Advertisement

ಹಿಂದಿ ಹೋಗುವ ಭಯದಲ್ಲಿ ಶಿಕ್ಷಕರು

06:00 AM Sep 17, 2017 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಿಗೆ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದರಿಂದ ಅಲ್ಲಿರುವ ಹಿಂದಿ ಶಿಕ್ಷಕರಿಗೆ ಈಗ ತಲೆಬಿಸಿ ಪ್ರಾರಂಭವಾಗಿದೆ.

Advertisement

ಸಿಬಿಎಸ್‌ಇ ಪಠ್ಯಕ್ರಮ ಜಾರಿಯಾದರೆ ಪ್ರಥಮ ಮತ್ತು ದ್ವಿತೀಯ ಭಾಷೆ (ದ್ವಿಭಾಷಾ ಸೂತ್ರ) ಇರುವುದರಿಂದ ಸದ್ಯ ಸರ್ಕಾರಿ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿ ಶಿಕ್ಷಕರಿಗೆ ಇದರಿಂದ ಕೆಲಸವಿಲ್ಲದಂತಾಗುವ ಪ್ರಮೇಯವೇ ಹೆಚ್ಚು.
ಹೀಗಾಗಿ, ಸರ್ಕಾರದ ಹೊಸ ಚಿಂತನೆ ನಮ್ಮ ಉದ್ಯೋಗಕ್ಕೆ ಕಂಟಕವಾಗಬಹುದು ಎಂಬುದು ಹಿಂದಿ ಶಿಕ್ಷಕರ ಆತಂಕ. ಏಕೆಂದರೆ ಪ್ರಸ್ತುತ  ಹಿಂದಿ ಶಿಕ್ಷಕರಿಗೆ ನಿತ್ಯ ಮೂರು ತರಗತಿ ಪಾಠ ಮಾಡುವುದು ಮಾತ್ರ ಹೊಣೆಗಾರಿಕೆ.  ಈ ಹಿನ್ನೆಲೆಯಲ್ಲಿ  ಹಿಂದಿ ಶಿಕ್ಷಕರಲ್ಲಿ ಕೆಲವರು, ನಿತ್ಯವೂ ನಮಗೂ ಐದಾರು ತರಗತಿ ನಡೆಸಲು ಅವಕಾಶ ನೀಡಬೇಕು ಎಂಬ ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ.

2016-17ರ ಡೈಸ್‌ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 22,454 ಸರ್ಕಾರಿ  ಹಾಗೂ 2,835 ಅನುದಾನಿತ ಪ್ರೌಢಶಾಲೆ ಇದೆ. ಹಾಗೆಯೇ 1,45,720 ಶಿಕ್ಷಕರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಗೂ 15,945 ಶಿಕ್ಷಕರು ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಲ್ಲಿ ಸರ್ಕಾರಿ ಶಿಕ್ಷಕರು ಶೇ.30ಕ್ಕಿಂತ ಹೆಚ್ಚಿದ್ದಾರೆ. 1.45 ಲಕ್ಷ ಪ್ರೌಢಶಾಲಾ ಶಿಕ್ಷಕರಲ್ಲಿ  ಒಂದು ಪ್ರೌಢಶಾಲೆಗೆ ತಲಾ ಒರ್ವ ಶಿಕ್ಷಕರಂತೆ ಸುಮಾರು 20 ಸಾವಿರ ಹಿಂದಿ ಶಿಕ್ಷಕರಿದ್ದಾರೆ. ಹಾಗೆಯೇ ಅನುದಾನಿತ ಶಾಲೆಯಲ್ಲೂ ಹಿಂದಿ ಶಿಕ್ಷಕರಿದ್ದಾರೆ.

ಸಿಬಿಎಸ್‌ಇ ಪಠ್ಯಕ್ರಮ ಅವಳವಡಿಸಲು ಚಿಂತನೆ:
ರಾಜ್ಯ ಸರ್ಕಾರ ಈಗಾಲೇ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಕ್ಕೆ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಿದೆ. ಪ್ರಸ್ತಕ ಸಾಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಹಿಂದಿನ ಸಾಲಿನಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಬಿಎಸ್‌ಇ ಪಠ್ಯಕ್ರಮದಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದ್ದು, ಮುಂದಿನ ವರ್ಷದಿಂದ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಈ ಪಠ್ಯಕ್ರಮದ ಅನುಷ್ಠಾನಕ್ಕೂ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ.

ಸರ್ಕಾರಿ ಪ್ರೌಢಶಾಲೆಯಲ್ಲಿ ಸಿಬಿಎಸ್‌ಇ ಪಠ್ಯಕ್ರಮ  ಅಳವಡಿಸುವುದರಿಂದ ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲಾ ವಿದ್ಯಾರ್ಥಿಗಳ ಜತೆ ಸ್ಪರ್ಧೆ ಮಾಡಬಹುದು. ಜತೆಗೆ ಮಕ್ಕಳ ಕಲಿಕಾ ಗುಣಮಟ್ಟವು ಸುಧಾರಿಸುತ್ತದೆ. ಈ ಪಠ್ಯಕ್ರಮದ ಆಧಾರದಲ್ಲೇ ಶಿಕ್ಷಕರಿಗೂ ತರಬೇತಿ ನೀಡುವುದರಿಂದ ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಉತ್ತಮವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ದ್ವಿಭಾಷಾ ಸೂತ್ರ:
ಒಂದು ವೇಳೆ ಮುಂದಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ ಪಠ್ಯಕ್ರಮ ಜಾರಿಗೆ ಬಂದರೆ, ಪ್ರಥಮ ಭಾಷೆ ಕನ್ನಡ,  ದ್ವಿತೀಯ ಭಾಷೆ ಇಂಗ್ಲಿಷ್‌ ಹಾಗೂ ತೃತೀಯ ಭಾಷೆ ಹಿಂದಿ, ಸಂಸ್ಕೃತ, ಮರಾಠಿ, ಉರ್ದು ಇತ್ಯಾದಿ ಎಂಬ ನಿಯಮ ಬದಲಾಗಲಿದೆ. ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಸದ್ಯ ಅನುಸರಿಸುತ್ತಿರುವ ದ್ವಿಭಾಷಾ ಸೂತ್ರವೇ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಪ್ರಥಮ ಭಾಷೆಯಾಗಿರುತ್ತದೆ. ಎರಡನೇ ಭಾಷೆ ಇಂಗ್ಲಿಷ್‌ ಆಗಿರುತ್ತದೆ. ಖಾಸಗಿ ಅಥವಾ ಅನುದಾನಿತ ಶಾಲೆ, ವಿವಿಧ ಮಾಧ್ಯಮದ ಶಾಲೆಯಲ್ಲಿ ಪ್ರಥಮ ಭಾಷೆ ಬದಲಾಗುತ್ತದೆ.

ರಾಜ್ಯದ ಸುಮಾರು 22 ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪ್ರಥಮ ಭಾಷೆಯಾದರೆ, ಇಂಗ್ಲಿಷ್‌ ದ್ವಿತೀಯ ಭಾಷೆಯಾಗಿದೆ. ತೃತೀಯ ಭಾಷೆಯಾಗಿ ಹಿಂದಿ ಅಥವಾ ಸಂಸ್ಕೃತ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಸಂಸ್ಕೃತ ಓದುತ್ತಿರುವ ಮಕ್ಕಳ ಸಂಖ್ಯೆ ತೀರ ಕಡಿಮೆ. ಇದು ಹಿಂದಿ ಶಿಕ್ಷಕರ ಭಯಕ್ಕೆ ಕಾರಣ.

ಹಿಂದಿ ಶಿಕ್ಷಕರು ಸದ್ಯ ದಿನಕ್ಕೆ ಮೂರು ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಅದನ್ನು ಹೆಚ್ಚಿಸುವಂತೆ ಹಿಂದಿ ಶಿಕ್ಷಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರೌಢಶಾಲೆಗೆ ಸಿಬಿಎಸ್‌ಇ ಪಠ್ಯಕ್ರಮವನ್ನು ಅಳವಡಿಸುವ ಚಿಂತನೆ ನಡೆದಿರುವುದರಿಂದ ದ್ವಿಭಾಷಾ ಸೂತ್ರ ಜಾರಿಗೆ ಬರುವ ಸಾಧ್ಯತೆಯೂ ಇದೆ.
-ಫಿಲೋಮಿನಾ ಲೋಬೊ, ನಿರ್ದೇಶಕಿ, ಪ್ರೌಢ ಶಿಕ್ಷಣ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next