Advertisement

ನೀಟ್‌ ಮಾದರಿಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ

09:30 PM May 05, 2022 | Team Udayavani |

ಬೆಂಗಳೂರು:  ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆಯು, 6-8ನೇ ತರಗತಿಗಳ ಬೋಧನೆಗಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ(ಸಿಇಟಿ)ಗೆ ಭದ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ.

Advertisement

ಪರೀಕ್ಷೆಯಲ್ಲಿ ತಾಂತ್ರಿಕವಾಗಿ ಹೆಚ್ಚಿನ ಭದ್ರತೆ ಕೈಗೊಳ್ಳಲು ಆದ್ಯತೆ ನೀಡುತ್ತಿದ್ದು, ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮಾದರಿಯಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು. ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಹಾಗೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುವುದು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಗುರುವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಿದ್ದಾರೆ. ಇದರ ಜತೆಗೆ ಮೇ 10ರ ಅನಂತರ ರಾಜ್ಯ ಪೊಲೀಸ್‌ ಮಹಾನಿರ್ದೇಶಕರನ್ನು ಒಳಗೊಂಡಂತೆ ಪೊಲೀಸ್‌ ಅಧಿಕಾರಿಗಳೊಂದಿಗೂ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ನೀಟ್‌ ಮಾದರಿಯಲ್ಲಿ ಪರೀಕ್ಷೆ:

Advertisement

ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ನಕಲು ಮಾಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ವೇಳೆ ಲೋಹಗಳನ್ನು ಧರಿಸದಂತೆ ಸೂಚನೆ ನೀಡುವ ಸಾಧ್ಯತೆಗಳಿವೆ. ನೀಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ನಿಗದಿ ಮಾಡಲಾಗಿದೆ. ಅದೇ ನಿಯಮವನ್ನು ಶಿಕ್ಷಕರ ನೇಮಕಾತಿ ಪರೀಕ್ಷೆಗೂ ಅಳವಡಿಸಿಕೊಳ್ಳಬಹುದೇ ಎಂಬ ಬಗ್ಗೆ ಚರ್ಚಿಸಲಾಗಿದೆ.

ನೀಟ್‌ ಪರೀಕ್ಷೆಗೆ ಅಭ್ಯರ್ಥಿಗಳು ಸರಳವಾದ ಉಡುಪುಗಳನ್ನು ಧರಿಸಿ ಹಾಜರಾಗಬೇಕು. ಹುಡುಗರು ಅರ್ಧ ತೋಳಿನ ಅಂಗಿ ಮತ್ತು ಪ್ಯಾಂಟ್‌ ಹಾಗೂ ವಿದ್ಯಾರ್ಥಿನಿಯರು ಅರ್ಧ ತೋಳಿನ ಟಾಪ್‌ ಮತ್ತು ಸಲ್ವಾರ್‌ ತೊಡಬೇಕು. ಉಡುಪಿನಲ್ಲಿ ದೊಡ್ಡ ಗುಂಡಿಗಳು, ಬ್ಯಾಡ್ಜ್ ಅಥವಾ ಪದಕಗಳು ಇರಬಾರದು. ಶೂಗಳನ್ನು ಧರಿಸುವಂತಿಲ್ಲ. ಬದಲಿಗೆ ಚಪ್ಪಲಿಗಳನ್ನು ಧರಿಸಿರಬೇಕು. ವಿದ್ಯಾರ್ಥಿನಿಯರು ಹೈ ಹೀಲ್ಡ… ಬದಲಿಗೆ ಸಾಮಾನ್ಯ ಸ್ಯಾಂಡಲ್‌ಗ‌ಳನ್ನು ಧರಿಸಬೇಕು.

ಚಿನ್ನ, ಬೆಳ್ಳಿ ಸಹಿತ ಯಾವುದೇ ರೀತಿಯ ಕಿವಿಯೋಲೆ, ಬ್ರಾಸ್‌ಲೈಟ್‌, ಉಂಗುರಗಳು, ವಾಚ್‌ ಸೇರಿದಂತೆ ಯಾವುದೇ ಆಭರಣಗಳನ್ನು ತೊಡುವಂತಿಲ್ಲ. ಇದೇ ನಿಯಮವನ್ನು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ.

ಮೇ 21-22ರಂದು ಪರೀಕ್ಷೆ:

15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮೇ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. 1.06 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ. ವಾಚ್‌ ಹಾಗೂ ಆಭರಣ ತೊಡದಂತೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. – ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next