ಬೆಂಗಳೂರು: ತುಮಕೂರು ಜಿಲ್ಲೆಯ ತುರುವೇ ಕೆರೆ ತಾಲೂಕಿನ ದಂಡಿನಶಿವರ ಹೋಬಳಿಯಲ್ಲಿ ರುವ ಕರ್ನಾಟಕ ಪಬ್ಲಿಕ್ ಶಾಲೆಯ 8, 9 ಹಾಗೂ 10ನೇ ತರಗತಿಗಳಿಗೆ ಶೀಘ್ರ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿನ ನೀಡಿದೆ.
ಈ ವಿಚಾರವಾಗಿ ತುರುವೇಕೆರೆ ತಾಲೂಕಿನ ದುಂಡ ಗ್ರಾಮದ ನಿವಾಸಿ ಡಿ.ಟಿ. ಲಕ್ಷ್ಮೀ ನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡುವ ಕರ್ತವ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರದ್ದಾಗಿದೆ.
ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿ ಬಗ್ಗೆ ಈವರೆಗೂ ಯಾವುದೇ ನಿರ್ಧಾರವನ್ನೂ ಕೈಗೊಳ್ಳಲಾಗಿಲ್ಲ. ಇದರಿಂದ, ಶಾಲೆಯ 166 ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಆದ್ದರಿಂದ, ದಂಡಿನಶಿವರ ಕರ್ನಾಟಕ ಪಬ್ಲಿಕ್ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಲು ಆಯುಕ್ತರು ತಕ್ಷಣವೇ ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ:- ಹುಬ್ಬಳ್ಳಿ-ಬೀದರ್ ಸ್ಲೀಪರ್ ಕೋಚ್ ಬಸ್ ಸೇವೆ ಆರಂಭ
ಈ ಆದೇಶದ ಅನುಪಾಲನಾ ವರದಿಯನ್ನು ಡಿ.22ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ದಂಡಿನಶಿವರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8, 9 ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 166 ವಿದ್ಯಾರ್ಥಿಗಳಿದ್ದಾರೆ. ಆದರೆ, ಶಾಲೆಗೆ ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರನ್ನೇ ನೇಮಕ ಮಾಡಲಾಗಿಲ್ಲ.
ಈ ಸಂಬಂಧ ಕಳೆದ ಅ.10ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳಲ್ಲಿ ಇಂಗ್ಲಿಷ್ ಕಡ್ಡಾಯ ವಿಷಯವಾಗಿದೆ. ಒಂದು ವೇಳೆ ಶಾಲೆಗೆ ಆಂಗ್ಲ ಭಾಷೆ ಬೋಧಿಸುವ ಶಿಕ್ಷಕರನ್ನು ನೇಮಕ ಮಾಡದಿದ್ದರೆ, 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಮಸ್ಯೆಯಾಗಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿ ನ್ಯಾಯಾಲಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತು.