Advertisement

ಶಿಕ್ಷಕರಿಗೆ ಇಂದಿನಿಂದ ಬಿಸಿಯೂಟ ಸವಾಲು!

12:45 AM Oct 21, 2021 | Team Udayavani |

ಮಂಗಳೂರು: ದಸರಾ ರಜೆ ಮುಗಿದು ಗುರುವಾರದಿಂದ‌ “ಬಿಸಿಯೂಟ ಸಹಿತ ಶಾಲೆ’ ಆರಂಭಿಸುವುದಾಗಿ ಸರಕಾರ ಘೋಷಿಸಿದೆ.ಆದರೆ ಬಹುತೇಕ ಶಾಲೆಗಳಿಗೆ ಅಕ್ಕಿ ಹೊರತುಪಡಿಸಿ ಬೇಳೆ ಕಾಳು, ಎಣ್ಣೆ, ತರಕಾರಿ ಈ ಬಾರಿ ಆಹಾರ ನಿಗಮದಿಂದ ಬಂದೇ ಇಲ್ಲ!

Advertisement

ದಸರಾ ರಜೆಯ ವೇಳೆಯಲ್ಲಿಯೇ ಬಿಸಿಯೂಟ ಬಗ್ಗೆ ಸರಕಾರ ದಿಢೀರ್‌ ಘೋಷಿಸಿದ್ದರಿಂದ ಆಹಾರ ನಿಗಮದಿಂದ ಅಕ್ಕಿ ಹೊರತುಪಡಿಸಿ ಇತರ ವಸ್ತುಗಳನ್ನು ಒಟ್ಟುಗೂಡಿಸುವುದು ಕಷ್ಟ ಎಂಬ ನೆಲೆಯಲ್ಲಿ ಅದರ ಜವಾಬ್ದಾರಿಯನ್ನು ಆಯಾ ಶಾಲೆಗಳಿಗೆ ನೀಡಲಾಗಿದೆ. ಆದರೆ ರಜೆ ಮುಗಿಸಿ ಹಲವು ಶಿಕ್ಷಕರು ಇವತ್ತೇ ಶಾಲೆಗೆ ಬರುವ ಕಾರಣ ಪಠ್ಯ ಚಟುವಟಿಕೆಯ ಜತೆಗೆ ತರಕಾರಿ, ಬೇಳೆ ಸಾಮಗ್ರಿಗಳನ್ನು ಅವರು ಹೊಂದಿಸಬೇಕಾಗಿದೆ.

ಪ್ರತೀ ಬಾರಿ ಆಹಾರ ಧಾನ್ಯಗಳನ್ನು ಎರಡು ತಿಂಗಳಿಗೊಮ್ಮೆ ರಾಜ್ಯದಿಂದ ಜಿಲ್ಲಾ ವ್ಯಾಪ್ತಿಗೆ ಕಳುಹಿಸಲಾಗುತ್ತಿತ್ತು. ಇದಕ್ಕೂ ಮೊದಲು ಟೆಂಡರ್‌ ಸೇರಿದಂತೆ ಹಲವು ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಆದರೆ ಈ ಬಾರಿ ಟೆಂಡರ್‌ ಪ್ರಕ್ರಿಯೆ ತತ್‌ಕ್ಷಣಕ್ಕೆ ಕಷ್ಟ. ಆದ್ದರಿಂದ ಆಹಾರಧಾನ್ಯಗಳ ನಿಭಾವಣೆಯನ್ನು ಶಾಲೆಗಳ ಹೆಗಲಿಗೆ “ತಾತ್ಕಾಲಿಕ’ ನೆಲೆಯಲ್ಲಿ ನೀಡಲಾಗಿದೆ.

ಕರಾವಳಿಯ 2.40 ಲಕ್ಷ ಮಕ್ಕಳಿಗೆ ಬಿಸಿಯೂಟ
ಸರಕಾರಿ ಅನುದಾನಿತ ಶಾಲೆಗಳ 6ರಿಂದ 10ನೇ ತರಗತಿಗೆ ಬಿಸಿಯೂಟ ಅ. 21ರಿಂದ ಆರಂಭವಾಗಲಿದೆ. ಅ. 25ರಿಂದ 1ರಿಂದ 5ನೇ ತರಗತಿ ಆರಂಭ ವಾದರೂ ಅವರಿಗೆ ನ. 2ರಿಂದ ಬಿಸಿಯೂಟ ಆರಂಭವಾಗಲಿದೆ. ದ.ಕ. ಜಿಲ್ಲೆಯಲ್ಲಿ 1ರಿಂದ 10ರ ವರೆಗೆ ಒಟ್ಟು 1.59 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 81 ಸಾವಿರ ವಿದ್ಯಾರ್ಥಿಗಳು ಬಿಸಿಯೂಟ ಪಡೆಯಲಿದ್ದಾರೆ. ಇದಕ್ಕಾಗಿ ದ.ಕ. ಜಿಲ್ಲೆ ಯಲ್ಲಿ 3,213 ಹಾಗೂ ಉಡುಪಿ ಯಲ್ಲಿ 1,940 ಅಡುಗೆ ಸಿಬಂದಿ ಇದ್ದಾರೆ. ಮಂಗಳೂರು ನಗರ ವ್ಯಾಪ್ತಿಯ ಬಹುತೇಕ ಸರಕಾರಿ ಶಾಲೆಗಳಿಗೆ ಇಸ್ಕಾನ್‌ ವತಿಯಿಂದಲೇ ಬಿಸಿಯೂಟ ಸರಬರಾಜಾಗಲಿದೆ.

ಇದನ್ನೂ ಓದಿ:ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

Advertisement

ಖರೀದಿ ಸಂಕಷ್ಟ
ಬೇಳೆಕಾಳುಗಳು, ಎಣ್ಣೆ, ತರಕಾರಿ, ಉಪ್ಪು, ಸಕ್ಕರೆ, ಅಡುಗೆ ಅನಿಲ ಇತ್ಯಾದಿಗಳನ್ನು ಶಾಲೆ ಯಿಂದಲೇ ಖರೀದಿ ಮಾಡ ಬೇಕಾಗಿದೆ. ಅನುದಾನ ಕೊರತೆಯ ಶಾಲೆಗೆ ಇದು ದೊಡ್ಡ ಸವಾಲು. ಜತೆಗೆ ಏಕೋಪಾಧ್ಯಾಯ, ಶಿಕ್ಷಕರ ಕೊರತೆಯ ಶಾಲೆಯಲ್ಲಿ ಇದನ್ನು ನಿಭಾಯಿಸುವುದು ಕಷ್ಟ. ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕಿಯರಷ್ಟೇ ಇದ್ದು ಈ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ.

ಸ್ಥಳೀಯವಾಗಿ ಆಹಾರ ಖರೀದಿ
6ರಿಂದ 10ರ ವರೆಗಿನ ಮಕ್ಕಳಿಗೆ ಬಿಸಿಯೂಟ ಗುರುವಾರದಿಂದ ಆರಂಭವಾಗಲಿದೆ. ಆಹಾರ ನಿಗಮದಿಂದ ಆಹಾರ ಧಾನ್ಯ ಸೇರಿದಂತೆ ಸಾಮಗ್ರಿಗಳು ಸರಬರಾಜಾಗುವವರೆಗೆ ಸ್ಥಳೀಯವಾಗಿ ಖರೀದಿಗೆ ಸರಕಾರ ಸೂಚಿಸಿದೆ. ಇದು ಕೇವಲ ತಾತ್ಕಾಲಿಕ ಕ್ರಮ. ನವೆಂಬರ್‌ 1ರಿಂದ ಈ ಪ್ರಕ್ರಿಯೆ ಸರಿಯಾಗಲಿದೆ. ಅನುದಾನ ಬಳಕೆಗೆ ಅನುಮತಿ ನೀಡಲಾಗಿದೆ.
– ಮಲ್ಲೇಸ್ವಾಮಿ, ಎನ್‌.ಎಚ್‌. ನಾಗೂರ,
ದ.ಕ., ಉಡುಪಿ, ಡಿಡಿಪಿಐಗಳು

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next