ಬೆಂಗಳೂರು: 2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ 12 ಶಿಕ್ಷಕರಲ್ಲಿ 7 ಜನರು 2019ರಲ್ಲಿ ಯಡಿಯೂರಪ್ಪ ಹಾಗೂ ಸುರೇಶ್ ಕುಮಾರ್ ಅವಧಿಯಲ್ಲಿ ನೇಮಕಗೊಂಡ ವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ನೇಮಕಾತಿ ಆಗಿರುವವರ ಪೈಕಿ ಇಬ್ಬರು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಆದೇಶ ಪತ್ರ ಪಡೆದಿದ್ದಾರೆ. 2012-13ರಲ್ಲಿ ಶಿಕ್ಷಕರ ಹುದ್ದೆಗಳ ಬ್ಯಾಚಿನಲ್ಲೂ ಒಬ್ಟಾತ ಸೇರಿಕೊಂಡಿದ್ದಾನೆ ಎಂಬ ಮಾಹಿತಿ ಇದೆ. 2015ರಲ್ಲಿ ಮತ್ತೊಮ್ಮೆ ಹುದ್ದೆ ಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ನಡೆದಿತ್ತು. ಈ ಅವಧಿಗಳಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಿಮ್ಮನೆ ರತ್ನಾಕರ ಶಿಕ್ಷಣ ಸಚಿವರಾಗಿದ್ದರು ಎಂದು ಹೇಳಿದ್ದಾರೆ.
ನೇಮಕಾತಿ ಪಟ್ಟಿಯು ಡಿಡಿಪಿಐ ಮತ್ತು ಜಂಟಿ ನಿರ್ದೇಶಕರಿಂದ ಅನುಮೋದನೆಗೊಳ್ಳುತ್ತದೆ. ನೇರ ನೇಮಕಾತಿಗಳಾದ್ದರಿಂದ ಇತರರ ಹಸ್ತಕ್ಷೇಪ ಇರುವುದಿಲ್ಲ. ಯಾರದೇ ಅವಧಿಯಲ್ಲಿ ನಡೆದಿದ್ದರೂ ಈ ರೀತಿಯ ದ್ರೋಹ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಯಾದವರ ಮೇಲೆ ಕಠಿನ ಕ್ರಮ ಜರಗಿಸಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿ ಕೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ. ತನಿಖೆ ನಡೆಸುತ್ತಿರುವ ಸಂಸ್ಥೆಯಾದರೂ ಈ ಕುರಿತು ಕಾಲ ಕಾಲಕ್ಕೆ ಮಾಧ್ಯಮಗಳಿಗೆ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿನಾ ಕಾರಣ ನನ್ನ ಹೆಸರು ಪ್ರಸ್ತಾಪ: ಸುರೇಶ್
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣವು ನನ್ನ ಅವಧಿಯಲ್ಲಿ ನಡೆದಿಲ್ಲ. ವಿನಾಕಾರಣ ನನ್ನ ಹೆಸರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಹಗರಣ ನಡೆದಿದ್ದು, ಆಗ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸುರೇಶ್ ಕುಮಾರ್, ನೇಮಕಾತಿ ಪ್ರಾಧಿಕಾರ ಸಂಪೂರ್ಣ ಪ್ರಕ್ರಿಯೆ ನಡೆಸಲಿದೆ.
ಸಚಿವರವರೆಗೆ ಬಾರದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಡೆಸುವ ಪ್ರಕ್ರಿಯೆ ಇದಾಗಿದೆ. ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ನನ್ನ ಪಾತ್ರವಿಲ್ಲ. 2019 ಆ.19ರಂದು ನನಗೆ ಶಿಕ್ಷಣ ಖಾತೆ ನೀಡಲಾಗಿತ್ತು. ಶಿಕ್ಷಣ ಸಚಿವನಾಗಿ ಆ ಖಾತೆಯ ಅಧಿಕಾರ ವಹಿಸುವ ಮುನ್ನ ಎಲ್ಲ ಮುಗಿದಿದೆ. ಹೀಗಾಗಿ ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ.