Advertisement

840ಕ್ಕೂ ಹೆಚ್ಚು ಮಕ್ಕಳಿಗೆ ಏಳೇ ಜನ ಶಿಕ್ಷಕರು!

12:02 PM May 27, 2022 | Team Udayavani |

ಯಡ್ರಾಮಿ: ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ 2022-23ನೇ ಸಾಲಿಗೆ ಬರೋಬ್ಬರಿ 840ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಪಡೆಯುವ ಮೂಲಕ ಶಿಕ್ಷಣ ಇಲಾಖೆ ಹುಬ್ಬೇರುವಂತೆ ಮಾಡಿದೆ.

Advertisement

ಸದರೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಈ ಮೊದಲಿದ್ದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗಳನ್ನು ತಾಲೂಕಿಗೆ ಒಂದರಂತೆ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಅದರಲ್ಲಿ ಪಟ್ಟಣದ ಶಾಲೆಯೂ ಹೊರತಾಗಿಲ್ಲ.

ಶಾಲೆಯಲ್ಲಿನ 840 ಮಕ್ಕಳಿಗೆ ಕೇವಲ 7 ಜನ ಕಾಯಂ ಶಿಕ್ಷಕರು ಮಾತ್ರ ಇದ್ದಾರೆ. ಅದರಲ್ಲಿ ಜುಲೈ 31ಕ್ಕೆ ಇಬ್ಬರು ಶಿಕ್ಷಕರು ವಯೋನಿವೃತ್ತಿ ಆಗಲಿದ್ದಾರೆಂದು ಶಾಲೆಯ ಮುಖ್ಯ ಗುರುಗಳು ಹೇಳುತ್ತಾರೆ. ಉಳಿದ 5 ಜನ ಶಿಕ್ಷಕರು 840 ಮಕ್ಕಳಿಗೆ ಪಾಠ ಪ್ರವಚನ ಮಾಡುವ ಅನಿವಾರ್ಯತೆ ಇದೆ. ಹೀಗಾಗಿ ಎಲ್ಲ ವಿಷಯಗಳ ಬೋಧನೆಗೆ ಕಾಯಂ ಶಿಕ್ಷಕರ ನೇಮಿಸಬೇಕಾದ ತುರ್ತು ಅಗತ್ಯ ಇದೆ.

ಪಬ್ಲಿಕ್‌ ಶಾಲೆ ಆದ ನಂತರ ಮಕ್ಕಳ ದಾಖಲಾತಿ ಹೆಚ್ಚಳವಾಗುತ್ತಲೇ ಇದೆ.ಎಲ್‌.ಕೆ.ಜಿ, ಯು.ಕೆ.ಜಿ, 1ರಿಂದ 5ನೇ ವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. 1-8 ರವರೆಗೆ ಕನ್ನಡ ಮಾಧ್ಯಮ ಇದೆ. ನಮ್ಮಲ್ಲಿ ಕಡಿಮೆ ಇರುವ ಶಿಕ್ಷಕರೇ ಎಲ್ಲ 14 ತರಗತಿಗಳ ಮಕ್ಕಳಿಗೂ ಬೋಧಿಸುತ್ತಾರೆ. ಈ ವರ್ಷಕ್ಕೆ 6ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಹೆಚ್ಚಿನ ಶಿಕ್ಷಕರ ನೇಮಕಾತಿಯಾದರೆ ಅನುಕೂಲವಾಗುತ್ತದೆ. -ಬಸವರಾಜ ಪಾಟೀಲ ಮುಖ್ಯ ಶಿಕ್ಷಕ (ಪ್ರಭಾರಿ) ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಯಡ್ರಾಮಿ

ನಮ್ಮೂರ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಇಲಾಖೆ ಮೇಲಧಿಕಾರಿಗಳು ಈ ವರ್ಷಕ್ಕೆ ಹೆಚ್ಚಿನ ಅತಿಥಿ ಶಿಕ್ಷಕರನ್ನು ನೇಮಿಸಬೇಕು. ನಮ್ಮಲ್ಲಿ ಕಡಿಮೆ ಶಿಕ್ಷಕರಿದ್ದರೂ ಅವರೆಲ್ಲ ಹೆಚ್ಚು ಕಲಿಕಾ ಚಟುವಟಿಕೆಯಲ್ಲಿ ಕ್ರಿಯಾಶೀಲರಿದ್ದಾರೆ. ಎಲ್ಲ ಮಕ್ಕಳಿಗೆ ಅವರ ಬೋಧನೆ ಸಿಗದು. -ಗುರುಬಸಪ್ಪ ಸಾಹು ಸಣ್ಣಳ್ಳಿ, ಶಿಕ್ಷಣ ಪ್ರೇಮಿ, ಯಡ್ರಾಮಿ

Advertisement

ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗಬಾರದೆಂದು ಸರ್ಕಾರದ ಅನುಮತಿ ಮೇರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ನಮ್ಮಲ್ಲಿ ಅತಿಥಿ ಶಿಕ್ಷಕರನ್ನು ಹೆಚ್ಚಾಗಿ ನೇಮಿಸಿಕೊಳ್ಳಲು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮಕ್ಕಳ ಪಾಠ ಬೋಧನೆಗೆ ಯಾವ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. -ಚವ್ಹಾಣಶೆಟ್ಟಿ ಜೆ. ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ), ಜೇವರ್ಗಿ

-ಸಂತೋಷ ಬಿ.ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next