Advertisement

ವಿದ್ಯಾ ಧರ್ಮಕ್ಕಿಂತ ಶ್ರೇಷ್ಠ ಧರ್ಮವಿಲ್ಲ

01:12 PM Sep 06, 2020 | Suhan S |

ಮಂಡ್ಯ: ವಿದ್ಯಾ ಧರ್ಮಕ್ಕಿಂತ ಶ್ರೇಷ್ಠವಾದುದು ಯಾವುದೇ ಧರ್ಮವಿಲ್ಲ ಎಂದು ಜಿಲ್ಲಾ ಉಸ್ತುವಾರಿಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

Advertisement

ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು, ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ದೇಶಕ್ಕೆ ಸರ್ವಪಲ್ಲಿ ರಾಧಾಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಅವರು ನಮ್ಮೆಲ್ಲರ ಶಕ್ತಿಯಾಗಿದ್ದಾರೆ ಎಂದರು.

ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮ: ಜಿಲ್ಲೆಯು ಈಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 4ನೇ ಸ್ಥಾನ ಬಂದಿರುವ ಸಂತಸದ ವಿಚಾರವಾಗಿದೆ. 20ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆಯನ್ನು ಕಳೆದ ಬಾರಿ 10ನೇ ಸ್ಥಾನ ಹಾಗೂ ಈ ಬಾರಿ 4ನೇ ಸ್ಥಾನ ತರುವಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ. ದೇಶದ ಸೇವೆ, ಸಮಾಜ ಸೇವೆಗೆ ವಿದ್ಯಾರ್ಥಿಗಳನ್ನು ಕೊಡುಗೆ ನೀಡಲು ಶಿಕ್ಷಕರು ಸದಾ ಸಿದ್ಧರಾಗಿದ್ದು, ಗುರುಗಳಿಗಿಂತ ದೊಡ್ಡವರಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅದಕ್ಕಾಗಿಯೇ ಸಮಾಜದಲ್ಲಿಗುರುವಿಗೆ ತನ್ನದೇ ಆದ ಸ್ಥಾನ ಮಾನವಿದೆ. ಆದ್ದರಿಂದ ಶಿಕ್ಷಕರನ್ನು ಎಲ್ಲರೂ ಗೌರವಿಸಬೇಕು. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಶಿಕ್ಷಕರಿಗಿದೆ ವ್ಯಕ್ತಿತ್ವ ರೂಪಿಸುವ ಶಕ್ತಿ: ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ವ್ಯಕ್ತಿತ್ವ ಹಾಗೂ ಬದುಕು ಕಟ್ಟಿಕೊಡುವ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕ ಇಲ್ಲ ಅಂದರೆ ಯಾರೂ ಇಲ್ಲ. ದೇಶದ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರು ಶ್ರೇಷ್ಠ ತತ್ವಜ್ಞಾನಿ ಹಾಗೂ ಗಟ್ಟಿ ವ್ಯಕ್ತಿತ್ವವುಳ್ಳವರಾಗಿದ್ದರು ಎಂದರು.

ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಇದರಿಂದ ಇನ್ನು ಮುಂದೆ 5, 3, 3 ಹಾಗೂ 4 ವರ್ಷಗಳು ಶಿಕ್ಷಣ ನಡೆಯಲಿದೆ. ಇನ್ನು ಮುಂದೆ ಪ್ರಿ ನರ್ಸರಿ ಎಲ್‌ಕೆಜಿ, ಯುಕೆಜಿ ಮೂರು ವರ್ಷ, ಪದವಿಗೆ 4 ವರ್ಷವಾಗಿದ್ದು, ಪ್ರತೀ ವರ್ಷ ಪದವಿಗಳು ಸಿಗಲಿದೆ. ಶಿಕ್ಷಣದಸಾರ್ವತ್ರೀಕರಣಗೊಳಿಸಲು ಹೊಸ ನೀತಿ ಜಾರಿಯಾಗಲಿದೆ ಎಂದರು.

Advertisement

ಕಾರ್ಯ ಪ್ರವೃತ್ತರಾಗಿ: ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 4ನೇ ಸ್ಥಾನ ಬಂದಿರುವುದು ಸಂತೋಷವೇ ಆಗಿದ್ದರೂ, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಮತ್ತು ಸವಾಲು ಮುಂದಿದೆ. ಅದಕ್ಕಾಗಿ ನಾವು ಇನ್ನೂ ಮೊದಲಿಗಿಂತ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರ ಮಕ್ಕಳ ಪುಸ್ತಕದ ಭಾರ ಇಳಿಸಬೇಕಾಗಿದೆ. ಇದರ ಜೊತೆಗೆ ಹೆಚ್ಚು ಶಿಕ್ಷಕರ ನೇಮಕ ಮಾಡುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದರು.

ಸಮಾರಂಭದಲ್ಲಿ ಜಿಲ್ಲೆಯ 24 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಂ.ಶ್ರೀನಿವಾಸ್‌ ವಹಿಸಿದ್ದರು. ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ತಾಪಂ ಅಧ್ಯಕ್ಷೆ ಎಚ್‌.

ಎಸ್‌.ಶಿವಕುಮಾರಿ, ಉಪಾಧ್ಯಕ್ಷೆ ಎಸ್‌.ಟಿ.ಶ್ವೇತ, ಜಿಪಂ ಸಿಇಒ ಎಸ್‌.ಎಂ.ಜುಲ್‌ಫಿಖಾರ್‌ ಉಲ್ಲಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್‌.ರಘುನಂದನ್‌, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ(ಅಭಿವೃದ್ಧಿ) ಎಂ.ಶಿವಮಾದಪ್ಪ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next