Advertisement
ನಮ್ಮ ದೇಶದಲ್ಲಿ ಉಳಿದ ಹುದ್ದೆಗಳಿಗೆಲ್ಲ ಸೇವಾವಧಿ ಇದ್ದರೆ ಗುರುವಿನ ಸೇವೆಗೆ ಜೀವಿತಾವಧಿಯೇ ಪೂರ್ಣತೆ. ಇಂಥ ಶಿಕ್ಷಣ ಸಂಸ್ಕಾರ ಸಂಸ್ಕೃತಿ ನಮ್ಮದು. ಇಲ್ಲಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಎಲ್ಲರೂ ನಿವೃತ್ತಿಯ, ಪದತ್ಯಾಗದ ನಂತರ ಮಾಜಿಗಳಾಗುತ್ತಾರೆ. ಆದರೆ ಮೇಸ್ಟ್ರೆ ಮಾತ್ರ ನಿವೃತ್ತಿಯ ನಂತರವೂ ಗುರುವೇ ಆಗಿ ಉಳಿಯುತ್ತಾನೆ. ಅಪ್ಪ – ಮಗನನ್ನು ಆ ಮೂಲಕ ಇಡೀ ಮನೆ, ಊರನ್ನು ತಿದ್ದಿ ತೀಡಿ ಸಂಸ್ಕರಿಸುವ ಹಿರಿಯ ಮೇಸ್ಟ್ರೆ ಸತ್ತ ಮೇಲೂ “ಅದು ನೋಡು ಮೇಷ್ಟ್ರ ಮನೆ, ಅವರು ನೋಡು ಮೇಸ್ಟ್ರ ಮಗಳು’ ಎಂದೆಲ್ಲಾ ಕಂಡು ತೋರಿಸಿ ಸಂಬಂಧ ನವೀಕರಿಸುವ ಪದ್ಧತಿ ಇಲ್ಲಿಯದು. ಅಂಥ ಮಹೋಪಾಧ್ಯಾಯ ಇಂದು ಉಪಧ್ಯಾಯ, ಉಪನ್ಯಾಸಕ, ಶಿಕ್ಷಕ, ಮೇಸ್ಟ್ರೆ ಎಲ್ಲವೂ ಆಗಿ “ಗುರು’ ಲಘುವಾಗುತ್ತಾ ಬರೀ ಸರ್, ಸ…, ಎಂಬಲ್ಲಿ ಮುಟ್ಟಿದ್ದಾರೆ. ಭಾಗಶಃ ಇದಕ್ಕೆ ಅಪವಾದವೂ ಇರಬಹುದು.
Related Articles
Advertisement
ಜೀವನ ಶುದ್ಧತೆ, ಚಾರಿತ್ರ್ಯ, ಪ್ರಾಮಾಣಿಕತೆ ಬರೀ ನಾವು ಓದುವ, ಓದಿಸುವ ಪಾಠದೊಳಗೆ ಇದೆಯೋ, ಬದುಕುವ ವರ್ತಮಾನದಲ್ಲಿ ದೆಯೋ ಎಂಬುದನ್ನು ನಿರ್ವಚಿಸುವಲ್ಲಿ ಇಂದಿನ ಗುರುವಿನ ಬದ್ಧತೆ ಸೂಕ್ಷ್ಮವಾದುದು. ಬಹುಪಾಲು ಪಠ್ಯಗಳನ್ನು ಇಂದು ಸಿದ್ಧ ಪಡಿಸುವವರು ಉಪನ್ಯಾಸಕರೇ. ನಿರ್ದಿಷ್ಟ ಮಾನದಂಡ, ಆವರ್ತನದಲ್ಲಿ ಪಠ್ಯಗಳು ರೂಪುಗೊಳ್ಳುತ್ತವೆ. ದೀರ್ಘಾವಧಿ ಸೇವೆ ಸಲ್ಲಿಸಿದ, ಕೆಲವೊಮ್ಮೆ ನಿವೃತ್ತರಾದ ಪ್ರಾಧ್ಯಾಪಕರು ಇಂಥ ಪಠ್ಯ ಕಟ್ಟುವ ಪ್ರಕ್ರಿಯೆಯಲ್ಲಿ ಮುಂದೆ ನೋಡುವ ಬದಲು ಹಿಂದೆ ಹಿಂದೆ ನೋಡುವುದೇ ಹೆಚ್ಚು. ಇವತ್ತಿನ ಬಹು ದೊಡ್ಡ ಅಗತ್ಯ ಪಠ್ಯ ಸಮಿತಿ ಯಲ್ಲಿ ಅದನ್ನು ಓದಬೇಕಾದ ವಿದ್ಯಾರ್ಥಿಯೊಬ್ಬ, ಅದನ್ನು ಓದಿಯೂ ಉದ್ಯೋಗ ಸಿಗದ ನಿರುದ್ಯೋಗಿಯೊಬ್ಬ, ಅಭದ್ರತೆಯಲ್ಲೇ ಅದನ್ನು ಪಾಠ ಮಾಡುವ ಶಿಕ್ಷಕನೊಬ್ಬ ಇರಬೇಕಾದ ಅಗತ್ಯ. ನಾವು ಬದುಕುವ ಕಾಲದ ಆಚೆ-ಈಚೆ ಇಟ್ಟುಕೊಂಡು ಪಠ್ಯ ಕಟ್ಟುವ, ಅದನ್ನು ನಿರೂಪಿಸುವ ಅಗತ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು.
ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಐಐಟಿಯ ತಾಂತ್ರಿಕ ಪದವಿಯ ಪ್ರಶ್ನೆ ಪತ್ರಿಕೆಯನ್ನು ಕಂಡು ಜರ್ಮನಿಯ ವಿಜ್ಞಾನಿಯೊಬ್ಬರು ಇತ್ತೀಚೆಗೆ “ಇಂಥ ಸಿಲೆಬಸ್ – ಪಾಠ ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ. ಇದೆಲ್ಲಾ ಬಾಯಿಪಾಠ ಮಾಡಿ ತೇರ್ಗಡೆಯಾಗುವಂತಹ ಪರೀಕ್ಷೆಗಳು’ ಎಂದದ್ದು ಇಡೀ ನಮ್ಮ ಕಲಿಕಾ ಕ್ರಮವನ್ನೇ ಅಣಕಿಸುವಂತಿದೆ. ಹಾಗಂತ ಕಾಲದ ಹಿತಾಸಕ್ತಿಗೆ, ವರ್ತಮಾನದ ಆಡಳಿತಶಾಹಿ ಒತ್ತಡಗಳಿಗೆ ಗುರುವಾಗಲೀ ಅವನ ಪಾಠವಾಗಲೀ ಬಲಿಯಾಗಲೇಬಾರದು. ಕಾಲದ ಹಿತಾಸಕ್ತಿ ಸಂಘರ್ಷಕ್ಕೆ ಇಳಿದಾಗ ಪಾಠದ ಕತೃì, ಗುರು ವಿಚಲಿತವಾಗಲೇ ಬಾರದು. ಉದಾಹರಣೆಗೆ ಗಾಂಧಿ ಎಂಬ ಸಾರ್ವಕಾಲಿಕ ಸತ್ಯ, ಪಾಠ ಇದೀಗ ನಿಧಾನವಾಗಿ ಕಾಲದ ಹಿತಾಸಕ್ತಿಗೆ ಅಪಥ್ಯವಾಗಿ ಗಾಂಧಿಯನ್ನು ಕೊಂದವನೇ ಸತ್ಯವಾಗಿ ಗೋಚರವಾಗುವುದು.
ಪ್ರಜಾಪ್ರಭುತ್ವದಲ್ಲಿ ಬಹುತ್ವ, ಸ್ವಾತಂತ್ರ್ಯ, ಸಮಾನತೆ, ಭಾÅತೃತ್ವ , ವ್ಯಕ್ತಿ ಗೌರವ, ಘನತೆ ಇಂಥ ಮೌಲ್ಯಗಳನ್ನು ಎತ್ತಿ ಹಿಡಿಯುವ ಎಲ್ಲರೂ ಒಪ್ಪಲೇಬೇಕಾದ ಪಠ್ಯ ಸಂವಿಧಾನವೇ, ಹಂಚಿಕೆಯ, ಸರಿಪಡಿಸುವಿ ಕೆಯಂಥ ಸಾಮಾಜಿಕ ನ್ಯಾಯಗಳ ಪ್ರಜ್ಞೆ ಇರಬೇಕು. ಇವೆಲ್ಲವನ್ನೂ ಹೀರಿಕೊಂಡು, ವೈಚಾರಿಕತೆಯನ್ನು ಬೆಳೆಸಿಕೊಂಡು, ರಾಷ್ಟ್ರದ ಕಾನೂನು ನಿಯಮಗಳನ್ನು ಒಪ್ಪಿಕೊಂಡು ಘನತೆಯಿಂದ ಬದುಕು ವುದು ಓದು ಪಠ್ಯದ ಪರಿಣಾಮವಾಗಬೇಕು.
ಹಾಗಂತ “ಗುರುಶುದ್ಧತೆ’, “ಪಠ್ಯ ಶುದ್ಧತೆ’ ಬರೀ ತರಗತಿಯೊಳಗಡೆಯ ಮಾತು ಮತ್ತು ಅವನು ಅವಲಂಬಿಸಿರುವ ಅಕ್ಷರಗಳಲ್ಲಿಲ್ಲ. ಭಾಗಶಃ ಬೋಧಕ ಬದುಕುವ ಕ್ರಮದಲ್ಲಿದೆ. ಕಳ್ಳನಿಗೆ ಒಬ್ಬ ಸಿಐಡಿಯಾದರೆ ಮೇಷ್ಟ್ರಿಗೆ ಊರೆಲ್ಲಾ ಸಿಐಡಿಗಳು. ಗುರುವಿನ ಅಸಂಗತ ವ್ಯಸನಗಳು ವಿದ್ಯಾರ್ಥಿಗಳಿಗೆ ಗೊತ್ತಾದರೆ ಅವರ ಕಥೆ ಮುಗಿಯಿತು. ವಸಾಹತುಶಾಹಿ ಬ್ರಿಟಿಷ್ ಶಿಕ್ಷಣ ಜಾರಿ ಬಳಿಕ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯ, ಸಂಶೋಧನೆ, ಪರೀಕ್ಷೆ , ಫಲಿತಾಂಶ ಇತ್ಯಾದಿಗಳು ಬಂದ ಮೇಲೆ ಪದವಿ ಆಧರಿತ ಗುರು, ಬರವಣಿಗೆ ಆಧರಿತ ಪಠ್ಯಗಳು ಸೃಷ್ಟಿಯಾದುವು. ನಿಧಾನವಾಗಿ “ಅರ್ಥ’ ಎದುರಿಗೆ ಬಂತು. ಲೋಕಾನುಭವ, ಗೌರವ, ಚಾರಿತ್ರ್ಯ, ಸಹವಾಸ – ಸಂಬಂಧ ಹಿಂದಕ್ಕೆ ಸರಿಯಿತು. ಶಾಲೆ ಕಾಲೇಜು ವಿಶ್ವವಿದ್ಯಾನಿಲಯಗಳು ಹುಟ್ಟುವ ಮುಂಚೆ ವಿದ್ಯಾರ್ಥಿಗಳು ಒಂದು ಮಾರಾಟದ “ಉತ್ಪನ್ನ’ ಎಂಬ ಪರಿಕಲ್ಪನೆ ಇರಲಿಲ್ಲ. ನೆಲ, ಪರಿಸರಾಧರಿತ ಲೋಕ – ಶಿಕ್ಷಣ ಹೆಚ್ಚು ಹೆಚ್ಚು ಜೀವವಾದಿಯಾಗಿತ್ತು. ಇಂದು ಫಲಿತಾಂಶದ ಮರುದಿನ ಗಳಿಸಿದ ಅಂಕ ಸಮೇತ ಮಗುವಿನ ಫೋಟೊ ಛಾಪಿಸಿ ಹೆದ್ದಾರಿ ಪಕ್ಕ ರಾರಾಜಿಸುವ ಜಾಹೀರಾತುಗಳನ್ನು ಗಮನಿಸಿ. ಮಕ್ಕಳು ಗಳಿಸಿದ ಅಂಕಗಳೇ ಜಾಹೀರಾತುಗಳಾಗಿ ಶಾಲೆಗಳು ಅಂಗಡಿಗಳಾಗಿ ವ್ಯಾಪಾರ ಕುದುರಿಸಿಕೊಳ್ಳುವಂತಿದೆ!
ಇಂದು ಅತ್ಯುತ್ತಮ ಶಾಲೆ, ಕ್ಲಾಸ್ ರೂಂಗಳನ್ನು ಭೌತಿಕ ಪರಿಕರಗಳಿಂದ ಅಳತೆ ಮಾಡಲಾಗುತ್ತದೆ. ತರಗತಿಯೊಳಗಡೆ ಸಿಸಿ ಕ್ಯಾಮರ ಇರಬೇಕು. ಆ ಮೂಲಕ ಮಂಗಳೂರಿನ ಕಾಲೇಜೊಂದರಲ್ಲಿ ಕೂತ ಮಗನನ್ನು ಮುಂಬಯಿಯಲ್ಲಿ ಅಪ್ಪ ಗಮನಿಸುತ್ತಿರಬೇಕು. ಎಸಿ ಇರಬೇಕು. ಟೈಲ್ಸ್ ಹಾಕಿದ ನೆಲ, ಮಹಡಿ ಏರಲು ಲಿಫ್ಟ್ , ಸ್ಮಾರ್ಟ್ ಬೋರ್ಡು ಇದೆಲ್ಲಾ ಇದ್ದಾಗ ಮಾತ್ರ ಅದು ಅತ್ಯುತ್ತಮ ಕ್ಲಾಸು, ಕಾಲೇಜು. ಯಾವ ಶಿಕ್ಷಣ ಸಂಸ್ಥೆಯಲ್ಲಿ ಬಿಗಿಯಾಗಿ ಶೂ, ಟೈ ಕಟ್ಟಿಸುತ್ತಾರೋ ಮಣ ಭಾರದ ಬ್ಯಾಗು ಹೊರಿಸುತ್ತಾರೋ ಅಲ್ಲೇ ಪೋಷಕರು ಮಕ್ಕಳನ್ನು ಸೇರಿಸಲು ಕ್ಯೂ ನಿಲ್ಲುತ್ತಾರೆ.
ಸಿದ್ಧ ಪಠ್ಯದ ನಿರ್ವಚನೆ ಮಗದೊಂದು ಸವಾಲು. ಪಠ್ಯ ಕಟ್ಟುವ ಮಂಡಳಿಯಲ್ಲಿರುವವರ ಮನೋಧರ್ಮ ನೇರವಾಗಿ ಪಾಠಗಳ ಆಯ್ಕೆಯಲ್ಲಿ ಕೆಲಸ ಮಾಡುತ್ತದೆ. ಸಂಪಾದಕ ಪ್ರಗತಿಪರನಾದರೆ ಅಥವಾ ದಲಿತ, ಬಂಡಾಯ, ಸ್ತ್ರೀವಾದಿಯ ಪ್ರತಿನಿಧಿಯಾದರೆ ಅದೇ ಪಾಠಗಳು ಪಠ್ಯದೊಳಗೆ ತುಂಬಿ ತುಳುಕುತ್ತವೆ. ಕಾಲ, ಪ್ರವೃತ್ತಿ, ಪ್ರಕಾರ, ಅಂಗ, ಜಾತಿ,ಮತ ಮೀಸಲಾತಿಯ ಪ್ರಕಾರ ಬರಹಗಳ ಆಯ್ಕೆಯೂ ಸವಾಲೇ, ಕೆಲವರಿಗೆ ಕೆಲವೊಂದು ಶೀಲವಾದರೆ ಅದೇ ಕೆಲವರಿಗೆ ಅಶ್ಲೀಲ. ಭಾಷೆ ಕಲಿಸಬೇಕಾದ ವಿಷಯಗಳನ್ನು ಸೇರಿಸಬೇಕೆಂಬ ಗೊಂದಲ. ರಾಜಕಾರಣ ಜಾತಿ, ಧರ್ಮ, ಸಮಾಜ ಸೂಕ್ಷ್ಮತೆಗಳು ನಿರ್ಧಾರದ ವಿಷಯಗಳಾಗಿ ಸಮಸ್ಯೆ ಸೃಷ್ಟಿಯಾಗುತ್ತಲೇ ಇರುತ್ತದೆ. ಇಂಥ ಸಮಿತಿಯಲ್ಲಿ “ತಜ್ಞ’ ಹಿರಿಯ ಉಪನ್ಯಾಸಕರೇ ಇರುತ್ತಾರೆಯೇ ಹೊರತು ಸಮಾಜ ವಿಜ್ಞಾನಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಇರುವುದಿಲ್ಲ.
ಬರೀ ಪಾಠ ಒಂದೇ ಅಲ್ಲ, ಶಿಕ್ಷಕನಿಗೆ ಹತ್ತಾರು ಕೆಲಸ – ಜವಾಬ್ದಾರಿಗಳು, ಪಠ್ಯ-ಪಠ್ಯೇತರ ಕೆಲಸ ಕಾರ್ಯಗಳು. ಈ ಒತ್ತಡದಿಂದಾಗಿಯೇ ಬಹುಪಾಲು ಶಿಕ್ಷಕರು ಶಾಲಾರಂಭದ ಮೊದಲ ದಿನ ಮಾಡುವ ಕೆಲಸ ಸಿಲೆಬಸ್ ವಿತರಿಸುವುದು. ಯಾವಾಗ ಪಾಠ ಪಟ್ಟಿ ಲಭ್ಯವಾಯಿತೋ ಆ ಕ್ಷಣದಿಂದ ಗುರು ತರಗತಿಯೊಳಗಡೆ ಪಾಠ-ಬದುಕು-ಲೋಕ ಸಂಬಂಧಿ ಏನೇ ಮಾತನಾಡಲಿ ವಿದ್ಯಾರ್ಥಿಗಳು ಅದನ್ನು “ಇದು ಪರೀಕ್ಷೆಗೆ ಉಂಟೋ – ಇಲ್ಲವೋ’ ಎಂದೇ ನಿರ್ಧರಿಸಿ ಸಿಲೆಬಸ್ಸಿನಲ್ಲಿದ್ದರೆ ಮಾತ್ರ ತಲೆಯ ಒಳಗೆ ಇಲ್ಲದಿದ್ದರೆ ಹೊರಗೆ ಎಂಬಂತಾಗುತ್ತದೆ. ಅಂಕಗಳೇ ಪದವಿಯಾದಾಗ, ಪದವಿಯೇ ಬದುಕು ಆಗುವ ಭರದಲ್ಲಿ ಲೋಕಾನುಭವಗಳನ್ನು ನಿರೀಕ್ಷಿಸುವ ಶಿಷ್ಯರಾಗಲಿ ಪಾಠ ಬಿಟ್ಟು ಆಚೆ – ಈಚೆ ಸರಿಯುವ ಉಪನ್ಯಾಸಕರಾಗಲಿ ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆ ಕಡಿಮೆ.
ಇಷ್ಯಾದರೂ ಶತಶತಮಾನಗಳಿಂದ ನಮ್ಮ ಗುರುಪರಂಪರೆ , ಪಠ್ಯ – ಪಾಠಗಳು ಏಕೆ ಉಳಿದಿವೆ ಎಂದರೆ ಅವು ಪ್ರತಿಪಾದಿಸುತ್ತಾ ಬಂದ ಮೌಲ್ಯ, ತತ್ತÌ, ಸಿದ್ಧಾಂತಗಳಿಗಾಗಿ. ಈಗಲೂ ಪಂಪ, ಬಸವ, ಕುಮಾರವ್ಯಾಸ, ಅಕ್ಕ, ಅಲ್ಲಮ, ದಾಸರು, ಶರೀಫರು, ಕುವೆಂಪು, ಕಾರಂತ, ಗಾಂಧಿ, ಬುದ್ಧ, ಅಂಬೇಡ್ಕರ್ ಇವರೆಲ್ಲಾ ಯಾವುದೋ ಪಾಠಗಳ ನಡುನಡುವೆ ನುಸುಳುವುದು, ಜಿನುಗುವುದು ಬರೀ ಸಾಂದರ್ಭಿಕ ಸಾಕ್ಷ್ಯಗಳಾಗಿ ಅಲ್ಲ. ಕಾಲಾತೀತ ಗುಣಮೌಲ್ಯಕ್ಕಾಗಿ. ಗಾಂಧೀಜಿಯವರ “ನೈತಿಕ ಆರ್ಥಿಕತೆ’ ಪರಿಕಲ್ಪನೆ ಬರೀ ಮಾನವಿಕ ವಿಷಯಗಳ ಪಾಠಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಲೆಕ್ಕಶಾಸ್ತ್ರದ ಉಪನ್ಯಾಸಕರಿಗೂ ಅದು ದೃಷ್ಟಾಂತವಾಗಬಹುದು. ಒಂದು ಪಠ್ಯ ಮುಂದೆ ಕೂತ ಮಕ್ಕಳನ್ನು ತಲುಪುವ ಮುಂಚೆ ಅದೇ ಸತ್ಯ-ಮೌಲ್ಯ ಕಲಿಸುವವನ ಬೇನೆಯಾಗಬೇಕು. ಸಮುದಾಯದ ಬೇನೆಯಾ ಗಬೇಕು. ಹಾಗಾದಾಗ ಮಾತ್ರ ಪಠ್ಯದ ಆತ್ಮ ಗುರುವಿನ ಆತ್ಮವಾಗುತ್ತದೆ. ನಿಜವಾದ ಅರ್ಥದಲ್ಲಿ ಶಾಲೆ, ತರಗತಿಯನ್ನು ದಾಟಿ ಲೋಕ ಪಠ್ಯವಾಗುತ್ತದೆ.ಬುದ್ಧನ ಜಾತಕ ಕಥೆಯಲ್ಲಿ ಒಂದು ಅದ್ಭುತ ನಿದರ್ಶನವಿದೆ. ಕುದುರೆ ಪ್ರಿಯ ರಾಜನೊಬ್ಬ ಹೊಸದಾಗಿ ಅನೇಕ ಕುದುರೆಗಳನ್ನು ಖರೀದಿಸಿ ಅವುಗಳಿಗೆ ವಿಶೇಷ ತರಬೇತಿಯನ್ನು ಕೊಡಿಸುತ್ತಾನೆ. ತಿಂಗಳು ಕಳೆದ ಮೇಲೆ ತರಬೇತಿ ಪಡೆದ ಕುದುರೆಗಳನ್ನು ರಾಜ ಪರೀಕ್ಷಿಸಿದಾಗ ಎಲ್ಲಾ ಕುದುರೆಗಳು ವೇಗವಾಗಿ ಓಡುವ, ನಡೆಯುವ ಬದಲು ಕುಂಟುತ್ತವೆ.
ರಾಜ ಪಶುವೈದ್ಯನನ್ನು ಕರೆಸಿ ಪರೀಕ್ಷಿಸುತ್ತಾನೆ. ದೈಹಿಕವಾಗಿ ಯಾವ ಕುದುರೆಗೂ ಯಾವುದೇ ಊನತೆ ಇಲ್ಲ. ಎಲ್ಲವೂ ಆರೋಗ್ಯವಾಗಿವೆ. ರಾಜ ಬೋಧಿಸತ್ವನ ಗಮನಕ್ಕೆ ತರುತ್ತಾನೆ. ಅವನು ಗಮನಿಸಿದಾಗ ರಾಜನ ಅನುಮಾನ ಸರಿ, ಎಲ್ಲವೂ ಕುಂಟುತ್ತಲೇ ನಡೆಯುತ್ತವೆ. ಬೋಧಿಸಣ್ತೀ ತರಬೇತಿ ನೀಡಿದ ಗುರುವನ್ನು ಕರೆಸುತ್ತಾನೆ. ಆಗ ನಿಜವಾದ ಸತ್ಯ ಗೊತ್ತಾಗುತ್ತದೆ. ಆ ಗುರು ಕುಂಟ ಎಂಬುದು. ಪರಿಣಾಮ ಗುರುವಿನಂತೆ, ತರಬೇತುದಾರನಂತೆಯೇ ಕುದುರೆಗಳು ಕೂಡಾ ಕುಂಟುತ್ತಾ ನಡೆಯುತ್ತಿದ್ದವು. ಹೀಗೆಯೇ ಗುರುವಿನ ನಡೆ, ನಡತೆ, ನಡಾವಳಿಗಳು ಸರಿ ಇದ್ದಾಗ ಅವನನ್ನು ಅನುಸರಿಸುವವರು ಕೂಡಾ ಸರಿಯಾಗಿಯೇ ಪಾಲಿಸುತ್ತಾರೆ. ಗುರು-ಶಿಷ್ಯ ಸಂಬಂಧ ಹೀಗಾದಾಗ ಮಾತ್ರ ಶಾಲಾ – ಕಾಲೇಜು – ವಿಶ್ವವಿದ್ಯಾನಿಲಯಗಳು ನಿಜವಾದ ಅರ್ಥದಲ್ಲಿ ಮಾನವ ಅಭಿವೃದ್ಧಿ ಕೇಂದ್ರಗಳಾಗುತ್ತವೆ.
-ನರೇಂದ್ರ ರೈ ದೇರ್ಲ