲ್ಲಿ) ಶಿಕ್ಷಕರಿಗೆ ಇದರಿಂದ ಅನುಕೂಲ ಹೆಚ್ಚಿದೆ. 2017ರ ತಿದ್ದುಪಡಿಯ ಪ್ರಕಾರ ವೃಂದ ಮತ್ತು ಜೇಷ್ಠ ತಾ ಘಟಕದಲ್ಲಿ ವರ್ಗಾವಣೆ ಪ್ರಮಾಣವನ್ನು ಶೇ.8ರಿಂದ ಶೇ.15ಕ್ಕೆ ಏರಿಸಲಾಗಿದೆ. ಒಂದೇ ವಲಯದ ಬೇರೆ ಬೇರೆ ವೃಂದದಲ್ಲಿ ಕನಿಷ್ಠ 5ವರ್ಷ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪ್ರಾಥಕ ಶಾಲಾ ಶಿಕ್ಷಕರಿಗೆ ತಾಲೂಕು ಒಂದು ಘಟಕವಾಗಿತ್ತು, ಅದನ್ನು ಶೈಕ್ಷಣಿಕ ಜಿಲ್ಲೆಗೆ ಹಾಗೂ ಜಿಲ್ಲೆಯೊಂದು ಘಟಕವಾಗಿದ್ದ ಪ್ರೌಢಶಾಲಾ ಶಿಕ್ಷಕರಿಗೆ ಈಗ ಕಂದಾಯ ವಿಭಾಗ ಒಂದು ಘಟಕವಾಗಿಸಲಾಗಿದೆ. ಇದರಿಂದ ವರ್ಗಾವಣೆ ಪಡೆಯಲಿರುವ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲ ಸಿಗಲಿದೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next