Advertisement

ಮತದಾರರ ಪಟ್ಟಿಯಲ್ಲಿಲ್ಲ ಶಿಕ್ಷಕರ ಹೆಸರು!

11:45 AM Jun 09, 2022 | Team Udayavani |

ತೆಲಸಂಗ: ಶಿಕ್ಷಕರ ಕ್ಷೇತ್ರದ ವಾಯವ್ಯ ಮತಕ್ಷೇತ್ರದ ಚುನಾವಣೆ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ದಾಖಲಾತಿ ನೀಡಿದ್ದರೂ ಹೆಸರು ಸೇರ್ಪಡೆಯಾಗದಿರುವುದಕ್ಕೆ ಸ್ಥಳೀಯ ಶಿಕ್ಷಕರು ಅಥಣಿ ತಹಶೀಲ್ದಾರ್‌ ಕಚೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮತದಾನದ ಮಹತ್ವ ಕುರಿತು ಮಕ್ಕಳು, ಜನರಿಗೆ ಅರಿವು ಮೂಡಿಸುವ ಶಿಕ್ಷಕರೇ ಮತದಾನದಿಂದ ವಂಚಿತರಾಗುವಂತಾಗಿದೆ.

Advertisement

ಕಳೆದ 6 ತಿಂಗಳಿಂದ ಶಿಕ್ಷಕರು ವಾಯವ್ಯ ಮತಕ್ಷೇತ್ರದ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ತೆಲಸಂಗ ಮತಗಟ್ಟೆ ವ್ಯಾಪ್ತಿಯಲ್ಲಿ 3 ಪದವಿ ಕಾಲೇಜು, 6 ಪಿಯು ಕಾಲೇಜು, 19 ಪ್ರೌಢಶಾಲೆಗಳಿವೆ. ಇವುಗಳಲ್ಲಿ 186 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಕೇವಲ 44 ಹೆಸರುಗಳಿವೆ.

ಬಹುತೇಕ ಎಲ್ಲ ಶಿಕ್ಷಕರೂ ಹೆಸರು ಸೇರ್ಪಡೆಗೆ ದಾಖಲೆ ನೀಡಿದ್ದು, ವಿಚಾರಿಸಿದಾಗೊಮ್ಮೆ ಅರ್ಜಿ ಫಾರ್ಮ್ ತುಂಬಿಕೊಟ್ಟಿರುವ ಪ್ರತಿಯೊಬ್ಬರ ಹೆಸರು ಮತಪಟ್ಟಿಯಲ್ಲಿ ಬರುತ್ತವೆ ಎಂಬ ಉತ್ತರ ತಹಶೀಲ್ದಾರ್‌ ಕಚೇರಿಯಿಂದ ಸಿಗುತ್ತಿತ್ತು ಎಂದು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಬಗ್ಗೆ ಶಿಕ್ಷಕರು ದೂರಿದ್ದಾರೆ.

ಜನವರಿ 17ರಂದು ಬಿಡುಗಡೆ ಮಾಡಿದ್ದ ಮತದಾರರ ಪಟ್ಟಿಯಲ್ಲಿ 44 ಹೆಸರುಗಳಿದ್ದವು. ಬಿಟ್ಟು ಹೋಗಿರುವ ಹೆಸರುಗಳ ಬಗ್ಗೆ ಶಿಕ್ಷಕರು ಆಕ್ಷೇಪಣೆ ಎತ್ತಿದ್ದರೂ, ಇದು ಅಂತಿಮವಲ್ಲ. ಕೊನೆಯ ಪಟ್ಟಿಯಲ್ಲಿ ಹೆಸರುಗಳು ಸೇರ್ಪಡೆಗೊಂಡು ಬರುತ್ತದೆ ಎಂದು ತಹಶೀಲ್ದಾರ್‌ ಕಚೇರಿ ಅಧಿಕಾರಿಗಳು ಸಮಜಾಯಿಸಿ ಹೇಳಿದ್ದರು. ಈಗ ಮೇ 29ರಂದು ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಯಾವೊಂದು ಹೆಸರುಗಳು ಸೇರ್ಪಡೆ ಆಗಿಲ್ಲ. ಈ ಪಟ್ಟಿಯಲ್ಲಿಯೂ ಅದೇ 44 ಜನರ ಹೆಸರಿವೆ. ಅದು ಅಲ್ಲದೆ ತೆಲಸಂಗದಲ್ಲಿ ಕಾರ್ಯ ನಿರ್ವಹಿಸುವ ಕೆಲ ಶಿಕ್ಷಕರ ಹೆಸರು ಅಥಣಿ ಮತಗಟ್ಟೆಯಲ್ಲಿ ಬಂದಿದೆ. ಇದೆಲ್ಲ ದುರುದ್ದೇಶ ಅಥವಾ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎನ್ನಲಾಗುತ್ತಿದೆ.

ಅಧಿಕಾರಿಗಳ ಕಾರ್ಯವೈಖರಿ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕರು, ಅಭ್ಯರ್ಥಿಗಳು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

Advertisement

ಸ್ವತಃ ನಾನೇ ತಹಶೀಲ್ದಾರ್‌ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಕೊಟ್ಟು ರಸೀದಿ ಪಡೆದಿದ್ದೇನೆ. ಪಟ್ಟಿಯಲ್ಲಿ ಹೆಸರು ಸೇರಿಸಲು ಜನವರಿಯಿಂದ ಪ್ರಯತ್ನಿಸುತ್ತಿದ್ದೇನೆ. ದಾಖಲೆಗಳನ್ನು ಗಂಟು ಕಟ್ಟಿ ಒಂದು ಮೂಲೆಯಲ್ಲಿ ಎಸೆಯಲಾಗಿದೆ. ಮಾಹಿತಿ ಕೇಳಿದರೂ ಇವತ್ತಿನವರೆಗೂ ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ನೂರಕ್ಕೂ ಹೆಚ್ಚು ಶಿಕ್ಷಕರಿರುವ ಮತಗಟ್ಟೆಗೆ ಕೇವಲ 44 ಜನರ ಹೆಸರು ಬಂದಿವೆ. –ವಿಶ್ವನಾಥ ಪಾಟೀಲ, ಉಪನ್ಯಾಸಕ, ತೆಲಸಂಗ

ಹೆಸರು ಸೇರ್ಪಡೆಗೆ ದಾಖಲೆ ಒದಗಿಸಿರುವ ಬಗ್ಗೆ ಶಿಕ್ಷಕರ ಬಳಿ ಪುರಾವೆಗಳಿವೆ. ಮತದಾನದಿಂದ ಯಾರೊಬ್ಬರೂ ವಂಚಿತರಾಗಬಾರದು. ತಹಶೀಲ್ದಾರ್‌ ಕಚೇರಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಯಾವ ಉದ್ದೇಶಕ್ಕೆ ಮತದಾರರ ಹೆಸರು ಕೈ ಬಿಟ್ಟಿದ್ದಾರೆ ಎನ್ನುವ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡುತ್ತೇನೆ. –ಅರುಣ ಶಹಪೂರ, ಬಿಜೆಪಿ ಅಭ್ಯರ್ಥಿ, ವಾಯವ್ಯ ಶಿಕ್ಷಕರ ಮತಕ್ಷೇತ್ರ

ಈಗ ಬಿಡುಗಡೆ ಮಾಡಿರುವುದೇ ಅಂತಿಮ ಮತಪಟ್ಟಿಯಾಗಿದ್ದು. ಶಿಕ್ಷಕರು ಹೆಸರು ಸೇರಿಸಲು ದಾಖಲಾತಿ ಒದಗಿಸಿದ್ದರೂ ಮತಪಟ್ಟಿಯಲ್ಲಿ ಹೆಸರು ಬಿಟ್ಟಿದ್ದು ತಪ್ಪು. ಸದ್ಯ ಈ ವಿಭಾಗವನ್ನು ನೋಡಿಕೊಳ್ಳುತ್ತಿರುವ ಅಧಿಕಾರಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಸಮಸ್ಯೆ ಏನಾಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. -ದುಂಡಪ್ಪ ಕೋಮಾರ, ತಹಶೀಲ್ದಾರ್‌, ಅಥಣಿ.

ತಹಶೀಲ್ದಾರ್‌ ಕಚೇರಿ ಅವ್ಯವಸ್ಥೆಯಿಂದ ಇಂದು ನೂರಾರು ಶಿಕ್ಷಕ ಮತದಾರರು ಮತದಾನದಿಂದ ವಂಚಿತರಾಗುತ್ತಿರುವ ವಿಷಯ ನನ್ನ ಗಮನಕ್ಕೂ ಬಂದಿದೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು.  –ನಿಂಗಪ್ಪ ಬನ್ನೂರ, ಅಭ್ಯರ್ಥಿ, ವಾಯವ್ಯ ಶಿಕ್ಷಕರ ಮತಕ್ಷೇತ್ರ

-ಜೆ.ಎಮ್‌.ಖೊಬ್ರಿ ತೆಲಸಂಗ

Advertisement

Udayavani is now on Telegram. Click here to join our channel and stay updated with the latest news.

Next