ವಿಜಯಪುರ: ಅನುದಾನ ರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಹಾಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂನೌಕರರ ಒಕ್ಕೂಟ ಜಿಲ್ಲಾ ಘಟಕ ಪದಾಧಿಕಾರಿಗಳು ಜಿಲ್ಲಾ ಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಎಸ್.ಡಿ. ಕುಮಾನಿ ಮಾತನಾಡಿ, ಕೋವಿಡ್-19 ಕಾರಣದಿಂದಾಗಿ ಶಾಲೆಗಳು ಸಂಪೂರ್ಣ ಬಂದಾಗಿದ್ದು, ಅನುದಾನ ರಹಿತ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ತುಂಬಾ ಸಂಕಷ್ಟದಲ್ಲಿದ್ದಾರೆ. 4-5 ತಿಂಗಳಿಂದ ಅವರಿಗೆ ವೇತನವಿಲ್ಲ ಹೀಗಾಗಿ ಈ ನೌಕರರ ಕುಟುಂಬಗಳು ಬೀದಿಪಾಲಾಗಿವೆ ಎಂದರು.
ಈ ಶಿಕ್ಷಕರ ಸಂಕಷ್ಟಕ್ಕೆ ಇದುವರೆಗೂ ಸರಕಾರಯಾವುದೇ ಸಹಾಯ ಮಾಡಿಲ್ಲ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮರಣ, ರಾಜೀನಾಮೆ ಮತ್ತು ನಿವೃತ್ತಿಯಿಂದ ಶಿಕ್ಷಕ, ಶಿಕ್ಷಕೇತರ ಹುದ್ದೆಗಳು ಖಾಲಿಯಾಗಿವೆ. 2014ರಿಂದ ಇಲ್ಲಿವರೆಗೆ ಈ ಹುದ್ದೆಗಳನ್ನು ತುಂಬಿಕೊಳ್ಳಲು ಸರಕಾರ ಅನುಮತಿ ನೀಡಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಲು ಶಿಕ್ಷಕರ ಕೊರತೆ ಉಂಟಾಗಿದೆ. ಸರಕಾರ ಈ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಮಿತವ್ಯಯ ಸಡಿಲಗೊಳಿಸಬಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಗೌರವಾಧ್ಯಕ್ಷ ಸಹಜಾನಂದ ದಂದರಗಿ ಮಾತನಾಡಿ, 2006ರಲ್ಲಿ ನೇಮಕಾತಿ ಹೊಂದಿದ ಶಿಕ್ಷಕರಿಗೆ ಹೊಸ ಯೋಜನೆಗಳ ಪ್ರಕಾರ ಪಿಂಚಣಿ ನಿವೃತ್ತಿಯ ನಂತರ ಪಿಂಚಣಿ ನೀಡಲಾಗುತ್ತಿದೆ.ಈ ಕಾರಣದಿಂದಾಗಿ ನೌಕರರಿಗೆ ತುಂಬಾ ಅನ್ಯಾಯವಾಗಿದೆ. ಕೂಡಲೇ ಸರ್ಕಾರ ಹಳೆಯ ಮಾದರಿಯ ಪಿಂಚಣಿ ನೀಡಬೇಕು ಎಂದರು.
ಸರಕಾರ 1995ರ ನಂತರದ ಶಾಲೆ, ಕಾಲೇಜುಗಳಿಗೆ ಅನುದಾನ ನೀಡಬೇಕು. ರಾಜ್ಯ ಸರಕಾರಿ ನೌಕರರಿಗೆ 7 ಸ್ಥಗಿತ ವೇತನ ಬಡ್ತಿ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಅನುದಾನಿತ ಶಾಲಾ ನೌಕರರಿಗೆ ವಿಸ್ತರಿಸಬೇಕು ಹಾಗೂ ಕಾಲ್ಪನಿಕ ವೇತನ ಬಡ್ತಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆ.ಜಿ. ಕುಲಗೊಂಡ, ಮುರುಗೇಶ ಹೊಕ್ರಾಣಿ, ಎಂ.ಬಿ. ಬಿರಾದಾರ, ಚಂದ್ರಶೇಖರ ಲೋಣಿ, ಶರಣು ಕಡಬಿ, ಸಿದ್ದಣ್ಣ ಬಡದಗೋಳ, ಎಸ್.ಆರ್. ಕಟ್ಟಿ, ಈಶ್ವರ ಕಂಬಾರ, ಎಂ.ಕೆ. ಕುಲಕರ್ಣಿ, ಎಸ್.ಎ. ಪುಣೇಕರ, ರಾಜೇಶ ದರಬಾರ, ಮಹಿಬೂಬಖಾದ್ರಿ ಮುಶ್ರೀಫ್, ಎಸ್.ಎ. ಜಿದ್ದಿ, ಎಲ್.ಆರ್. ಅಂಗಡಿ, ಜಿ.ಎಸ್. ಮಕಾನದಾರ, ಕೆ.ಎ. ಚವ್ಹಾಣ ಇದ್ದರು.