Advertisement

ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಚಿಣ್ಣರ ಭವಿಷ್ಯವನ್ನು ರೂಪಿಸುವ ಕಲಾತ್ಮಕತೆಯಲ್ಲಿ ಅಡಗಿದೆ

11:00 PM Sep 05, 2019 | mahesh |

ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆ ನಡೆಯುತಿದೆ, ಅದರಲ್ಲಿ ವಿಶೇಷವೇನೂ ಇಲ್ಲ ಯಾಕೆಂದರೆ, ಇಂದಿನ ಆಚರಣೆಗಳು ಕೇವಲ ಮೆಸೇಜ್ ಗಳಲ್ಲಿ ಮುಗಿದುಹೋಗುವುದರಿಂದ ಅದಕ್ಕೆ ಅರ್ಥವೂ ಇರುವುದಿಲ್ಲ. ಹೀಗಾಗಿ ಶಿಕ್ಷಕರ ದಿನಾಚರಣೆ ಎಂಬುದು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರುವುದು ದುರಂತವೇ ಸರಿ. ಇನ್ನೂ ಹೇಳಬೇಕೆಂದರೆ ಶಿಕ್ಷಕರ ದಿನಾಚರಣೆಯಂದು ನಾವು ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನೆಲ್ಲಾ ನೆನಪಿಸಿಕೊಳ್ಳುವುದೇ ಇಲ್ಲ ; ಎಲ್ಲರೂ ನೆನಪಿಗೆ ಬರುವುದೂ ಇಲ್ಲ. ಶಾಲೆಯಲ್ಲಿದ್ದರೆ, ಕಾಲೇಜಿನಲ್ಲಿದ್ದರೆ ಕಾಟಾಚಾರಕ್ಕೆ ಒಂದಿಷ್ಟು ಕಾರ್ಯಕ್ರಮ ಮಾಡಿ ಸಂಭ್ರಸುವುದು ಬಿಟ್ಟರೆ ಜೀವನದಲ್ಲಿ ಒಂದು ಹಂತ ತಲುಪಿದ ಮೇಲೆ ನಾವು ಎಷ್ಟು ಜನ ಶಿಕ್ಷಕರನ್ನು ನೆನಪಿಟ್ಟುಕೊಂಡಿದ್ದೇವೆಂದು ಲೆಕ್ಕ ಹಾಕಿದರೆ ನಿರಾಸೆಯೇ ಉತ್ತರವಾಗಬಹುದು.

Advertisement

ಬಹುಪಾಲು ಜನರಿಗೆ ‘ನಿಮಗೆ ನೆನಪಿರುವ ಶಿಕ್ಷಕರು ಅಥವಾ ನೀವು ಮೆಚ್ಚುವ ಶಿಕ್ಷಕರು ಯಾರು?’ ಎಂದು ಕೇಳಿದರೆ ಅವರ ಉತ್ತರ ಅಂಗನವಾಡಿಯ ಇಲ್ಲವೇ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುತ್ತಾರೆ. ನಾವು ಏನೆಲ್ಲಾ ಕಲಿತಿರಬಹುದು, ಏನೇನೋ ದೊಡ್ಡ ಹುದ್ದೆಗೂ ಏರಿರಬಹುದು ಆದರೆ ನಮ್ಮ ಬೌದ್ಧಿಕ ಮಟ್ಟವನ್ನು ವಿಸ್ತರಿಸಿಕೊಳ್ಳಲು ಬುನಾದಿ ಹಾಕಿದವರೇ ನಮ್ಮ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುತ್ತಾರೆ. ಅದರಲ್ಲೂ ‘ಶಿಕ್ಷಕಿ’ ಯರ ಪಾತ್ರ ಬಹುದೊಡ್ಡದು. ಹೀಗೆ ನೆನಪಿನಂಗಳದಲ್ಲಿ ಉಳಿದ ಆ ಶಿಕ್ಷಕಿಯರು ನಮ್ಮ ಜೀವನದುದ್ದಕ್ಕೂ ನಮಗರಿವಿಲ್ಲದಂತೆ ನಮ್ಮ ಮನದಲ್ಲಿ ಬಿತ್ತಿದ ಕೆಲವು ಮೌಲ್ಯಗಳನ್ನು ಸದಾ ನಮಗೆ ಎಚ್ಚರಿಸಿಕೊಡುತ್ತಿರುತ್ತಾರೆ.

ಹಾಗೆ ನೋಡಿದರೆ ಪೂರ್ವ ಪ್ರಾಥಮಿಕ ಹಂತವಾಗಲಿ ಅಥವಾ ಅಂಗನವಾಡಿಯೇ ಆಗಲಿ ಅಲ್ಲಿರುವ ಶಿಕ್ಷಕಿಯರು ಹೆಚ್ಚು ಓದಿದವರಲ್ಲ, ಅವರ ತರಬೇತಿ ಹಂತವೂ ಉನ್ನತ ಮಟ್ಟದ್ದಾಗಿರುವುದಿಲ್ಲ. ಆದರೆ ಅವರು ನೀಡುವ ವಾತ್ಸಲ್ಯಭರಿತ ಕಲಿಕಾ ಶೈಲಿಯೇ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಏನೂ ತಿಳಿಯದ ಆ ವಯಸ್ಸಿನಲ್ಲಿ ಇನ್ನೊಬ್ಬ ತಾಯಿಯಾಗಿ ಅವರು ನಮ್ಮ ಕಣ್ಣಿಗೆ ಗೋಚರಿಸುವುದರಿಂದಲೇ ಅವರು ನಮ್ಮ ಮನದಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತಾರೆ. ಕಟ್ಟಡದ ನಿರ್ಮಾಣದಲ್ಲಿ ಬುನಾದಿ ಹೇಗೆ ಮುಖ್ಯವಾಗಿರುತ್ತದೆಯೋ ಹಾಗೆಯೇ ಒಬ್ಬ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಆದರೆ ದುರದೃಷ್ಟವೆಂದೆ ನಾವು ಈ ಬಗ್ಗೆ ಹೆಚ್ಚು ಯೋಚಿಸಿಯೇ ಇರುವುದಿಲ್ಲ.

ವಿಶ್ವವಿದ್ಯಾಲಯಗಳಲ್ಲಿರುವ ಶಿಕ್ಷಕರಿಗೂ, ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಇರುವ ವ್ಯತ್ಯಾಸ ಗಮನಿಸಿ, ಸಿದ್ಧಪಡಿಸಿದ ತಯಾರಾದ, ಮಡಕೆಯಲ್ಲಿ ಯಾರು ಬೇಕಾದರೂ ನೀರು ತುಂಬಬಹುದು. ಆದರೆ ಮಣ್ಣನ್ನು ಗುರುತಿಸಿ, ಹದಗೊಳಿಸಿ, ಸರಿಯಾದ ಆಕಾರ ನೀಡಿ, ಅದನ್ನು ಪಕ್ವಗೊಳಿಸಿ ಒಂದು ಗಟ್ಟಿಯಾದ ರೂಪ ನೀಡುವುದಿದೆಯಲ್ಲಾ ಅದು ಬಹುಮುಖ್ಯವಾದದ್ದು.

ಶಿಕ್ಷಕ ವೃತ್ತಿಯನ್ನು ಅತ್ಯಂತ ಪವಿತ್ರ ವೃತ್ತಿ ಎಂದು ಭಾವಿಸಲಾಗಿದೆ. ಅದರಲ್ಲೂ ಭಾರತದಲ್ಲಿ ‘ಗುರು’ ಪರಂಪರೆಗಿರುವ ವೈಭವ ಅಗಾಧವಾದುದು. ಆದರೆ ಆ ವೃತ್ತಿಯ ಸಾಧಕ, ಬಾಧಕಗಳನ್ನು ಅರಿತು ಗುರುವಾದವರು ಎಚ್ಚರಿಕೆಯಿಂದ ನಡೆಯಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ. ಹೀಗಿರುವಾಗ ಶಿಕ್ಷಕ ವೃತ್ತಿಯನ್ನು ಕೇವಲ ಹೊಟ್ಟೆಪಾಡಿಗಾಗಿ ಎಂದು ಪರಿಗಣಿಸಿ ಬರುವವರ ಸಂಖ್ಯೆಗೇನೂ ಕೊರತೆ ಇಲ್ಲ. ಆದರೆ ಒಂದು ನಿಜ ಸಂಗತಿ ಎಂದರೆ ತರಬೇತಿ ಪಡೆದ ಮಾತ್ರಕ್ಕೆ ಎಲ್ಲರೂ ಶಿಕ್ಷಕರಾಗೋದಿಲ್ಲ. ಕಲಿಸುವಿಕೆ ಒಂದು ತಪಸ್ಸು….ಅದು ಸಾಕಷ್ಟು ಸಹನೆ, ಸದ್ಗುಣ ಮತ್ತು ಸಮಯವನ್ನು ಬೇಡುತ್ತದೆ. ಇದರ ಜೊತೆಗೆ ಸಚ್ಚಾರಿತ್ರ್ಯವಂತೂ ಇರಲೇಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next