ಮುಂಚಿನ ದಿನಗಳಲ್ಲಿ ಶಿಕ್ಷಕರು ಎಂದರೆ ತುಂಬಾ ಶಿಸ್ತನ್ನು ಪಾಲಿಸುತ್ತಿದ್ದರು. ಒಂಚೂರು ಗಲಾಟೆ ಮಾಡಿದರೂ ವಿದ್ಯಾರ್ಥಿಗಳಿಗೆ ಏಟು ಬೀಳುತ್ತಿತ್ತು. ಮಕ್ಕಳು ಶಿಕ್ಷಕರು ಎಂದರೆ ಹೆದರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳು ಶಿಕ್ಷಕರನ್ನು ಕಂಡರೆ ಅಷ್ಟಾಗಿ ಹೆದರುವುದಿಲ್ಲ. ಮಕ್ಕಳನ್ನು ಹೊಡೆಯುವುದು ಅಪರಾಧ ಎಂದು ಹೇಳಿರುವ ಪರಿಣಾಮ, ಶಿಕ್ಷಕರು ಏಟು ಕೊಡುವುದಿರಲಿ, ಬೈಯುವುದಕ್ಕೂ ಹಿಂದು ಮುಂದು ನೋಡುತ್ತಾರೆ. ಏಕೆಂದರೆ ಆ ರೀತಿಯ ಭಯದ ವಾತಾವರಣ ಈಗ ಉಂಟಾಗಿದೆ. ವಿದ್ಯಾರ್ಥಿ-ಗುರುವಿನ ಮಧ್ಯೆ ಇರುವ ಭಯಭಕ್ತಿ ಅಷ್ಟಾಗಿ ಇತ್ತೀಚಿನ ದಿನಗಳಲ್ಲಿ ಕಾಣುವುದಿಲ್ಲ. ಇದರ ಜತೆಗೆ ತಮ್ಮ ಮಕ್ಕಳಿಗೆ ಹೊಡೆದರು ಬೈದರು ಎಂದು ಪೋಷಕರು ಬಂದು ಶಾಲೆಯಲ್ಲಿ ರಾದ್ಧಾಂತ ಮಾಡುವ ಸಂಭವವು ಹೆಚ್ಚಿರುವುದರಿಂದ ಶಿಕ್ಷಕರು ಶಾಲೆಯಲ್ಲಿ ಏನೇ ಮಾಡಬೇಕೆಂದರೂ ಒಂದು ಸಲ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವೊಮ್ಮೆ ಶಿಕ್ಷಕರಿಗೆ ಮಕ್ಕಳು ತಪ್ಪು ಮಾಡಿದಾಗ ಗದರುವ ಸ್ವಾತಂತ್ರ್ಯವೂ ಇಲ್ಲವೆನ್ನುವಂತೆ ಅನಿಸುತ್ತದೆ. ಆ ರೀತಿ ಮೇಲಿನ ಅಧಿಕಾರಿಗಳು, ಶಾಲೆಯ ಆಡಳಿತ ಮಂಡಳಿ, ಪೋಷಕರು ಅವರ ಮೇಲೆ ಇಲ್ಲದ ಒತ್ತಡವನ್ನು ಹಾಕುತ್ತಾರೆ. ಶಿಕ್ಷಕರಾದವರಿಗೆ ಬೇರೆ ಉದ್ಯೋಗಗಳಲ್ಲಿ ಇರುವವರಿಗೆ ಹೋಲಿಸಿದರೆ ಸಿಗುವ ಆದಾಯವು ಸಹ ಕಡಿಮೆಯೇ. ಶಿಕ್ಷಕರು ಯಾವುದೇ ಲಾಭಕ್ಕೂ ಪ್ರಲೋಭನೆ ಗಳಿಗೂ ಒಳಗಾಗದೆ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಎಂದು ಕಾಣಬೇಕು. ಮಕ್ಕಳನ್ನು ಕಟುವಾಗಿ ಶಿಕ್ಷಿಸುವುದು ಬಹಳ ತಪ್ಪು. ಅಂತೆಯೇ ಮಕ್ಕಳು ಏನೇ ತಪ್ಪು ಮಾಡಿದರೂ ಸುಮ್ಮನಿರುವುದು ಸಹ ತಪ್ಪೇ.
ಆದ್ದರಿಂದ ಶಿಕ್ಷಕನಾದವನು ಪರಿಸ್ಥಿತಿಗೆ ಅನುಸಾರ ಮಕ್ಕಳಿಗೆ ಶಿಕ್ಷೆ ವಿಧಿಸಿ ತಪ್ಪನ್ನು ಅವರಿಗೆ ಮನವರಿಕೆ ಮಾಡಬೇಕು. ಶಿಕ್ಷಕರನ್ನು ನೋಡಿಯೂ ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಕಲಿಯುವುದರಿಂದ, ಮೊದಲು ಶಿಕ್ಷಕರು ಸರಿಯಾದ ರೀತಿಯಲ್ಲಿ ಅವರ ಮುಂದೆ ಕಾಣಿಸಿಕೊಳ್ಳಬೇಕು. ಬರಿ ಪಾಠ ಮಾತ್ರ ಚೆನ್ನಾಗಿ ಮಾಡುವ ಬದಲು, ಹೊರನೋಟಕ್ಕೂ ಶಿಕ್ಷಕನಾದವನು ಚೆನ್ನಾಗಿ ಕಾಣಿಸಿಕೊಳ್ಳಬೇಕು. ಅವನ ವೇಷಭೂಷಣ, ಹಾವ-ಭಾವ, ನಡತೆ, ನಡವಳಿಕೆ ಎಲ್ಲವೂ ಚೆನ್ನಾಗಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಾನೆ. ಹಾಗಾಗಿ ಪಾಠವನ್ನು ಮಾತ್ರ ಚೆನ್ನಾಗಿ ಮಾಡುವ ಶಿಕ್ಷಕನ ಹೊರತಾಗಿ, ಗುಣ ನಡತೆಗಳಲ್ಲೂ ಚೆನ್ನಾಗಿರುವ ವ್ಯಕ್ತಿ ಉತ್ತಮ ಶಿಕ್ಷಕ ಎನಿಸಿಕೊಳ್ಳುತ್ತಾನೆ.
ಒಂದು ನೀತಿ ಕಥೆ ಹೇಳುವಂತೆ, ಒಮ್ಮೆ ತಾಯಿಯು ತನ್ನ ಮಗನನ್ನು ಒಬ್ಬ ಮಹಾತ್ಮರ ಹತ್ತಿರ ಕರೆದುಕೊಂಡು ಹೋದಳಂತೆ. ತನ್ನ ಚಿಕ್ಕ ವಯಸ್ಸಿನ ಮಗನಿಗೆ ಸಕ್ಕರೆ ತಿನ್ನುವ ಅಭ್ಯಾಸ. ಅತಿಯಾದ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಒಳ್ಳೆಯದಲ್ಲ. ದಯವಿಟ್ಟು ಅವನಿಗೆ ಬುದ್ಧಿ ಮಾತುಗಳನ್ನು ಹೇಳಿ ಎಂದಳಂತೆ. ಇದನ್ನು ಕೇಳಿದ ಆ ಮಹಾತ್ಮರು ಎರಡು ವಾರ ಬಿಟ್ಟು ಬನ್ನಿ, ಆಗ ಹೇಳುತ್ತೇನೆ ಎಂದರಂತೆ. ತಾಯಿಯು ಗೊಂದಲಗೊಂಡು, ಒಂದು ಮಾತನ್ನು ಹೇಳಲು ಎರಡು ವಾರ ಬಿಟ್ಟು ಏಕೆ ಬರಬೇಕು ಅಂದುಕೊಂಡಳಂತೆ.
ಮತ್ತೆ ಎರಡು ವಾರಗಳ ಅನಂತರ ಹೋದಾಗ ಆ ಮಹಾತ್ಮರು, ಪುಟ್ಟ ಹುಡುಗನಿಗೆ ಮಗು, ಕಾರಣವಿಲ್ಲದೆ ಸುಮ್ಮನೆ ಸಕ್ಕರೆ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಇನ್ನು ಮೇಲಿಂದ ಅನಾವಶ್ಯಕವಾಗಿ ಸಕ್ಕರೆಯನ್ನು ನೀನು ತಿನ್ನಬಾರದು, ತಿಳಿಯಿತೇ ಎಂದು ಹೇಳಿದರಂತೆ. ಮಹಾತ್ಮರು ಹೇಳಿದ ರೀತಿಯಿಂದಲೇ ಆ ಮಗು ಸಕ್ಕರೆ ತಿನ್ನುವ ಕೆಟ್ಟ ಅಭ್ಯಾಸವನ್ನು ಅಂದನಿಂದಲೇ ಬಿಟ್ಟಿತಂತೆ.
ಆದರೆ ಅವನ ತಾಯಿಗೆ ಒಂದೇ ಪ್ರಶ್ನೆ. ಇದೇಕೆ ಮಹಾತ್ಮರು ಎರಡು ವಾರ ಬಿಟ್ಟ ಅನಂತರ ಬರಲು ಹೇಳಿ ಹಿತವಚನ ಹೇಳಿದರು ಎಂದು. ಈ ಬಗ್ಗೆ ಮಹಾತ್ಮರಲ್ಲಿ ಕೇಳಿದಾಗ ಅವರು, ಬೇರೆಯವರಿಗೆ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎನ್ನುವ ಮೊದಲು ನಾನು ಸರಿ ಇರಬೇಕಲ್ಲವೇ? ನಾನೇ ಆ ತಪ್ಪುಗಳನ್ನು ಮಾಡುತ್ತಿರುವಾಗ ಬೇರೆಯವರಿಗೆ ಸರಿಯಿರಬೇಕು ಎಂದು ಹೇಳುವುದು ಸಮಂಜಸವಲ್ಲ. ಆದ್ದರಿಂದ ನನಗೆ ಇದ್ದ ಸಕ್ಕರೆ ತಿನ್ನುವ ಕೆಟ್ಟ ಅಭ್ಯಾಸವನ್ನು ಈ ಎರಡು ವಾರಗಳಲ್ಲಿ ಬಿಟ್ಟಿದ್ದೇನೆ! ಇಂದು ಶುದ್ಧ ಮನಸ್ಸಿನಿಂದ ನಾನು ನಿಮ್ಮ ಮಗನಿಗೆ ಸಕ್ಕರೆ ತಿನ್ನಬೇಡ ಎಂದು ತಿಳಿಹೇಳಿದೆ ಎಂದರಂತೆ. ಈ ರೀತಿಯಲ್ಲಿಯೇ ಇಂದಿನ ಶಿಕ್ಷಕರು ಸಹ ಯೋಚಿಸಬೇಕು. ಒಳ್ಳೆಯ ವ್ಯಕ್ತಿಗಳಾಗಲು ಇಂತಹ ವಿಷಯಗಳನ್ನು ಪಾಲಿಸಬೇಕು, ಇವುಗಳನ್ನು ಮಾಡಬಾರದು, ಎಂದೆಲ್ಲ ಹೇಳುವುದಕ್ಕೂ ಮುಂಚೆ ಶಿಕ್ಷಕನಾದವನು ಮೊದಲು ತಾನು ಅವುಗಳನ್ನು ಪಾಲಿಸಿ ಅನಂತರ ವಿದ್ಯಾರ್ಥಿಗಳಿಗೆ ಹೇಳಬೇಕು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಅಂಕೆಗಳ ಮೇಲೆ ಮಾತ್ರ ಅವಲಂಬಿತವಾಗಿದೆ. ಮಕ್ಕಳಿಗೆ ವಿಷಯಗಳನ್ನು ಬೋಧಿಸಿ ಕಲಿಸುವುದರ ಜತೆಗೆ ಅವರಿಗೆ ಜೀವನಕ್ಕೆ ಸಹಾಯಕವಾಗುವಂತಹ ಜೀವನ ಮೌಲ್ಯಗಳು ಕಲಿಸುವ ಶಿಕ್ಷಣ ಇಂದು ಎಲ್ಲರಿಗೂ ಬೇಕಾಗಿದೆ.ಸಣ್ಣಪುಟ್ಟ ವಿಚಾರಗಳಿಗೆ ಆತ್ಮಹತ್ಯೆಗೆ ಮುಂದಾಗುವುದು, ಖನ್ನತೆಗೆ ಒಳಗಾಗುವುದು ಈಗ ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಆತ್ಮಸ್ಥೆರ್ಯ, ಧೈರ್ಯ ನೀಡುವ ಶಿಕ್ಷಣ ನೀಡಬೇಕು. ಕೇವಲ ಅಂಕಗಳಿಗೆ ಮೊರೆ ಹೋಗದೆ ಕೌಶಲ ಅಭಿವೃದ್ಧಿಗೂ ಆದ್ಯತೆ ನೀಡಬೇಕು.
-ಅಚಲ ಬಿ. ಹೆನ್ಲಿ
ಬೆಂಗಳೂರು