Advertisement
ದೂರದ ಬೆಂಗಳೂರು, ಮೈಸೂರು, ಮಂಗಳೂರುಗಳಿಂದ ಒಂದಷ್ಟು ಟೆಕ್ಕಿಗಳು ಬರ್ತಾರೆ. ಸರ್ಕಾರಿ ಶಾಲೆಗಳನ್ನು ಹುಡುಕಿ, ಪೇಯಿಂಟ್ ಬಳಿದು, ಬೇಕಾದ ವಸ್ತುಗಳನ್ನು ಕೊಟ್ಟು ಹೋಗ್ತಾರೆ. ಅವರೆಲ್ಲ ಇಷ್ಟು ಮಾಡಬೇಕಾದರೆ, ನಮ್ಮ ಸ್ಕೂಲುಗಳಿಗೆ ನಾವೇನಾದರೂ ಮಾಡಬೇಕಲ್ಲ. ಎಷ್ಟು ದಿನ ಅಂತ ಹೀಗೆ ಸೇವೆ ಮಾಡಿಸಿಕೊಳ್ಳುವುದು- ಇಂಥ ಯೋಚನೆ ಕೊಟ್ಟಿಗೆಹಾರ, ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕುಮಾರ್ ಅವರಿಗೆ ಬಂದಿತ್ತು.
ಆಗಾಗ ಮೀಟಿಂಗ್‌ನಲ್ಲಿ ಸೇರುತ್ತಿದ್ದ ಒಂದಷ್ಟು ಗೆಳೆಯರಿಗೆ ಈ ವಿಚಾರ ತಿಳಿಸಿದರು. ಇಬ್ಬರು-ಮೂವರು ಜೊತೆಯಾದರು. ಕುಮಾರ್ ಅವರನ್ನು ಹಿಂದೆ ಕೋಳೂರು ಶಾಲೆಗೆ ಡೆಪ್ಯುಟೇನ್ ಹಾಕಿದ್ದಾಗ ಒಂದು ರೂಮಿಗೆ ತಾವೇ ಬಣ್ಣ ಬಳಿದು ಬಿಟ್ಟಿದ್ದರು. ಆ ಅನುಭವ ಜೊತೆಗಿತ್ತು. ಶಿಕ್ಷಕರು ಹಣ ಉಳಿಸುವ ಸಲುವಾಗಿ ಶಾಲೆಯಲ್ಲಿ ಸಣ್ಣ ಪುಟ್ಟದಾಗಿ ಬಣ್ಣ ಬಳಿದು ಕೊಳ್ಳುವುದು ಹೊಸದೇನಲ್ಲ. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಮೇಲೆ ಬಣಕಲ್‌ನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ರೂಮಿಗೆ ಪೇಯಿಂಟ್ ಬಳಿದರು. ಮೂರು ಜನ ಸೇರಿ, ಕೈಯಿಂದ ಒಂದಷ್ಟು ಹಣ ಹಾಕಿದ ಮೇಲೆ, ಆ ಶಾಲೆಯ ಶಿಕ್ಷಕರೂ ಕೈ ಜೋಡಿಸಿದರು. ಸಂಜೆ ಹೊತ್ತಿಗೆ ಶಾಲೆಯ ಸ್ವರೂಪವೇ ಬದಲಾಗಿತ್ತು. ಶಾಲೆಯ ಗೋಡೆ ಚೆನ್ನಾಗಿತ್ತು. ಹಾಗಾಗಿ ಖರ್ಚು ಹೆಚ್ಚೇನೂ ಬರಲಿಲ್ಲ. ಕೇವಲ ಒಂದೆರಡು ಸಾವಿರದೊಳಗೆ ರೂಮಿನ ಸ್ವರೂಪವೇ ಬದಲಾಯಿತು. ಆಮೇಲೆ, ಗೆಳೆಯ ಸಿದ್ದಪ್ಪ ಶೆಟ್ಟರು ಕೂಡ ತಮ್ಮ ಶಾಲೆಯ ರೂಮಿಗೆ ತಾವೇ ಬಣ್ಣ ಬಳಿದು ಕೊಂಡ ಸುದ್ದಿ ಬಂತು. ಹೀಗೆ, ಸರ್ಕಾರಿ ಶಿಕ್ಷಕರೇ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುತ್ತಿದ್ದಾರೆ ಎಂಬ ಸುದ್ದಿ ಚಿಕ್ಕಮಗಳೂರು, ಮೂಡಿಗೆರೆ ತುಂಬ ಹಬ್ಬುತ್ತಿದ್ದಂತೆ ಶಿಕ್ಷಕರಾದ ನವೀನ್, ವೆಂಕಟೇಶ್, ವಸಂತ್, ಜಯಂತ್, ಸುನೀಲ್, ಮಧುಸೂದನ್, ಸಲೀಂ, ಕಿರಣ್‌ಕುಮಾರ್, ಶಂಕರ್ ಜೊತೆಯಾದರು.
Related Articles
ಹೀಗೆ ಮಾಡಿದರೆ ಆಗೋಲ್ಲ ಅಂತ ಪ್ರತ್ಯೇಕ ವ್ಯಾಟ್ಸಾಪ್ ಗುಂಪು ರಚನೆ ಮಾಡಿದರು. ವಾರದಲ್ಲಿ ಒಂದು ದಿನ ಸರ್ಕಾರಿ ಶಾಲೆಯ ಸೌಂದರ್ಯ ಬದಲಿಸುವ ವಿಚಾರವಾಗಿ ಪಣ ತೊಟ್ಟರು. ಆರಂಭದಲ್ಲಿ ತಮ್ಮ ಕೈಯಿಂದಲೇ ಹಣ ಹಾಕುತ್ತಿದ್ದರು. ಕಡಿಮೆ ಆದರೆ, ಬಣ್ಣ ಬಳಿಯುವ ಶಾಲೆಯ ಶಿಕ್ಷಕರೂ ಕೈ ಜೋಡಿಸುತ್ತಿದ್ದರು. ಅಲ್ಲಿ ಬಣ್ಣ ಬಳಿಯಲು ಹಳೇ ವಿದ್ಯಾರ್ಥಿಗಳ ನೆರವು ಪಡೆದರು. ಹೀಗೆ, ಇವತ್ತು ಹೆಗ್ಗೂಳು, ಬಣಕಲ್, ಬಿದರಹಳ್ಳಿ ಶಾಲೆ, ದುಂಡುಗ ಶಾಲೆಗಳು ಸೇರಿದಂತೆ ಹೆಚ್ಚು ಕಮ್ಮಿ 15-20ಶಾಲೆಗಳಿಗೆ ಬಣ್ಣ ಬಳಿದಿದೆ ಈ ಶಿಕ್ಷಕರ ತಂಡ.
Advertisement
ಮೊನ್ನೆ ಏರಡಿಕೆ ಶಾಲೆಯ ನಲಿಕಲಿ ರೂಮಿನ ಬಾಗಿಲು ಮಂಗನ ರೂಪ ಪಡೆದಿದೆ. ಇದರಿಂದ ಅಲ್ಲಿ ಓದುತ್ತಿರುವ ಮಕ್ಕಳಿಗೆ ಶಾಲೆಯ ಬಗ್ಗೆ ಕುತೂಹಲ ಮೂಡಿದೆಯಂತೆ. “ಪ್ರತಿ ಶಾಲೆಗೂ ಒಂದೊಂದು ಕಾನ್ಸೆಪ್ಟ್ ಮಾಡ್ತಾ ಇದ್ದೀವಿ. ಅದರಲ್ಲಿ ಒಂದು ಸಂದೇಶ ಇರುತ್ತದೆ. ಈ ಹಿಂದೆ, ಅಂಕಿಗಳನ್ನು ಬರೆಯೋದು, ಪ್ರಸಿದ್ಧ ವ್ಯಕ್ತಿಗಳ ಮಾಹಿತಿ ತಿಳಿಸೋದು ಎಲ್ಲ ಮಾಡುತ್ತಿದ್ದರು. ಇದು ಹಳತಾಯಿತು. ಈಗ ಪೇಯಿಂಟ್ ಜೊತೆಗೆ ಅಲ್ಲಲ್ಲಿ ಚಿತ್ರಗಳನ್ನು ಬಿಡಿಸಿ, ವಿದ್ಯಾರ್ಥಿಗಳನ್ನು ಸೆಳೆಯುವ, ಅವರ ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ. ಶಾಲೆಯ ಹೊರಗೆ ಬಿಡಿಸುವ ಚಿತ್ರ ಆ ಶಾಲೆಯ ಐಕಾನ್ ಆಗಿರುತ್ತದೆ ಅಂತಾರೆ ಕುಮಾರ್.
ಬಣ್ಣ ಬಳಿಯುವ ಶಾಲೆಯನ್ನು ಆಯ್ಕೆ ಮಾಡುವ ರೀತಿ ಬಹಳ ಭಿನ್ನ. ಮೊದಲು ಶಿಕ್ಷಕರ ವ್ಯಾಟ್ಸಾಪ್ ಗುಂಪಿನಲ್ಲಿ, ಈ ವಾರ ನಾವು ಇಂಥ ಶಾಲೆಗೆ ಪೇಯಿಂಟ್ ಮಾಡಲು ಹೋಗುತ್ತಿದ್ದೇವೆ. ಸೇವೆ ಮಾಡಲು ಯಾರು ಬೇಕಾದರೂ ಬರಬಹುದು ಅಂತ ಸುದ್ದಿ ಹಾಕುತ್ತಾರೆ. ಇದನ್ನು ನೋಡಿಯೇ, ಸುತ್ತಮುತ್ತಲ ಶಿಕ್ಷಕರು ಬರುತ್ತಾರೆ. ಹೀಗೆ, ಬಂದು, ಬಣ್ಣ ಬಳಿಯಲು ನೆರವಾದ ಶಿಕ್ಷಕರ ಶಾಲೆಗೆ ಮುಂದೆ ಬಣ್ಣ ಬಳಿಯುವುದಕ್ಕೆ ಮೊದಲು ಪ್ರಾಮುಖ್ಯತೆ. ಅದರ ಸ್ಥಿತಿಗತಿ, ಗೋಡೆಯ ಬಗ್ಗೆ ಅಧ್ಯಯನ ಮಾಡುತ್ತಾರೆ. ಒಂದು ಪಕ್ಷ ಗೋಡೆ ಶಿಥಿಲ ಗೊಂಡಿಲ್ಲ ಎಂತಾದರೆ ಹೆಚ್ಚಿನ ಬಣ್ಣದ ಅವಶ್ಯಕತೆ ಇರೋಲ್ಲ. ಇದೆಲ್ಲವನ್ನೂ ಪರೀಕ್ಷಿಸಿ ಆನಂತರ ಬಣ್ಣಕೊಳ್ಳುವ ಪ್ರಕ್ರಿಯೆ ಶುರುವಾಗುತ್ತದೆ. ಇದಕ್ಕೆ ಸ್ಥಳೀಯ ಶಾಲೆಯ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸುತ್ತಾರೆ. ಅಲ್ಲಿ ಬಂದವರು ಇನ್ನೊಂದು ಶಾಲೆ ಇದೇ ರೀತಿ ಇದೆ ಅಂದರೆ, ಅಲ್ಲಿ ಸ್ಥಿತಿಗತಿ ಪರಿಶೀಲಿಸಿ ಮತ್ತೆ ಅಲ್ಲಿಯೂ ಬಣ್ಣ ಬಳಿದು ಬರುತ್ತದೆ. ಒಂದು ಶಾಲೆಗೆ ಬಣ್ಣ ಬಳಿಯಲು ಕನಿಷ್ಠ 4-5 ಜನರ ಅಗತ್ಯವಿದೆಯಂತೆ. ಹೀಗೆ, ಶಿಕ್ಷಕರು ನಾವು ರೆಡಿ ಅಂತ ಹೇಳಿದ ತಕ್ಷಣ ಕೆಲಸ ಶುರುವಾಗುತ್ತದೆ. ಸಾಮಾನ್ಯವಾಗಿ ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಶಾಲೆಯ ಬಣ್ಣ ಬಳಿಯುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತದೆಯಂತೆ.