Advertisement

ಶಿಕ್ಷಕರ ವರ್ಗಾವಣೆ ಡೌಟು, ಕಾಯ್ದೆ ತಿದ್ದುಪಡಿ ಪಕ್ಕಾ!

06:00 AM Nov 15, 2018 | Team Udayavani |

ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಮೊದಲೇ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. 

Advertisement

ಇದರಿಂದಾಗಿ ಪ್ರಸಕ್ತ ಸಾಲಿನಲ್ಲೂ ಶಾಲಾ ಶಿಕ್ಷಕರ ವರ್ಗಾವಣೆ ಆಸೆಗೆ ಸರ್ಕಾರ ಎಳ್ಳು ನೀರು ಬಿಡುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ, ಲಕ್ಷಕ್ಕೂ ಅಧಿಕ ಶಿಕ್ಷಕರು ಪರದಾಡುವಂತಾಗಿದೆ.

ವರ್ಗಾವಣೆ ವಿಧೇಯಕಕ್ಕೆ ತಿದ್ದುಪಡಿ ತರಲು ಬೇಕಾದ ಎಲ್ಲ ಸಿದ್ಧತೆ ಸರ್ಕಾರ ಮಾಡಿಕೊಳ್ಳುತ್ತಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದು ತಿದ್ದುಪಡಿ ಕಾಯ್ದೆ ಜಾರಿಗೆ ತಂದರೆ, ಈಗಾಗಲೇ ಅರ್ಜಿ ಸಲ್ಲಿಸಿದ 79 ಸಾವಿರ ಶಿಕ್ಷಕರಲ್ಲಿ ಅನೇಕರಿಗೆ ಅನ್ಯಾಯವಾಗಲಿದೆ. ಹೊಸ ನಿಯಮದಡಿ ಹೊಸದಾಗಿಯೇ ಅರ್ಜಿ ಆಹ್ವಾನಿಸಲಾಗುತ್ತದೆ. ಈಗಾಗಲೇ ನಡೆದಿರುವ ಪ್ರಕ್ರಿಯೆ ಹೊಸ ನಿಯಮದಡಿ ಮುಂದುವರಿಸಲು ಸಾಧ್ಯವಿಲ್ಲ. ತಿದ್ದುಪಡಿ ತಂದೂ ಹಳೇ ನಿಯಮದಲ್ಲಿ ವರ್ಗಾವಣೆ ಮಾಡಿದರೂ ಹಲವು ಶಿಕ್ಷಕರಿಗೆ ಅನ್ಯಾಯವಾಗಲಿದೆ. ಒಟ್ಟಿನಲ್ಲಿ ತಿದ್ದುಪಡಿ ಮಾಡಿದರೆ ಅರ್ಜಿ ಹೊಸದಾಗಿಯೇ ಕರೆಯಬೇಕಾಗುತ್ತದೆ.

ಕೋರಿಕೆ ವರ್ಗಾವಣೆಯಲ್ಲಿ ಅಂತರ ಘಟಕದ ಮಿತಿ ಶೇ.3ಕ್ಕೆ ಸೀಮಿತವಾಗಿದ್ದು, ಅದನ್ನು ಹೆಚ್ಚಿಸುವ ಸಾಧ್ಯತೆ ಇದೆ. ಕಡ್ಡಾಯ ವರ್ಗಾವಣೆಯಡಿ ಶಿಕ್ಷಕರು ವೈದ್ಯಕೀಯ ಪ್ರಮಾಣ ಪತ್ರ ಅಥವಾ ದಂಪತಿ ಶಿಕ್ಷಕರು ನಿಯಮದಡಿ ವಿನಾಯ್ತಿ ನೀಡಲು ಅವಕಾಶ ಮಾಡಿಕೊಡುವ ಸಾಧ್ಯತೆಯೂ ಇದೆ. ಪರಸ್ಪರ ವರ್ಗಾವಣೆಗೆ ವಿಧಿಸಿದ್ದ ಷರತ್ತುಗಳ ಪೈಕಿ ಕೆಲವೊಂದರಲ್ಲಿ ವಿನಾಯ್ತಿ ಸೇರಿ ಹಲವು ಬದಲಾವಣೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

2 ವರ್ಷವೇ ಕಳೆಯಿತು:
ಸಸತ ಎರಡು ವರ್ಷಗಳಿಂದ ವರ್ಗಾವಣೆ ನಡೆದಿಲ್ಲ. ಪ್ರಸಕ್ತ ಸಾಲಿನಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿ, ಅರ್ಜಿ ಆಹ್ವಾನಿಸಿ ವೇಳಾಪಟ್ಟಿ ಪ್ರಕಟಿಸಿದ್ದರೂ, ವರ್ಗಾವಣೆ ಕೌನ್ಸೆಲಿಂಗ್‌ ನಡೆಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ 79 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಇನ್ನೇನು ವರ್ಗಾವಣೆ ಕೌನ್ಸೆಲಿಂಗ್‌ ನಡೆಯಬೇಕು ಎನ್ನುವಷ್ಟರಲ್ಲಿ ತಾಂತ್ರಿಕ ಕಾರಣದ ನೆಪವೊಡ್ಡಿ ಸರ್ಕಾರವೇ ವರ್ಗಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ.

Advertisement

2017ರಲ್ಲಿ ತಿದ್ದುಪಡಿ ಮಾಡಿ ಹೊರಡಿಸಿದ್ದ ವರ್ಗಾವಣೆ ಕಾಯ್ದೆಗೆ ಮತ್ತೀಗ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಈ ವಿಚಾರವಾಗಿ ಕಾನೂನು ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಿದ್ದುಪಡಿಯ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ) ಕಾಯ್ದೆ 2015ಕ್ಕೆ 2017ರಲ್ಲಿ ಅಗತ್ಯ ತಿದ್ದುಪಡಿ ತಂದು, ವರ್ಗಾವಣೆ ಪ್ರಮಾಣ ಹೆಚ್ಚಿಸಲಾಗಿತ್ತು. ಜತೆಗೆ ನಗರ ಪ್ರದೇಶದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚುಕಾಲ ಸೇವೆಯಲ್ಲಿದ್ದವರನ್ನು ಶೇಕಡಾವಾರು ಲೆಕ್ಕಾಚಾರದ ಆಧಾರದಲ್ಲಿ ಕಡ್ಡಾಯ ವರ್ಗಾವಣೆ ಮಾಡಲು ತೀರ್ಮಾನಿಸಿ, ತಿದ್ದುಪಡಿ ಮಾಡಲಾಗಿತ್ತು. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದು, ರಾಜ್ಯಪತ್ರದಲ್ಲೂ ಹೊರಡಿಸಲಾಗಿತ್ತು.

ಈಗ ಸಮ್ಮಿಶ್ರ ಸರ್ಕಾರ ಮತ್ತೇ ಇದೇ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ತರಲು ಮುಂದಾಗಿದೆ. ತಾಂತ್ರಿಕ ಸಮಸ್ಯೆಯ ಹೆಸರಿನಲ್ಲಿ ಕಡ್ಡಾಯ ವರ್ಗಾವಣೆಯಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ ಮಾಡುವ ಸಾಧ್ಯತೆಯೂ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಹೈ.ಕ.ಭಾಗಕ್ಕೆ ಅನುಕೂಲ:
ಘಟಕವೊಂದಕ್ಕೆ (ಜಿಲ್ಲೆ ಅಥವಾ ವಿಭಾಗ) ಮಂಜೂರಾದ ಮೂಲ ಹುದ್ದೆಗಳಲ್ಲಿ ಶೇ.20ರಷ್ಟು ಖಾಲಿ ಇದ್ದರೆ ಅಂತಹ ಘಟಕಕ್ಕೆ ವರ್ಗಾವಣೆ ಪಡೆಯಬಹುದೇ ಹೊರತು ಅಲ್ಲಿರುವ ಶಿಕ್ಷಕರು ಬೇರೆ ಘಟಕಕ್ಕೆ ವರ್ಗಾವಣೆ ಹೊಂದಲು ಸಾಧ್ಯವಿಲ್ಲ. ಬಳ್ಳಾರಿ, ಬೀದರ್‌, ಕಲಬುರಗಿ, ಕೊಪ್ಪಳ ಸೇರಿ ಹೈದರಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳ ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಹೊಂದಲು ಈಗ ಇರುವ ನಿಯಮದಲ್ಲಿ ಸಾಧ್ಯವಿಲ್ಲ. ಕಾರಣ ಈ ಎಲ್ಲ ಜಿಲ್ಲೆಗಲ್ಲಿ ಖಾಲಿ ಹುದ್ದೆಗಳ ಪ್ರಮಾಣ ಶೇ.20ಕ್ಕಿಂತ ಹೆಚ್ಚಿದೆ. ಇದಕ್ಕೆ ತಿದ್ದುಪಡಿ ತಂದಲ್ಲಿ ಆ ಭಾಗದ ಸಾಕಷ್ಟು ಶಿಕ್ಷಕರಿಗೆ ಅನುಕೂಲ ಆಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕನಿಷ್ಠ ಸೇವಾಧಿಯ ಸಮಸ್ಯೆ
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಶಿಕ್ಷಕರಿದ್ದಾರೆ. ಕನಿಷ್ಠ ಸೇವಾವಧಿ ಪೂರೈಸಿದ ಎಲ್ಲ ಶಿಕ್ಷಕರಿಗೂ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು. ಸೇವಾ ಜ್ಯೇಷ್ಠತೆ ಆಧಾರದಲ್ಲಿ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಲಾಗುತ್ತದೆ. ಆದರೆ, ಕನಿಷ್ಠ ಸೇವಾವಧಿಯ ಹೈದರಾಬಾದ್‌ ಕರ್ನಾಟಕ ಭಾಗದ ಶಿಕ್ಷಕರಿಗೆ ಹಾಗೂ ಉಳಿದ ಜಿಲ್ಲೆಗಳ ಶಿಕ್ಷಕರಿಗೆ ವಿಭಿನ್ನವಾಗಿದೆ. ಕೆಲವು ಶಿಕ್ಷಕರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಸೇವಾವಧಿ 3 ವರ್ಷ ಇದ್ದರೆ, ಇನ್ನು ಕೆಲವರಿಗೆ ಐದು ವರ್ಷ, ಮತ್ತೆ ಕೆಲವರಿಗೆ 6 ವರ್ಷ ಇದೆ. ಆದರೆ, ಹೈ.ಕ ಭಾಗದ ಶಿಕ್ಷಕರಿಗೆ 10 ವರ್ಷ ಕನಿಷ್ಠ ಸೇವಾವಧಿ ನಿಗದಿ ಮಾಡಿ 2017ರಲ್ಲಿ ತಿದ್ದುಪಡಿ ತರಲಾಗಿದೆ. ಇದನ್ನು ಬದಲಿಸಬೇಕು ಎಂಬುದು ಆ ಭಾಗದ ಶಿಕ್ಷಕರ ಒತ್ತಾಯವಾಗಿದೆ.

ವರ್ಗಾವಣೆ ವಿಧೇಯಕ ತಿದ್ದುಪಡಿ ಚರ್ಚೆ ನಡೆಸುತ್ತಿದ್ದೇವೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕರೆ ಮುಂದಿನ ಶೈಕ್ಷಣಿಕ ವರ್ಷದಿಂದ ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದು ವರ್ಗಾವಣೆ ಪ್ರಕ್ರಿಯೆ ನಡೆಸಲಿದ್ದೇವೆ.
– ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

ವರ್ಗಾವಣೆಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ಪ್ರಕ್ರಿಯೆಗೆ ಮರು ಚಾಲನೆ ನೀಡಬೇಕು. ತಾಂತ್ರಿಕ ದೋಷಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ.
– ವಿ.ಎಂ.ನಾರಾಯಣ ಸ್ವಾಮಿ, ಅಧ್ಯಕ್ಷ, ಸರ್ಕಾರಿ ಶಾಲಾ ಶಿಕ್ಷಕರ ಸಂಘ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next