ಬೆಂಗಳೂರು : ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಹಠಾತ್ ರದ್ದು ಮಾಡಿದ್ದರಿಂದ ಅನಾನುಕೂಲಕ್ಕೆ ಒಳಗಾದ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಚಿವರ ವಿರುದ್ಧ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಇತ್ತೀಚೆಗೆ ಇಲಾಖೆ ಹೊರಡಿಸಿದ್ದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಸೆ.27 ಮತ್ತು 28ರಂದು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಬೇಕಿತ್ತು. ಇದು ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ನಡೆಯುವುದರಿಂದ ಬಹುತೇಕ ಹೆಚ್ಚುವರಿ ಶಿಕ್ಷಕರು ತಮ್ಮ ವ್ಯಾಪ್ತಿಯ ಡಿಡಿಪಿಐ ಕಚೇರಿಗೆ ಗುರುವಾರ ಬೆಳಗ್ಗೆ ಹೋಗಿದ್ದರು.
ವರ್ಗಾವಣೆ ಪ್ರಕ್ರಿಯೆ ಹಠಾತ್ ರದ್ದಾಗಿರುವ ಬಗ್ಗೆ ಮಾಹಿತಿ ಇಲ್ಲದೇ ಇರುವುದರಿಂದ ಕೌನ್ಸೆಲಿಂಗ್ ಕೇಂದ್ರಕ್ಕೆ ಹೋಗಿದ್ದ ಶಿಕ್ಷಕರಿಗೆ ನಿರಾಸೆಯಾಗಿದೆ. ಇದರಿದ್ದ ಕೋಪಗೊಂಡ ಶಿಕ್ಷಕರು ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ತಡೆಹಿಡಿಯುವಂತೆ ಬುಧವಾರ ಸಂಜೆ ಸಚಿವರು ಸೂಚನೆ ನೀಡಿರುವುದರಿಂದ ಇಲಾಖೆಯ ಅಧಿಕಾರಿಗಳು ಗುರುವಾರ ನಡೆಯಬೇಕಿದ್ದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಿದ್ದರು. ಇದರ ಸಮರ್ಪಕ ಮಾಹಿತಿ ಇಲ್ಲದ ಹಲವು ಶಿಕ್ಷಕರು ಕೌನ್ಸೆಲಿಂಗ್ ಕೇಂದ್ರಕ್ಕೆ ಗುರುವಾರ ಬೆಳಗ್ಗೆಯೇ ಹೋಗಿದ್ದರು. ಕೌನ್ಸೆಲಿಂಗ್ ನಡೆಸದೇ ಇರುವುದಕ್ಕೆ ಉಪನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲಾಖೆಯ ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಿರುವುದು ಸರಿಯಲ್ಲ. ಕೌನ್ಸೆಲಿಂಗ್‌ಗೆ ಗೈರಾದರೆ ಅವಕಾಶ ತಪ್ಪಬಹುದು ಎಂಬ ಉದ್ದೇಶದಿಂದ ನಿಗದಿತ ಸಮಯಕ್ಕೆ ಉಪನಿರ್ದೇಶಕರ ಕಚೇರಿಗೆ ಹೋಗಿದ್ದರು ಕೌನ್ಸೆಲಿಂಗ್ ನಡೆಯಲಿಲ್ಲ. ಸರ್ಕಾರಕ್ಕೆ ಶಿಕ್ಷಕರ ವರ್ಗಾವಣೆ ತಮಾಷೆಯ ವಿಷಯವಾಗಿದೆ ಎಂದು ಶಿಕ್ಷಕರು ಕಿಡಿಕಾರಿದರು.
ಸಚಿವರ ಸೂಚನೆಯಂತೆ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಗುರುವಾರ ಯಾವುದೇ ಕೇಂದ್ರದಲ್ಲೂ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದಿರಲಿಲ್ಲ ಎಂದು ಪ್ರಾಥಮಿಕ ವಿಭಾಗದ ನಿರ್ದೇಶಕ ಬಿ.ಕೆ.ಬಸವರಾಜ ಮಾಹಿತಿ ನೀಡಿದರು.