Advertisement

ಶಿಕ್ಷಕರ ವರ್ಗಾವಣೆ ಅಂತಿಮ ನಿಯಮ ಪ್ರಕಟ

09:57 AM Jul 27, 2020 | mahesh |

ಬೆಂಗಳೂರು: ಶಿಕ್ಷಕರ ವರ್ಗಾ ವಣೆಗೆ ಸಂಬಂಧಿಸಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ವರ್ಗಾವಣೆ ಕಾಯ್ದೆ 2020ಕ್ಕೆ ಅಂತಿಮ ನಿಯಮ ರೂಪಿಸಲಾಗಿದೆ. ಸರಕಾರವು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ 2020ಕ್ಕೆ ಸಂಬಂಧಿಸಿ ನಿಯಮಗಳನ್ನು ಅಂತಿಮಗೊಳಿಸಿದ್ದರೂ, ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣ ಹೊರತುಪಡಿಸಿ ಸಾಮಾನ್ಯ ವರ್ಗಾವಣೆಗೆ ಅವಕಾಶ ಇಲ್ಲದಿರುವುದರಿಂದ ಸದ್ಯ ವರ್ಗಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.

Advertisement

ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕಿನಲ್ಲಿ ಶಿಕ್ಷಕರನ್ನು ನಿಯೋಜಿಸುವ ಉದ್ದೇಶದಿಂದ ಶೇ. 25ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲೂಕಿನಲ್ಲಿ ವರ್ಗಾವಣೆಗೆ ಅವಕಾಶ ನೀಡಿಲ್ಲ. 50 ವರ್ಷ ಮೇಲ್ಪಟ್ಟ ಶಿಕ್ಷಕಿಯರು ಹಾಗೂ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಪತಿ, ಪತ್ನಿ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಅಥವಾ ಅನುದಾನಿತ ಸಂಸ್ಥೆಯ ನೌಕರರನ್ನು ವಿವಾಹವಾಗಿರುವ ಶಿಕ್ಷಕರು, ಮಾರಕ ಕಾಯಿಲೆ ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ ಅಥವಾ ಪತಿ – ಪತ್ನಿ ಅಥವಾ ಮಕ್ಕಳು ಮತ್ತು ಶೇ. 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ.

ಗರ್ಭಿಣಿಯರಿಗೆ ಅಥವಾ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಹೊಂದಿರುವ ಶಿಕ್ಷಕಿಯರಿಗೆ, ಅವಲಂಬಿತ ಮಕ್ಕಳೊಂದಿಗೆ ಇರುವ ವಿಧವೆ ಅಥವಾ ವಿಧುರ ಶಿಕ್ಷಕರು. ಭಾರತೀಯ ರಕ್ಷಣಾ ಪಡೆಗಳು, ಅರೆ ಸೇನಾ ಪಡೆಗಳ ಹಾಲಿ ಅಥವಾ ಮಾಜಿ ಸೈನಿಕ ಅಥವಾ ಮೃತ ಸೈನಿಕನ ಪತ್ನಿ, ಅವಲಂಬಿತ ಮಕ್ಕಳೊಂದಿಗೆ ಇರುವ ವಿವಾಹ ವಿಚ್ಛೇದಿತ ಶಿಕ್ಷಕ ಅಥವಾ ಶಿಕ್ಷಕಿ, 50 ವರ್ಷ ವಯೋಮಾನದ ಶಿಕ್ಷಕಿಯರು ಅಥವಾ 55 ವರ್ಷ ವಯೋಮಾನದ ಶಿಕ್ಷಕರಿಗೆ ವರ್ಗಾವಣೆಯಲ್ಲಿ ವಿನಾಯತಿ ನೀಡಲಾಗಿದೆ.

ಅವಧಿ 3ರಿಂದ 7 ವರ್ಷಗಳಿಗೆ ವಿಸ್ತರಣೆ
ಪರಸ್ಪರ ವರ್ಗಾವಣೆಯಲ್ಲಿ ಇಲ್ಲಿಯವರೆಗೂ ಇದ್ದ ಮೂರು ವರ್ಷಗಳ ಅವಧಿಯನ್ನು ಕನಿಷ್ಠ 7 ವರ್ಷಕ್ಕೆ ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗಾವಣೆಗಳು ಮುಕ್ತಾಯಗೊಂಡ ಬಳಿಕ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಯಾವುದೇ ಶಿಕ್ಷಕರು ಆರಿಸಿಕೊಳ್ಳದಿದ್ದರೆ, ವಿದ್ಯಾರ್ಥಿ ಶಿಕ್ಷಕರ ಅನುಪಾತದ ಆಧಾರ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ತುಂಬಲಾಗುತ್ತದೆ. ಜ್ಯೇಷ್ಠತೆಯ ಅನುಕ್ರಮ ಘಟಕದೊಳಗೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಶಿಕ್ಷಕರನ್ನು ವರ್ಗಾಯಿಸಬಹುದು. ಶಿಕ್ಷಕರ ವಿದ್ಯಾರ್ಥಿ ಅನುಪಾತದ ಆಧಾರದಲ್ಲಿ ಹೆಚ್ಚುವರಿ ಶಿಕ್ಷಕರಾಗಿ ಪರಿಗಣಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next