Advertisement

ಬೆಂಗ್ರೆ ಕಸ್ಬ ಶಾಲೆ : ಶಿಕ್ಷಕರ ಕೊರತೆ-ಸೋರುತ್ತಿದೆ ತರಗತಿ ಕೊಠಡಿ

08:14 PM Sep 12, 2021 | Team Udayavani |

ಮಹಾನಗರ: ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವಂತೆ ಸರಕಾರ ಸೂಚನೆ ನೀಡಿದರೂ ಸರಕಾರಿ ಶಾಲೆಯಲ್ಲಿ ಮೂಲ ವ್ಯವಸ್ಥೆಗಳನ್ನು ಮಾಡದಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿ ಮಂಗಳೂರಿನ ಬೆಂಗ್ರೆ ಕಸ್ಬ ದ ದ.ಕ ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆ!

Advertisement

ಮಂಗಳೂರು ಉತ್ತರ ಶಿಕ್ಷಣ ಇಲಾಖೆ ವ್ಯಾಪ್ತಿಯ ಈ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 101ರಷ್ಟು ಏರಿಕೆಯಾಗಿದೆ. ಆದರೆ ಶಿಕ್ಷಕರ ಕೊರತೆ, ಸೋರುತ್ತಿರುವ ಕೊಠಡಿಗಳು ಹಾಗೂ ಪೀಠೊಪಕರಣದ ಕೊರತೆಯಿಂದಾಗಿ ಮಕ್ಕಳು ಶಾಲೆಗೆ ಬರುವಾಗ ಇಲ್ಲಿ ಸಮಸ್ಯೆ ಎದುರಾಗಲಿದೆ.

1958ರಲ್ಲಿ ಆರಂಭವಾದ ಶಾಲೆಯಲ್ಲಿ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. 1.62 ಎಕ್ರೆ ವ್ಯಾಪ್ತಿಯನ್ನು ಈ ಶಾಲೆ ಹೊಂದಿದೆ. ಕಸ್ಬಬೆಂಗ್ರೆ ವ್ಯಾಪ್ತಿಯ ಮೀನುಗಾರರು, ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. 1ರಿಂದ 7ನೇ ತರಗತಿ ಇರುವ ಶಾಲೆಯಲ್ಲಿ ಕಳೆದ ವರ್ಷ 438 ಮಕ್ಕಳಿದ್ದರು. ಆದರೆ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ 539ಕ್ಕೆ ಏರಿದೆ. ಇನ್ನೂ ದಾಖಲಾತಿ ನಡೆಯುತ್ತಿರುವುದರಿಂದ ಈ ಸಂಖ್ಯೆ ಮತ್ತೆ ಏರಿಕೆಯಾಗಲಿದೆ.

ಇಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಕೂಡ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ. ಈ ಬಾರಿ 1ನೇ ತರಗತಿಗೆ 70, 2ನೇ ತರಗತಿಗೆ 65 ಹಾಗೂ 3ನೇ ತರಗತಿಗೆ 65 ಮಕ್ಕಳು ದಾಖಲಾಗಿದ್ದಾರೆ. ಇಲ್ಲಿ ಎಲ್‌ಕೆಜಿ ಶಿಕ್ಷಣವೂ ಆರಂಭವಾಗಿದ್ದು, 42 ಹಾಗೂ ಯುಕೆಜಿಯಲ್ಲಿ 64 ಪುಟಾಣಿಗಳಿದ್ದಾರೆ. 2 ಅಂಗನವಾಡಿ ಕೇಂದ್ರವು ಶಾಲಾ ವಠಾರದಲ್ಲಿದ್ದು 65 ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಕೊರತೆಗಳ ಪಟ್ಟಿ ದೊಡ್ಡದಿದೆ!:

Advertisement

ಈ ಶಾಲೆಯಲ್ಲಿ 18 ತರಗತಿ ಕೊಠಡಿಗಳಿವೆ. ಆದರೆ ಬಹುತೇಕ ಎಲ್ಲ ಕೊಠಡಿಗಳು ಮಳೆ ಬರುವಾಗ ಸೋರುತ್ತಿದೆ. ನಲಿ-ಕಲಿ ತರಗತಿ ಕೊಠಡಿ, ಕಂಪ್ಯೂಟರ್‌ ತರಬೇತಿಯ ಕೊಠಡಿ, ಎಲ್‌ಕೆಜಿ, ಯುಕೆಜಿ ಇರುವ ಕಟ್ಟಡದಲ್ಲಿ ಸೋರುವಿಕೆಯ ಬಹು ಸಮಸ್ಯೆಯಿದೆ. ಜತೆಗೆ ಪೀಠೊಪಕರಣ ಕೂಡ ಸಮರ್ಪಕವಾಗಿ ಇಲ್ಲಿಲ್ಲ. ಡೆಸ್ಕ್, ಬೆಂಚ್‌ಗಳ ಕೊರತೆಯಿದೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲವಾದರೂ, ಶಾಲಾ ಕಟ್ಟಡ ದುರಸ್ತಿ ಮಾಡಲೇಬೇಕಾದ ಅನಿವಾರ್ಯವಿದೆ. ಹೆಚ್ಚುವರಿಯಾಗಿ 2 ಹೊಸ ಕೊಠಡಿಗೆ ಮಂಜೂರಾತಿ ದೊರಕಿದ್ದರೂ ಕೆಲಸ ಆರಂಭವಾಗಿಲ್ಲ. ಒಂದುವೇಳೆ ತರಗತಿ ತತ್‌ಕ್ಷಣವೇ ಆರಂಭವಾದರೆ ತರಗತಿ ಕೊಠಡಿ ಹೊಂದಿಸುವುದೇ ದೊಡ್ಡ ಸವಾಲಿನ ಸಂಗತಿ.

ಕಸ್ಬಬೆಂಗ್ರೆಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿದೆ. ಹೀಗಾಗಿ ಆನ್‌ಲೈನ್‌ ತರಗತಿಗೆ ಸಮಸ್ಯೆ ಯಾಗುತ್ತಿದೆ. ಇದರ ಜತೆಗೆ ಶಾಲೆಗೆ ಬರುವ ಬಹುತೇಕ ಮಕ್ಕಳ ಮನೆಯಲ್ಲಿ ಟಿವಿ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳಿಗೆ ಟಿವಿ ಪಾಠವೂ ಸಿಗುತ್ತಿಲ್ಲ. ಇದಕ್ಕಾಗಿ ನಾಲ್ಕು ಶಿಕ್ಷಕಿಯರು ನಿಯಮಿತವಾಗಿ ಮಕ್ಕಳನ್ನು ಬೇರೆ ಬೇರೆ ಸಮಯದಲ್ಲಿ ಶಾಲೆಗೆ ಕರೆದು ಪಾಠ ಮಾಡುತ್ತಿದ್ದಾರೆ. ಜತೆಗೆ ಶಾಲೆಯಲ್ಲಿ ಶಿಕ್ಷಕಿಯರ ಮೊಬೈಲ್‌ನಲ್ಲಿಯೇ ಮಾಹಿತಿ ನೀಡುತ್ತಿದ್ದಾರೆ.

539 ವಿದ್ಯಾರ್ಥಿಗಳಿಗೆ  4 ಶಿಕ್ಷಕಿಯರು! : ಬೆಂಗ್ರೆ ಕಸ್ಬ ಶಾಲೆಯಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 539 ದಾಟಿದ್ದರೂ ಶಿಕ್ಷಕರ ಸಂಖ್ಯೆ ಮಾತ್ರ 4 ದಾಟಿಲ್ಲ. 14 ಹುದ್ದೆ ಮಂಜೂರಾಗಿದ್ದರೂ 10 ಹುದ್ದೆ ಖಾಲಿಯೇ ಇದೆ. ಸಾಮಾನ್ಯವಾಗಿ 30 ಮಕ್ಕಳಿಗೆ ಒಂದು ಶಿಕ್ಷಕರು ಇರಬೇಕಾದರೂ ಇಲ್ಲಿ ನೂರು ಮಕ್ಕಳಿಗೆ ಒಬ್ಬರು ಶಿಕ್ಷಕರು ಕೂಡ ಇಲ್ಲ. 2016ರಿಂದ ಮುಖ್ಯ ಶಿಕ್ಷಕ ಹುದ್ದೆ, 2019ರಿಂದ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ಖಾಲಿಯಿದೆ. ಇಲ್ಲಿ ಭೌತಿಕ ತರಗತಿ ಆರಂಭವಾದ ಬಳಿಕವೂ ಹೆಚ್ಚುವರಿ ಶಿಕ್ಷಕರ ನೇಮಕವಾಗದಿದ್ದರೆ ಶಿಕ್ಷಣದ ಗುಣಮಟ್ಟಕ್ಕೆ ಬಹುದೊಡ್ಡ ಹೊಡೆತ ಬೀಳಬಹುದು!

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ತರಗತಿ ಕೊಠಡಿಗಳ ಸುಧಾರಣೆಯಾಗಬೇಕಿದೆ ಹಾಗೂ ಶಿಕ್ಷಕರ ಕೊರತೆ ನಿವಾರಣೆಯಾಗಬೇಕಿದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಶಾಲೆಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ದಾನಿಗಳು ನೆರವಾದರೆ ಉಪಯೋಗವಾಗುತ್ತಿತ್ತು. ಗ್ರೇಸಿ ಜುಲಿಯಾನ ಮಥಾಯಸ್‌,  ಪ್ರಭಾರ ಮುಖ್ಯ ಶಿಕ್ಷಕರು.

 

-ದಿನೇಶ್‌ ಇರಾ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next