Advertisement

ಇಂದು ಶಿಕ್ಷಕರ ದಿನಾಚರಣೆ; ಶೈಕ್ಷಣಿಕ ಕ್ಷೇತ್ರದ ಬದಲಾವಣೆಗೆ ಶಿಕ್ಷಕರೂ ಸನ್ನದ್ಧ

10:04 PM Sep 04, 2020 | mahesh |

ಉಡುಪಿ: ಇಂದು ಶಿಕ್ಷಕರ ದಿನ. ಬದಲಾದ ಶೈಕ್ಷಣಿಕ ಪದ್ಧತಿಗೆ ವಿದ್ಯಾರ್ಥಿಗಳಷ್ಟೇ ಶಿಕ್ಷಕರೂ ಹೊಂದಿಕೊಳ್ಳುವುದು ಅತ್ಯಗತ್ಯವಾಗಿದೆ. ಶಾಲೆಗಳು ಆರಂಭವಾಗದ ಕಾರಣ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಚಂದನವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲಾಗುತ್ತಿದೆ. ಇವುಗಳು ಏಕಮುಖವಾಗಿರುವ ಕಾರಣ ಶಿಕ್ಷಕರು ಮಕ್ಕಳನ್ನು ವಾರಕ್ಕೆ ಒಮ್ಮೆಯಾದರೂ ಭೇಟಿ ಮಾಡುವುದಕ್ಕಾಗಿ ವಿದ್ಯಾಗಮ ಕಲಿಕಾ ಕಾರ್ಯ ಕ್ರಮ ಸಹಕಾರಿಯಾಗಲಿದೆ. ಈ ಮೂಲಕ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರೂ ಶಿಕ್ಷಣ ನೀಡಲು ಸನ್ನದ್ಧರಾಗಿದ್ದಾರೆ.

Advertisement

ಕಾಲ್ಪನಿಕ ಕಲಿಕಾ ಕೋಣೆ
ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಡುವುದು, ಸ್ವಯಂ ಕಲಿಕೆಗೆ ಪ್ರೇರೇಪಿಸುವುದು ವಿದ್ಯಾಗಮ ಯೋಜನೆಯ ಉದ್ದೇಶ. ಪ್ರತೀ ಶಾಲೆಯಲ್ಲಿ 20-25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ಕೋಣೆ ರೂಪಿಸುವುದು, ಶಾಲೆಯಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಕಲಿಕಾ ಕೋಣೆಯ ಮಕ್ಕಳ ಸಂಖ್ಯೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಶಿಕ್ಷಕರಿಗೂ ಇದೆ ಸವಾಲು
ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಡುವುದು ಮತ್ತು ಅರ್ಥಮಾಡಿಕೊಳ್ಳುವುದು ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಗೆ ಪೂರಕವಾದ ಅಂಶ. ಶಿಕ್ಷಕರನ್ನು ಇಷ್ಟಪಡುವ ವಿದ್ಯಾರ್ಥಿಗಳು ಅವರು ಬೋಧಿಸುವ ವಿಷಯವನ್ನು ಇಷ್ಟಪಡುತ್ತಾರೆ. ಜೂನ್‌ ತಿಂಗಳಿನಿಂದ ಆರಂಭವಾದ ಆನ್‌ಲೈನ್‌ ಬೋಧನೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಕರು ಪಾಠ ಮಾಡುತ್ತಿರುವುದರಿಂದ ಶಿಕ್ಷಕರನ್ನು ಅನುಸರಿಸುವುದು ಕಷ್ಟವಾಗುತ್ತಿದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಅರಿತುಕೊಂಡರಷ್ಟೇ ಬೋಧನೆ ಮತ್ತಷ್ಟು ಪರಿಣಾಮಕಾರಿಯಾಗಲು ಸಾಧ್ಯವಿದೆ.

ಹಲವಾರು ಕಾರ್ಯಕ್ರಮ
ಮನೆಗಳಲ್ಲಿ ಟಿವಿ ಇಲ್ಲದ ಮಕ್ಕಳಿಗಾಗಿ ವಾಟ್ಸಾéಪ್‌ ಮೂಲಕ ಹಾಗೂ ನೆರೆಹೊರೆಯ ಮನೆಗಳಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಟಿವಿ ಇರುವ ಮನೆಯಲ್ಲಿ ನೋಡಿ ನೋಟ್ಸ್‌ ಮಾಡುವಂತೆ ತಿಳಿಸಲಾಗಿದೆ. ಶಿಕ್ಷಕರು ಮನೆ ಭೇಟಿ ಹಾಗೂ ಫೋನ್‌ ಕರೆಯ ಮೂಲಕ ವಿದ್ಯಾರ್ಥಿಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವಿದ್ಯಾಗಮ ಕಲಿಕೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ದಾಖಲೆಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಸಕಾಲದಲ್ಲಿ ಒದಗಿಸಲು ಕಷ್ಟಸಾಧ್ಯವಾಗಲಿದೆ ಹಾಗೂ ಹೆಚ್ಚು ವಿದ್ಯಾರ್ಥಿಗಳಿದ್ದು ಶಿಕ್ಷಕರ ಸಂಖ್ಯೆ ಕೊರತೆ ಇದ್ದಾಗ ವಿದ್ಯಾಗಮ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುವ ಅವಶ್ಯಕತೆಯೂ ಇದೆ.

3,118 ವಿದ್ಯಾರ್ಥಿಗಳಿಗೆ ಯಾವುದೇ ಸಂಪರ್ಕ ಇಲ್ಲ
ಜಿಲ್ಲೆಯಲ್ಲಿ ರಚಿಸಲಾಗಿರುವ ಕಾಲ್ಪನಿಕ ಕೋಣೆಯಲ್ಲಿ ಮೊಬೈಲ್‌ ಸ್ಮಾಟ್‌ಫೋನ್‌ ಇರುವ 1122, ಮೊಬೈಲ್‌ ಇದ್ದು ಇಂಟರ್‌ನೆಟ್‌ಸೇವೆ ಇಲ್ಲದ 2475 ಹಾಗೂ ಯಾವುದೇ ಸಂಪರ್ಕವಿಲ್ಲದ 3,118 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಇಂತಹವರಿಗೂ ಸೂಕ್ತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಿದೆ. ಸ್ಥಳೀಯ ಸಭಾಂಗಣಗಳು, ಮಂದಿರಗಳು ಸಹಿತ ಇತರ ಸ್ಥಳಗಳಲ್ಲಿ ಇಂತಹವರನ್ನು ಒಗ್ಗೂಡಿಸಿ ಶಿಕ್ಷಣ ಒದಗಿಸಲಾಗುತ್ತಿದೆ.

Advertisement

ಏಕರೂಪ ನಿಯಮ ಅಗತ್ಯ
ಶೈಕ್ಷಣಿಕ ಸೇವೆಯು ಅಸಮಾನತೆಯಿಂದ ಕೂಡಿದ್ದರಿಂದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರಲ್ಲಿ ಏಕರೂಪತೆ ಕಾಣುತ್ತಿಲ್ಲ. ಪರಸ್ಪರ ಹೋಲಿಕೆ ಮಾಡಲಾಗದ ವಿಭಿನ್ನ ರೀತಿಯ ಸರಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ, ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಅತಿಥಿ ಶಿಕ್ಷಕರು, ಉಪನ್ಯಾಸಕರು, ತಾತ್ಕಾಲಿಕ ಶಿಕ್ಷಕರು ಸೇರಿದಂತೆ ಇತರ ಎಲ್ಲ ರೀತಿಯ ಹಣೆಪಟ್ಟಿಯ ಶಿಕ್ಷಕರ ಬದುಕು ಹಲವಾರು ವರ್ಷಗಳಿಂದಲೂ ಸಂಕಷ್ಟದಲ್ಲಿದೆ. ಇವರ ಕೂಗು ಯಾರಿಗೂ ತಾಗುತ್ತಿಲ್ಲ. ವೇತನ, ಪಿಂಚಣಿ, ಭತ್ತೆಗಳಲ್ಲಿ ಏಕರೂಪತೆಯಿಲ್ಲ. ಉದ್ಯೋಗ ಭದ್ರತೆಯೂ ಇಲ್ಲದಂತಾಗಿದೆ. ಸರಕಾರ ಶಿಕ್ಷಣಕ್ಕೆ ಒತ್ತು ನೀಡಿದಂತೆ ಶಿಕ್ಷಕರಿಗೂ ಏಕರೂಪದ ನಿಯಮ ಜಾರಿಗೆ ತಂದರೆ ಮತ್ತಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪುಗೊಳಿಸಲು ಸಾಧ್ಯವಾಗಲಿದೆ.

ಸಕಲ ಸಿದ್ಧತೆ
ಜಿಲ್ಲೆಯಲ್ಲಿ ವಿದ್ಯಾಗಮ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಕೂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮನೆಮನೆ ಭೇಟಿ, ದೂರವಾಣಿ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಕಲ ಮಾಹಿತಿಗಳನ್ನು ನೀಡುತ್ತಿದ್ದಾರೆ.
-ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next