Advertisement

ಶಿಕ್ಷಕರಿಗೆ ಗುಣ ಮಟ್ಟದ ಬೋಧನಾ ಸಾಮರ್ಥ್ಯ ಅಗತ್ಯ

05:25 PM Oct 01, 2021 | Team Udayavani |

ಕಲಬುರಗಿ: ಉನ್ನತ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ವಿಶ್ವದರ್ಜೆ ಮಟ್ಟದಲ್ಲಿ ಗುರುತಿಸಿಕೊಂಡು ಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಹೆಸರು ಪಡೆಯಲು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುವ ಮೂಲಕ ನಿರಂತರ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದ ಕಡೆಗೆ ಅವರು ಆಕರ್ಷಿತರಾಗುವಂತೆ ಮಾಡಲು ಶಿಕ್ಷಕರು ಗುಣಮಟ್ಟದ ಬೋಧನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ|ಎಸ್‌. ಆರ್‌.ನಿರಂಜನ ಹೇಳಿದರು.

Advertisement

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಗುರುವಾರ ನಡೆದ 42ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿರುವ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಇದು.

ಈ ಭಾಗದ ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಸಂಶೋಧನಾ ಕಾರ್ಯ ವಿಸ್ತರಣೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ. ಮತ್ತಷ್ಟು ಬಲವರ್ಧನೆ ಆಗಬೇಕಾದರೆ ಅಗತ್ಯವಿರುವ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬೋಧಕರ ನೇಮಕ, ಮೂಲ ಸೌಕರ್ಯಗಳ ಲಭ್ಯತೆ, ಗುಣಮಟ್ಟದ ಸಂಶೋಧನಾ ಕಾರ್ಯದಲ್ಲಿ ವೈಜ್ಞಾನಿಕತೆ ಅನುಸರಿಸುವುದರ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವಂತಾಗಬೇಕು ಎಂದರು.

ಮುಂದಿನ ನ್ಯಾಕ್‌ನ 4ನೇ ಆವೃತ್ತಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕಿದೆ. “ಎ’ ಶ್ರೇಣಿಗೆ ಅರ್ಹತೆ ಪಡೆಯಲು ವಿಶ್ವವಿದ್ಯಾಲಯ ತುರ್ತಾಗಿ ಕೈಗೊಳ್ಳಬೇಕಾದ ದೂರದೃಷ್ಟಿ ಯೋಜನೆ ಸಿದ್ಧತೆ, ಬೋಧನಾ ಕಾರ್ಯಕ್ರಮಗಳು ಜೊತೆಗೆ ಸಂಶೋಧನೆ ಮತ್ತು ಪ್ರಕಟಣೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು ಅಲ್ಲದೇ, ಈಗಿನಿಂದಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು.

Advertisement

ಇದರಿಂದ ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸಿ ನಿಲ್ಲಲು ಸ್ವಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದಂತಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ಯೋಗ ಕೌಶಲ್ಯಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಅತಿ ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ|ದಯಾನಂದ ಅಗಸರ್‌ ಮಾತನಾಡಿ, ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಸ್ನಾತಕ ಮಟ್ಟದಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಇದೇ ಶೈಕ್ಷಣಿಕ ಸಾಲಿನಿಂದ ಪದವಿ ಹೊಸ ಪಠ್ಯಕ್ರಮ ಆರಂಭಗೊಳ್ಳುತ್ತಿದೆ ಎಂದರು.

ಈ ಹೊಸ ನೀತಿಯಿಂದ ಯುವ ಜನತೆಗೆ ವಿಷಯಗಳ ಆಳವಾದ ಜ್ಞಾನ, ವೃತ್ತಿ ಕೌಶಲ್ಯ ಜೊತೆಗೆ ಸಾಮರ್ಥ್ಯ ವೃದ್ಧಿ ಪಡೆದು ಸಮಾಜದಲ್ಲಿ ಉತ್ತಮ ನಾಗರೀಕನಾಗಿ ಸ್ವತಂತ್ರ ಮತ್ತು ಸ್ವಾವಲಂಬಿಯಾಗಿ ಬದುಕಲು ಹೆಚ್ಚು ಒತ್ತು ಕೊಡಲಾಗಿದೆ. ಶಿಕ್ಷಣದಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗೆ ಆಧ್ಯತೆ ನೀಡಲಾಗಿರುವುದರಿಂದ ಬೋಧಕ ಸಿಬ್ಬಂದಿ ಪರಿಶ್ರಮ ಅತಿ ಅಗತ್ಯ ಎಂದರು.ಕುಲಸಚಿವ ಶರಣಬಸಪ್ಪ ಕೊಟ್ಟೆಪ್ಪಗೋಳ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಕಲಾ ನಿಕಾಯದ ಹಿರಿಯ ಡೀನ್‌ ಪ್ರೊ|ಎಚ್‌ .ಟಿ. ಪೋತೆ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಾಧಕ ಪ್ರಾಧ್ಯಾಕರು ಹಾಗೂ ಸೇವಾ ನಿವೃತ್ತಿ ಪಡೆದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಿಂಡಿಕೇಟ್‌ ಸದಸ್ಯೆ ಪ್ರತಿಭಾ ಛಾಮಾ, ವಿತ್ತಾಧಿ ಕಾರಿ ಪ್ರೊ| ಬಿ.ವಿಜಯ, ಎಲ್ಲ ನಿಕಾಯದ ಡೀನರು, ಸಿಂಡಿಕೇಟ್‌ ಸದಸ್ಯರು, ವಿದ್ಯಾವಿಷಯಕ ಪರಿಷತ್ತ ಸದಸ್ಯರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next